'ಧರ್ಮದ ಹೆಸರಿನಲ್ಲಿ ಅಶಾಂತಿ ಸಲ್ಲ'
ಕ.ಪ್ರ. ವಾರ್ತೆ ಮುದಗಲ್ ಡಿ.23
ಧರ್ಮದ ಹೆಸರಲ್ಲಿ ಅಶಾಂತಿ, ಧರ್ಮ ಭಯೋತ್ಪಾದಕರು, ಹಿಂಸಾವಾದಿಗಳಾಗಬಾರದು ಎಂದು ಸಿಂಧನೂರು ಬಸವಕೇಂದ್ರದ ಮಹಾಂತ ಸ್ವಾಮೀಜಿ ಸಾಲಿಮಠ ಹೇಳಿದರು.
ಪಟ್ಟಣದ ಚರ್ಚ್‌ನಲ್ಲಿ ಕ್ರಿಸ್‌ಮಸ್ ನಿಮಿತ್ತ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಧರ್ಮಗಳ ಸಾರ ಒಂದೇಯಾಗಿದೆ. ಮನುಷ್ಯ ಶಾಂತಿಯಿಂದ ಇರಬೇಕಾದರೆ ಪ್ರೀತಿ, ಸ್ನೇಹ ಜೀವಿಯಾಗಬೇಕು ಎಂದರು.
ಪ್ರೀತಿ ವಿಶ್ವಾಸದಿಂದ ಬಾಳಿ: ಜಾತಿ ಜಾತಿಗಳಲ್ಲಿ ವೈಷಮ್ಯ, ಕೋಮು ಗಲಭೆಗಳು ಹೆಚ್ಚಾಗಿದ್ದು, ಅಶಾಂತಿಗೆ ಕಾರಣವಾಗಿದೆ. ಪರಸ್ಪರ ದ್ವೇಷ ಮನೋಭಾವ ಉಂಟಾಗಿ ಸಹೋದರತ್ವ ಮಾಯವಾಗಿದೆ. ಅಜ್ಞಾನದ ವಾತಾವರಣ ಉಲ್ಬಣಗೊಂಡಿದೆ. ಇದನ್ನು ಸರಿಪಡಿಸಲು ಧರ್ಮವನ್ನು ರಕ್ಷಿಸಬೇಕು, ಪರಸ್ಪರರಲ್ಲಿ ಪ್ರೀತಿ ವಿಶ್ವಾಶದಿಂದ ಬಾಳುವುದನ್ನು ಕಲಿಯಬೇಕು. ಮುದಗಲ್ ಪಟ್ಟಣ ಸರ್ವಧರ್ಮಗಳ ಸಂಗಮವಾಗಿದೆ. ಇಲ್ಲಿ ಎಲ್ಲ ಧರ್ಮಗಳವರು ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ ಎನ್ನುವುದಕ್ಕೆ ಇಲ್ಲಿ ನಡೆಯುವ ಮೊಹರಂ, ಕ್ರಿಸ್‌ಮಸ್ ಹಬ್ಬಗಳೇ ಸಾಕ್ಷಿಯಾಗಿವೆ ಎಂದರು.
ಇನ್ನೊಬ್ಬ ಉಪನ್ಯಾಸಕ ಲಾಲಹುಸೇನಸಾಬ್ ಕಂದಗಲ್ ಮಾತನಾಡಿ, ಜನರಲ್ಲಿ ಸ್ವಾರ್ಥ, ಸಂಕುಚಿತ ಭಾವನೆಗಳು ಹೆಚ್ಚಿವೆ. ಅಶಾಂತಿ ಉಂಟಾಗಿದ್ದು ಶಾಂತಿ ನೆಲಸಲು ಶಾಂತಿ, ಸನ್ಮಾರ್ಗ ಕಂಡುಕೊಳ್ಳಬೇಕು ಎಂದರು.
ಬಡತನ, ಹಸಿವು ಇನ್ನೂ ತಾಂಡವ: ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಬಡತನ, ಹಸಿವು, ಇನ್ನೂ ತಾಂಡವವಾಡುತ್ತಿದೆ. ಮನುಷ್ಯ ಸಂಶಯ, ಅಪನಂಬಿಕೆಯ ಮೌಢ್ಯತೆಯಲ್ಲಿದ್ದಾನೆ. ಆದ್ದರಿಂದ ಶಾಂತಿ ಸಿಗುತ್ತಿಲ್ಲ ಇಂತಹ ಸಮಯದಲ್ಲಿ ಧರ್ಮಗಳ ಸಾರವನ್ನು ಜನರಲ್ಲಿ ತಿಳಿಸಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು. ಫಾದರ್ ಅಲ್ಫಂಟ್ ಜಾರ್ಜ್ ಮಾತನಾಡಿದರು. ಚರ್ಚ್‌ನ ವಂದನಿಯ ಫಾದರ್ ಎಂ.ಎ.ಅಲ್ಪೋನ್ ವಂದಿಸಿದರು. ಸುಭಾಷ ಕಾರ್ಯಕ್ರಮ ನಿರೂಪಿಸಿದರು.