ಮರಳು ಸಾಗಣೆ ಪರವಾನಗಿಗೆ ಮಹಾಸಭಾ ಆಗ್ರಹ
ರಾಯಚೂರು: ಟ್ರ್ಯಾಕ್ಟರ್ನಲ್ಲಿ ಮರಳು ಸಾಗಿಸಲು ಪರವಾನಗಿ ನೀಡುವಂತೆ ಆಗ್ರಹಿಸಿ ದಲಿತ ಮಹಾಸಭಾದಿಂದ ಸೋಮವಾರ ನಗರದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದೊಂದೂವರೆ ವರ್ಷದಿಂದ ಕೃಷ್ಣಾ ಮತ್ತು ತುಂಗಭದ್ರಾ ನದಿಯಿಂದ ಮರಳನ್ನು ಸಾಗಿಸಲು ಟ್ರ್ಯಾಕ್ಟರ್ಗಳಿಗೆ ಜಿಲ್ಲಾಡಳಿತ ಪರವಾನಗಿ ನೀಡಿಲ್ಲ. ಅದರಿಂದ ಅಕ್ರಮವಾಗಿ ಮರಳು ಸಾಗಿಸುವಂಥ ಕೃತ್ಯಗಳು ಹೆಚ್ಚಿವೆ. ಮರಳು ಸಾಗಿಸುವ ಕಾಯಕದಲ್ಲಿರುವ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ದೂರಿದರು.
ಬ್ಯಾಂಕಿನಿಂದ ಸಾಲ ಪಡೆದು ಮರಳು ಸಾಗಣೆಯ ಉದ್ದೇಶದಿಂದ ಟ್ರ್ಯಾಕ್ಟರ್ ಖರೀದಿಸಿರುವವರು ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಬಡ ಕುಟುಂಬಗಳಿಗೆ ನಿತ್ಯದ ಭದ್ರತೆಯಾಗಿರುವ ಮರಳು ಸಾಗಣೆಯ ವೃತ್ತಿಯಲ್ಲಿ ತೊಡಗಿರುವವರು ಸದ್ಯ ಜಿಲ್ಲಾಡಳಿತ ಪರವಾನಗಿ ನೀಡದ್ದರಿಂದ ತೊಂದರೆಗೆ ಸಿಲುಕಿವೆ ಎಂದು ಆರೋಪಿಸಿದರು.
ಮರಳು ಸಾಗಣೆ ಸ್ಥಗಿತಗೊಳಿಸುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಅಕ್ರಮ ಮರಳು ಸಾಗಣೆ ತಡೆಗೆ ಮರಳು ಬ್ಲಾಕ್ಗಳನ್ನು ಗುರುತಿಸಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ನೀಡಿ ಮರಳು ಸಾಗಣೆಗೆ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.
ಟೆಂಡರ್ ಕರೆಯಲು ವಿಳಂಬವಾದಲ್ಲಿ ಸಂಬಂಧಿಸಿದ ಇಲಾಖೆಯಿಂದ ಪರವಾನಗಿಯನ್ನು ನೀಡುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು. ರಾಯಲ್ಟಿ ದರವನ್ನು ಪ್ರತಿ ಕ್ಯೂಬಿಕ್ ಮೀಟರ್ಗೆ 200ನಂತೆ ನಿಗದಿ ಮಾಡಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಕೆ.ಈ. ಕುಮಾರ್, ಅಂಜೀನಯ್ಯ ಕೂಂಬಿನ್, ಅಂಜಿಯಾದವ್, ಮಹೇಶ್, ವಿಶ್ವನಾಥ್ ಮತ್ತಿತರರಿದ್ದರು.