ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಆರ್‌ಎಸ್ ಸಂಘಟನೆಯಿಂದ ಡಿಸಿ ಹಟಾವೋ

Srinivasa Murthy VN
Updated On : 24 Dec 2013, 10:03 am

ಕ.ಪ್ರ. ವಾರ್ತೆ ರಾಯಚೂರು ಡಿ.23
ರೈತರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ನಡೆಸುತ್ತಿದ್ದ ಹೋರಾಟದ ಮೇಲೆ ಲಾಠಿ ಪ್ರಹಾರ ನಡೆಸಲು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕಾರಣರಾಗಿದ್ದು, ಅವರನ್ನು ಜಿಲ್ಲೆಯಿಂದ ವರ್ಗಾಯಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದಿಂದ ಸೋಮವಾರ ನಗರದಲ್ಲಿ ಜಿಲ್ಲಾಧಿಕಾರಿ ಹಟಾವೋ ಹೋರಾಟ ನಡೆಸಲಾಯಿತು.
ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು, ಕರ್ನಾಟಕ ರೈತ ಸಂಘವು ಜಿಲ್ಲೆಯಲ್ಲಿ ಕಳೆದೆರಡು ದಶಕಗಳಿಂದ ಹೋರಾಟ ಮಾಡುತ್ತಾ ಭೂಹೀನ ಬಡ ರೈತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿದೆ.
ಭೂಹೀನ ಬಡ ರೈತರನ್ನು ಜಿಲ್ಲೆಯಾದ್ಯಂತ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಮುಂದಾಗಿದೆ. ಅದರ ಕ್ರಮ ಖಂಡಿಸಿ ಮತ್ತು ಭೂಹೀನ ಬಡ ರೈತರನ್ನು ಸಾಗುವಳಿ ಭೂಮಿಯಿಂದ ತೆರವುಗೊಳಿಸದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ವೇಳೆ ಜಿಲ್ಲಾಧಿಕಾರಿ ರೈತರ ಮೇಲೆ ಲಾಠಿ ಪ್ರಹಾರಕ್ಕೆ ಕಾರಣರಾಗಿದ್ದಾರೆಂದು ಆರೋಪಿಸಿದರು.
ಅನಗತ್ಯ ಲಾಠಿ ಪ್ರಹಾರ: ಸರ್ಕಾರಿ ಭೂಮಿಯಲ್ಲಿ ಭೂಹೀನ ಬಡ ರೈತರು ಸಾಗುವಳಿ ಮಾಡುತ್ತಿದ್ದು, ಅಂಥವರಿಗೆ ಹಕ್ಕುಪತ್ರ ನೀಡಬೇಕು. ಯರಗೇರಾದ ಪಿಜಿ ಸೆಂಟರ್‌ಗೆ ಅಕ್ರಮವಾಗಿ ರೈತರ ಜಮೀನು ಸ್ವಾಧೀನಕ್ಕೆ ಪಡೆಯಲಾಗಿದೆ. ಆದರೆ ರೈತರಿಗೆ ಪರಿಹಾರ ನೀಡಿಲ್ಲ. ಈ ಮೂಲಕ ಭೂಸ್ವಾಧೀನ ಕಾಯ್ದೆ ಉಲ್ಲಂಘಿಸಿ ಕಳೆದ 20 ವರ್ಷಗಳಿಂದ ಅಲ್ಲಿ ಕಟ್ಟಡ ನಿರ್ಮಿಸಲಾಗಿದೆ. ರೈತರಿಗೆ ಸದರಿ ಭೂಮಿಯನ್ನು ಪರಿಹಾರ ಸಮೇತ ಮರಳಿಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಮಾನವಿಯಲ್ಲಿ ಈಗಾಗಲೇ ಅಕ್ರಮ ಎಂದು ಸಾಬೀತಾಗಿದ್ದ ಕಲ್ಲಿನ ಗಣಿಗಾರಿಕೆ ಮಾಫಿಯಾ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗೆ ಅನೇಕ ಸಂದರ್ಭದಲ್ಲಿ ಒತ್ತಾಯಿಸಲಾಗಿತ್ತು. ಹಾಗೆಯೇ ಎಲ್ಲಾ ಅಕ್ರಮ ಕಲ್ಲು ಗಣಿಗಾರಿಕೆಯ ಮೇಲೆ ಉಗ್ರ ಕ್ರಮಕ್ಕೆ ಮನವಿ ಮಾಡಲಾಗಿತ್ತು.
ಈ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಡಿ.2ರಂದು ರೈತರು ಹೋರಾಟಕ್ಕಿಳಿದ ವೇಳೆ ಜಿಲ್ಲಾಧಿಕಾರಿ ನಾಗರಾಜು ಅವರು ರೈತರ ಮೇಲೆ ಅನಗತ್ಯವಾಗಿ ಲಾಠಿ ಪ್ರಹಾರಕ್ಕೆ ಆದೇಶ ನೀಡಿದ್ದಾರೆಂದು ಆರೋಪಿಸಿದ ಹೋರಾಟಗಾರರು, ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿದ್ದರೂ ಮನವಿಗೆ ಸ್ಪಂದಿಸದ ವರ್ತನೆ ಖಂಡಿಸಿ ಮುತ್ತಿಗೆ ಹಾಕಲು ಮುಂದಾದಾಗ ತಮ್ಮ ಮೇಲೆ ಲಾಠಿ ಬೀಸಲಾಗಿದೆ ಎಂದು ಆರೋಪಿಸಿದರು.
ಜ.15ರಂದು ಗಡುವು: ಲಾಠಿ ಪ್ರಹಾರದ ಘಟನೆಗೆ ಸಂಬಂಧಿಸಿ ಎಸ್.ಎನ್. ನಾಗರಾಜು ಅವರ ನಿರ್ಲಕ್ಷ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಧಿಕಾರಿಯನ್ನು ವರ್ಗಾಯಿಸಬೇಕು. ಅಕ್ರಮ ಕಲ್ಲು ಗಣಿ ಮಾಫಿಯಾಗಳ ಮತ್ತು ಹೋರಾಟಕ್ಕೆ ಸಂಬಂಧವೇ ಇಲ್ಲದ ಗುತ್ತಿಗೆದಾರರ ಪರ ವಕಾಲತು ವಹಿಸಿ ಡಿಸಿ ಮಾತಾಡಿದ್ದಾರೆ. ಸಂಘಟನೆಗೆ ವಸೂಲಿ ಸಂಘಟನೆಯೆಂದು ಅವಹೇಳನ ಮಾಡಿದ್ದು ಕೂಡಲೇ ಅವರನ್ನು ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿದ ಹೋರಾಟಗಾರರು, ತಮ್ಮ ಬೇಡಿಕೆಗಳನ್ನು ಜ.15ರೊಳಗೆ ಈಡೇರಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ಕೆ. ನಾಗಲಿಂಗಸ್ವಾಮಿ, ತಾಲೂಕು ಅಧ್ಯಕ್ಷ ಎಸ್. ರಾಜಶೇಖರ್, ತಾಲೂಕು ಕಾರ್ಯದರ್ಶಿ ನಲ್ಲಾರೆಡ್ಡಿ ಯರಗೇರಾ, ಮಣಿ ರಾಯಚೂರು, ಮೌನೇಶ ತೋರಣದಿನ್ನಿ, ಕೆ. ಬೀಚಣ್ಣ ಯರಗೇರಾ, ನರಸಿಂಹಲು, ಮಾರುತೆಮ್ಮ, ಸೈಯದ್ ಬಾಬು ಸೇರಿ ಅನೇಕರಿದ್ದರು.

ಡಿಸಿ ಅಮಾನತಿಗೆ ಆಗ್ರಹಿಸಿ ಧರಣಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.23
ಜಿಲ್ಲಾಧಿಕಾರಿ ಕಚೇರಿ ಮುಂದೆ ನ್ಯಾಯಯುತ ಹೋರಾಟ ನಡೆಸುತ್ತಿದ್ದ ರೈತರ ಸಮಸ್ಯೆಗೆ ಸ್ಪಂದಿಸದೆ ಲಾಠಿ ಪ್ರಹಾರಕ್ಕೆ ಕಾರಣರಾದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಅವರ ಶೀಘ್ರ ಅಮಾನತಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ (ಕೆಆರ್‌ಎಸ್)ದಿಂದ ಸೋಮವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.
ಸ್ಥಳೀಯ ತಹಸೀಲ್ದಾರ್ ಕಚೇರಿ ಆರವಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಕೆಆರ್‌ಎಸ್ ಮುಖಂಡರು, ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಬಡ ರೈತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಅನೇಕ ಮನವಿ, ಧರಣಿ, ಪ್ರತಿಭಟನೆ ನಡೆಸುತ್ತಾ ಬರಲಾಗಿದ್ದು, ಸರ್ಕಾರ ಸ್ಪಂದಿಸದೆ ಏಕಾಏಕಿ ಭೂ ಕಂದಾಯ ಜಾರಿ ಮಾಡುವ ಮೂಲಕ ಭೂಹೀನ ರೈತರನ್ನು ಒಕ್ಕಲೆಬ್ಬಿಸುವ ಕ್ರಮ ಖಂಡಿಸಿ ಹಾಗೂ ಸಾಗುವಳಿ ಭೂಮಿಯಿಂದ ತೆರವುಗೊಳಿಸದಂತೆ ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹೋರಾಟ ನಡೆಸಲು ಪೂರ್ವಾಪರ ಮಾಹಿತಿ ನೀಡಲಾಗಿತ್ತು.
ಲಾಠಿ ಪ್ರಹಾರ- ಖಂಡನೆ: ಜಿಲ್ಲಾದ್ಯಂತ ಸರ್ಕಾರಿ ಗೈರಾಣ, ಖಾರಜಖಾತ, ನಾಲಬರ್ಮಾ, ಗೋಮಾಳ, ಪರಂಪೋಕ್ ಭೂಮಿಯಲ್ಲಿ ಭೂ ಹೀನ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯ ಪಟ್ಟಾ ನೀಡುವಂತೆ ಹಾಗೂ ಸರ್ಕಾರಿ ಜಾಗದಲ್ಲಿ ವಾಸವಿರುವ ವಸತಿಹೀನರಿಗೆ ಹಕ್ಕುಪತ್ರ ನೀಡಬೇಕು. ಮಾನವಿಯಲ್ಲಿ ಸಾಬೀತಾದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿ.2ರಂದು ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಮನವಿಗೆ ಸ್ಪಂದಿಸದೆ, ಮೇಲಾಧಿಕಾರಿಗಳ ಆದೇಶವಿಲ್ಲದೆ ಲಾಠಿ ಪ್ರಹಾರ ನಡೆಸಲಾಯಿತು.
ಇದರಿಂದ ರೈತರು, ಮಹಿಳೆಯರು ಗಾಯಗೊಂಡರು. ಇದಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಇವರ ನಿರ್ಲಕ್ಷ್ಯವೇ ಕಾರವಾಗಿದ್ದು, ತಕ್ಷಣ ಜಿಲ್ಲಾಧಿಕಾರಿಗಳನ್ನು ಸೇವೆಯಿಂದ ವರ್ಗಾವಣೆಗೊಳಿಸಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು: ಜಿಲ್ಲಾದ್ಯಂತ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಭೂಹೀನ ರೈತರ ತೆರವುಗೊಳಿಸುವಂತೆ ಭೂ ಕಂದಾಯ ಕಾಯ್ದೆ ನೋಟಿಸ್‌ನ್ನು ಕೂಡಲೇ ನಿಲ್ಲಿಸಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ವಸತಿಹೀನರಿಗೆ ಹಕ್ಕುಪತ್ರ ನೀಡಬೇಕು. ಪಿ.ಜಿ. ಸೆಂಟರ್ ಭೂಮಿಯನ್ನು ಪರಿಹಾರ ಸಮೇತ ಭೂಹೀನ ಬಡ ರೈತರಿಗೆ ಭೂ ಹಿಂದಿರುಗಿಸಬೇಕು.
ಮಾನವಿಯಲ್ಲಿ ಸಾಬೀತಾದ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಟ್ಟಿ ಚಿನ್ನದ ಗಣಿ ಸೈನೇಡ್ ಬೂದಿ ಮಾರಾಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರಿ ಸ್ವಾಮ್ಯದ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಸ್ಥಾಪಿಸಿ ಜನರಿಗೆ ಉದ್ಯೋಗ ಕಲ್ಪಿಸಬೇಕೆಂದು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರೈತ ಸಂಘದ ತಾಲೂಕಾಧ್ಯಕ್ಷ ಬಸವರಾಜ ನಗನೂರ, ಕಾರ್ಯದರ್ಶಿ ರೇವಣಸಿದ್ದಪ್ಪ ಗೌಡೂರು, ಕೆ.ನಾಗಲಿಂಗಸ್ವಾಮಿ, ಮುಖಂಡರಾದ ಬಾಬು ಭೂಪೂರ, ಗೂಡಸಾಬ ಗೆಜ್ಜಲಗಟ್ಟಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement