ಮಂತ್ರಾಲಯದತ್ತ ಭಕ್ತರ ಮಹಾಪೂರ
-ಜಗನ್ನಾಥ ಆರ್. ದೇಸಾಯಿ
ರಾಯಚೂರು: ಸೀಮಾಂಧ್ರದ ಹೋರಾಟದ ಆತಂಕ ಮರೆಯಾಗಿದೆ. ಎಂದಿನಂತೆಯೇ ಶ್ರೀರಾಘವೇಂದ್ರಸ್ವಾಮಿಗಳ 342ನೇ ಆರಾಧನೆ ಮಹೋತ್ಸವಕ್ಕೆ ಹರಿದುಬರುತ್ತಿದೆ ಭಕ್ತರ ಮಹಾಪೂರ. ಶ್ರೀಮಠ ಸೇರಿದಂತೆ ಗ್ರಾಮಸ್ಥರಲ್ಲಿ ಆರಾಧನಾ ಮಹೋತ್ಸವಕ್ಕೆ ಜನರ ಆಗಮನದ ಬಗ್ಗೆ ಇದ್ದ ಅನುಮಾನ ಕಳೆದು ಸಂಭ್ರಮ ಮನೆ ಮಾಡಿದೆ.
ಮಂತ್ರಾಲಯದಲ್ಲಿ ಬುಧವಾರ ಶ್ರೀರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಸಂದರ್ಭದಲ್ಲಿ ಕಂಡುಬಂದ ದೃಶ್ಯವಿದು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದ ದಿನದಿಂದ ಸೀಮಾಂಧ್ರದಲ್ಲಿ ಗದ್ದಲವೋ ಗದ್ದಲ. ದಿನ ಬೆಳಗಾದರೆ ಪ್ರತಿಭಟನೆ, ಹೋರಾಟ, ಆಕ್ರೋಶದ ಪರಾಕಾಷ್ಠೆ. ಪರಿಣಾಮ ಆಂಧ್ರದ ಧಾರ್ಮಿಕ ಕ್ಷೇತ್ರ ಮಂತ್ರಾಲಯಕ್ಕೆ ಬಸ್ ಸಂಪರ್ಕ ಕಳೆದ ಅನೇಕ ದಿನಗಳಿಂದ ಕಡಿತಗೊಂಡಿತ್ತು. ಕರ್ನಾಟಕದ ಬೆಂಗಳೂರು, ಮೈಸೂರು ಮತ್ತಿತರೆ ಸ್ಥಳಗಳಿಂದ ಶ್ರೀರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಲು ಉತ್ಸುಕರಾಗಿದ್ದವರಿಗೆ ಆತಂಕ ಉಂಟು ಮಾಡಿತ್ತು. ಶ್ರೀಮಠದ ಆಡಳಿತಕ್ಕೂ ಸೀಮಾಂಧ್ರದಲ್ಲಿನ ಹೋರಾಟ ಭಕ್ತರ ಸಂಖ್ಯೆ ಕ್ಷೀಣಿಸುವ ಆತಂಕ ಮೂಡಿಸಿತ್ತು.
ಆದರೆ, ಶ್ರೀರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದ ಮೊದಲ ದಿನವಾದ ಬುಧವಾರ ಕರ್ನಾಟಕದ ಬೆಂಗಳೂರು, ಮೈಸೂರು, ಬೆಳಗಾವಿ, ಬಿಜಾಪುರ ಮತ್ತಿತರೆಡೆಯಿಂದ ಸಾವಿರಾರು ಭಕ್ತರು ಶ್ರೀಮಠಕ್ಕೆ ಬುಧವಾರ ಬೆಳಗ್ಗೆಯೇ ಆಗಮಿಸಿದ್ದರು. ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಶ್ರಿರಾಘವೇಂದ್ರಸ್ವಾಮಿಗಳ ಮೂಲಬೃಂದಾವನದ ದರ್ಶನ ಪಡೆದರು. ಅನೇಕ ಭಕ್ತರು ಸಾಲಾಗಿ ಗಂಟೆಗಟ್ಟಲೆ ನಿಂತು ಶ್ರೀರಾಯರ ದರ್ಶನ ಪಡೆದರೆ ಮತ್ತೆ ಕೆಲವರು ಬೇಡಿದ ವರ ನೀಡುವ ರಾಯರಿಗೆ ಹರಕೆ ಸಲ್ಲಿಸಿದರು.
ಸಂಚಾರ ಆರಂಭ: ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ರಾಯಚೂರಿನಿಂದ ಮಂತ್ರಾಲಯಕ್ಕೆ ಸಾರಿಗೆ ಸಂಸ್ಥೆಯು ಬಸ್ ಸೌಲಭ್ಯ ಕಲ್ಪಿಸಿದ್ದು, ಸೀಮಾಂಧ್ರ ಹೋರಾಟವನ್ನು ಆರಾಧನೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೋರಾಟಗಾರರು ಕೈಬಿಟ್ಟಿದ್ದಾರೆಂದು ಆಂಧ್ರ ಪೊಲೀಸ್ ಮೂಲಗಳು ತಿಳಿಸಿವೆ. ರಾಯರ ಆರಾಧನೆ ಮಹೋತ್ಸವದ ಮೊದಲ ದಿನ 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿದ್ದಾರೆಂದು ಶ್ರೀಮಠದ ಮೂಲಗಳು ತಿಳಿಸಿವೆ.