'ಸಿದ್ದರಾಮ ಉತ್ತಮ ಬರಹಗಾರ'
ಶಹಾಪುರ: ಪ್ರಥಮ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಸಿದ್ದರಾಮ ಹೊನಕಲ ಅವರನ್ನು ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಮಾತನಾಡಿ, ಇಟಗಿ ಹೊನಕಲರವರು ಸಮಾಜ ಮುಖಿ ಬರಹಗಾರರಾಗಿದ್ದಾರೆ ಎಂದರು. ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ಸಿದ್ದರಾಮ ಹೊನಕಲ ಅವರು ವೃತ್ತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೃತ್ತಿ ಮಾತ್ರ ಸಾಹಿತ್ಯದ ಬೆಳವಣಿಗೆಯಲ್ಲಿ ಅವರು ತೊಡಗಿದ್ದಾರೆ. ಅವರ ಪರದೆ ಸರಿಯುವ ಮುನ್ನ ಕಥೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಬಯಲಾಟದ ಸುತ್ತಮುತ್ತ ಕಥೆ ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯಕ್ರಮವಾಗಿದೆ. ಅವರ ನೆಲೆದ ಮರೆಯ ನಿಧಾನ ಕೃತಿಗೆ ಗುಲ್ಬರ್ಗ ವಿವಿ ಚಿನ್ನದ ಪದಕ ನೀಡಿದೆ. ಸಾಹಿತ್ಯ ಲೋಕಕ್ಕೆ 20ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿರುವ ಹೊನಕಲರು ಬಿಸಿಲು ನಾಡಿನ ಭರವಸೆಯ ಬರಹಗಾರರು ಕೂಡ ಹೌದು ಎಂದು ಅಂಗಡಿ ಅಭಿಪ್ರಾಯಪಟ್ಟರು.
ಭಾವೈಕ್ಯತಾ ಪಾದಯಾತ್ರೆ
ಕೆಂಭಾವಿ: ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಮಹಾಸ್ವಾಮಿ ಆ. 21 ರಿಂದ 25ರವರೆಗೆ ವಿಶ್ವಶಾಂತಿಗಾಗಿ ಕರಡಕಲ್ ಗ್ರಾಮದಿಂದ ಸುಕ್ಷೇತ್ರ ನಾಲವಾರ ಗ್ರಾಮಕ್ಕೆ ಭಾವೈಕ್ಯತೆ ಹಾಗೂ ಶೈಕ್ಷಣಿಕ 21ನೇ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ಪೇಠ ಅಮ್ಮಪುರದ ರಾಮಲಿಂಗ ಶರಣರು, ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಪುಣ್ಯಾಶ್ರಮದ ಮಲ್ಲಿಕಾರ್ಜುನ ದೇವರು, ಕೆಂಭಾವಿ ಕೋರಿಸಿದ್ದೆಶ್ವರ ಪುಣ್ಯಾಶ್ರಮದ ಬೀರಪ್ಪ ಶರಣರು ಸೇರಿದಂತೆ ತಾಲೂಕಿನ ಭಜನಾ ಮಂಡಳಿಗಳು, ಡೊಳ್ಳಿನ ಮೇಳಗಳು, ಸಗರನಾಡು ಸೇವಾ ಪ್ರತಿಷ್ಠಾನದ ಕಾರ್ಯಕರ್ತರು, ಕರವೇ ಕಾರ್ಯಕರ್ತರು, ಅನೇಕ ಶಾಲೆಯ ತಂಡಗಳು ಭಾಗವಹಿಸಲಿವೆ.
ನಾಳೆ ದ್ಯಾವಮ್ಮ ಮೂರ್ತಿ ಸ್ಥಾಪನೆ
ಸಿಂಧನೂರು: ತಾಲೂಕಿನ ಹರೇಟನೂರು ಗ್ರಾಮದಲ್ಲಿ ಅ.13ರಂದು ಗ್ರಾಮ ದೇವತೆ ದ್ಯಾವಮ್ಮದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಆ.12ರಂದು ಚಂಡಿ ಹೋಮ ನೆರವೇರಿಸಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮೇಶ ಹರೇಟನೂರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಚಂಡಿಹೋಮದ ವೇಳೆ ದೇವಸ್ಥಾನಕ್ಕೆ ಕಳಸಾರೋಹಣ ಮಾಡಲಾಗುವುದು. ಹಾಗೆಯೇ ಸಾಮೂಹಿಕ ವಿವಾಹವೂ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.