ಇಂದು ಪೂರ್ವಭಾವಿ ಸಭೆ
ಸಿಂಧನೂರು: ಮಾದಿಗ- ಛಲವಾದಿ ನೌಕರರ ಜಿಲ್ಲಾ ಮಟ್ಟದ ಸಮಾವೇಶ ಜ.12ರಂದು ನಗರದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಡಿ.24ರಂದು ತಾಪಂ ಆವರಣದಲ್ಲಿ ಸಂಜೆ 5ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಮಾದಿಗ ನೌಕರರ ಸಂಘದ ಅಧ್ಯಕ್ಷ ಯಮನಪ್ಪ, ಛಲವಾದಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ದೊಡ್ಡಮನಿ ತಿಳಿಸಿದ್ದಾರೆ. ತಾಪಂ.ನಲ್ಲಿ ನಡೆದ ಪ್ರಮುಖರ ಸಭೆಯ ನಂತರ ಮಾತನಾಡಿ, ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದರಿಂದ ಮಾದಿಗ ಮತ್ತು ಛಲವಾದಿ ನೌಕರರು, ಜಿಲ್ಲೆಯ ಎಲ್ಲ ತಾಲೂಕುಗಳ ಸಂಘದ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಸಲಹೆ- ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ನಗರಸಭೆ ಸಿಇಒ ದುರುಗಪ್ಪ ಹಸಮಕಲ್, ಎಚ್‌ಎಫ್ ಮಸ್ಕಿ, ಎಂ.ವಿಠ್ಠಲ್, ಬಿ.ವೈ. ದಾಸರ, ಚಂದ್ರಶೇಖರ ಖಗ್ಗೋಡ್, ಏಳುಕೋಟೆಪ್ಪ, ಮಂಜುನಾಥ, ಗೊರೇಬಾಳ ಪಿಡಿಒ ಲಿಂಗಪ್ಪ, ಮಾದಿಗ ಸಮಾಜದ ಅಧ್ಯಕ್ಷ ಶೇಖರಪ್ಪ ಗಿಣಿವಾರ, ಅಂಬ್ರುಸ್, ಸುಭಾಷ್ ಫ್ಲಾಂಕ್ಲಿನ್, ಛಲವಾದಿ ಸಮಾಜದ ಅಧ್ಯಕ್ಷ ಹುಲುಗಪ್ಪ ಹಾಗೂ ಇತರರು ಇದ್ದರು.
ಸೇಂದಿ ಮಾರಾಟ; ಬಂಧನ
ರಾಯಚೂರು: ಇಲ್ಲಿನ ಜಲಾಲ್ ನಗರದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಜಲಾಲ್ ನಗರದ ನಿವಾಸಿ ಬಿ. ಹಂಪಯ್ಯ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ 10 ಲೀ. ಸೇಂದಿ, ನಗದು 50 ಜಪ್ತಿ ಮಾಡಿದ್ದಾರೆ. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
30ಕ್ಕೆತಾಪಂ ಸಭೆ
ರಾಯಚೂರು: ಸಿಂಧನೂರು ತಾಲೂಕು ಪಂಚಾಯಿತಿಯ ಕೆಡಿಪಿ ಸಭೆಯನ್ನು ಡಿ.30ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಸಿಂಧನೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆಯು ನಡೆಯಲಿದ್ದು, ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ತಾಪಂ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.