ಕಪಟ ಪೂಜಾರಿಗೆ ಕೈಕೋಳ
ರಾಯಚೂರು: ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಮಹಿಳೆಯರನ್ನು ವಂಚಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ ದೇವದುರ್ಗದ ಬೆಟ್ಟದಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಈ ಕುರಿತು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಎಂ.ಎನ್. ನಾಗರಾಜ್ ಅವರು, ಮಹಿಳೆಯರಿಗೆ ಸಂತಾನ ಭಾಗ್ಯ, ತಾಳಿ ಭಾಗ್ಯ ನೀಡುವುದಾಗಿ ಪುಸಲಾಯಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದುದಲ್ಲದೇ ಅವರ ನಗ್ನ ವಿಡಿಯೋ ತೆಗೆಯುತ್ತಿದ್ದ ಬಗ್ಗೆ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವೀರೇಶ್ ಎಂಬಾತನನ್ನು ಬಂಧಿಸಿದ್ದಾರೆಂದು ತಿಳಿಸಿದರು. ಆಂಧ್ರಪ್ರದೇಶದ ಮಕ್ತಲ್ನ ತನ್ನ ಅಕ್ಕನ ಮನೆಯಲ್ಲಿ ಈತ ಅಡಗಿ ಕುಳಿತಿದ್ದ ವೇಳೆ ಪೊಲೀಸರ ತಂಡವು ದಾಳಿ ಮಾಡಿ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರಾದ ಬಸವರಾಜ್ ಮತ್ತು ನಾಗರಾಜ್ ಎಂಬುವವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು. ಸಿರವಾರ ಪಟ್ಟಣದಲ್ಲಿ ನಡೆದ ನಕಲಿ ಇ-ಸ್ಟ್ಯಾಂಪ್ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಜೂಜು ಅಡ್ಡೆಗಳ ಮೇಲೆ ದಾಳಿ ಮಾಡುವ ಮೂಲಕ ಜೂಜು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.