ಪೌರಸೇವಾ ನೌಕರರ ಸಂಘಕ್ಕೆ ಅವಿರೋಧ ಆಯ್ಕೆ
ಸಿಂಧನೂರು: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಸೈಯದ್ ಮೀರ್ ಅಲಿ ಜಾಗೀರದಾರ, ಕಾರ್ಯದರ್ಶಿಯಾಗಿ ವೈ. ಅಮರೇಶ ಅವಿರೋಧವಾಗಿ ಆಯ್ಕೆಯಾದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನೂತನ ಕಾರ್ಯದರ್ಶಿ ವೈ.ಅಮರೇಶ ಪೌರಸೇವಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು, ನೌಕರರ ಸೇವಾ ಭದ್ರತೆ, ಮೂಲಭೂತ ಸರ್ಕಾರಿ ಸೌಲಭ್ಯಗಳು, ನೌಕರರ ಅಭ್ಯುದಯಕ್ಕಾಗಿ ಈ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಪೌರಸೇವಾ ನೌಕರರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ರಾಜ್ಯ ಸೇವಾ ಸಂಘದ ನಿಯಮಾವಳಿಗಳ ಪ್ರಕಾರ ನಡೆದ ಚುನಾವಣೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಮಹ್ಮದ್ ಮಳ್ಳೂರು, ಜಂಟಿಕಾರ್ಯದರ್ಶಿಯಾಗಿ ದಾವಲವಲಿ, ಸಂಘಟನಾ ಕಾರ್ಯದರ್ಶಿಯಾಗಿ ನರಸಪ್ಪ, ಖಜಾಂಚಿಯಾಗಿ ರಾಘವೇಂದ್ರ ಜೋಷಿ, ಜಿಲ್ಲಾ ನಿರ್ದೇಶಕರಾಗಿ ಎಇಇ ಗಂಗಾಧರಗೌಡ, ಎಇನರಸಿಂಹ ಮೂರ್ತಿ, ಶರಣಬಸಯ್ಯ, ಗಂಗಾಧರ ಸ್ವಾಮಿ, ವೆಂಕಟೇಶ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಗರಸಭೆ ಮಾಜಿ ಸದಸ್ಯರಿಂದ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನ
ರಾಯಚೂರು: ನಗರದ ಮಡ್ಡಿಪೇಟೆ ನಿವಾಸಿಯೊಬ್ಬ ವಾರ್ಡಿನ ನಗರಸಭೆಯ ಮಾಜಿ ಸದಸ್ಯರೊಬ್ಬರು ತನಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆಯಿತು.
ನಿವಾಸಿ ಭೀಮಣ್ಣ ಹನುಮಂತಪ್ಪ ಎಂಬಾತ ಆತ್ಮಹತ್ಯೆಗೆ ಯತ್ನಿಸಿದಾತ. ಈತ ನಗರದ ಮಡ್ಡಿಪೇಟೆ ನಿವಾಸಿಯಾಗಿದ್ದು, ಇಲ್ಲಿನ ಖಾಜನಗೌಡರ ಮನೆಯ ಬಳಿಯಿರುವ ತನ್ನ ವಾಸದ ಜೋಪಡಿಯನ್ನು ನಗರಸಭೆ ಮಾಜಿ ಸದಸ್ಯ ಜಿಂದಪ್ಪ ಕಿತ್ತು ಹಾಕುವ ಮೂಲಕ ತೊಂದರೆ ನೀಡಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಭೀಮಣ್ಣನನ್ನು ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ನೇತಾಜಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಿನ್ನೆಲೆ: ನಗರದ ಮಡ್ಡಿಪೇಟೆಯ ನಿವಾಸಿ ಭೀಮಣ್ಣ ಜೋಪಡಿಯೊಂದರಲ್ಲಿ ವಾಸವಾಗಿದ್ದು, ಜೋಪಡಿಯನ್ನು ನಗರಸಭೆ ಮಾಜಿ ಸದಸ್ಯ ಜಿಂದಪ್ಪ(ಶ್ರೀನಿವಾಸ್) ಎಂಬುವವರು ಈಚೆಗೆ ಕೆಡವಿದ್ದಾರೆ. ಅದರಿಂದ ತಾನು ತೊಂದರೆ ಎದುರಿಸುತ್ತಿರುವುದಾಗಿ ಭೀಮಣ್ಣ ಆರೋಪಿಸಿದ್ದಾರೆ.
ನಿರಾಕರಣೆ: ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭೆ ಮಾಜಿ ಸದಸ್ಯ ಜಿಂದಪ್ಪ, ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಭೀಮಣ್ಣನಿಗೆ ಈಗಾಗಲೇ ವಸತಿ ಯೋಜನೆ ಅಡಿ ಮನೆ ಒದಗಿಸಲಾಗಿತ್ತು. ಆದರೆ ಆ ಮನೆಯನ್ನು ಮಾರಾಟ ಮಾಡಿರುವ ಆತ ನಗರಸಭೆಯಿಂದ ಕುಡಿಯುವ ನೀರೊದಗಿಸಲು ನಿರ್ಮಿಸಲುದ್ದೇಶಿಸಿರುವ ನೀರಿನ ತೊಟ್ಟಿ ಸ್ಥಳದಲ್ಲಿಯೇ ಜೋಪಡಿ ನಿರ್ಮಿಸಿಕೊಂಡಿದ್ದರಿಂದ ಜೋಪಡಿ ತೆರವುಗೊಳಿಸಲಾಗಿದೆ ಎಂದು ಹೇಳಿದರು.