ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎತ್ತು ಸಾವು; ಮಾನವೀಯತೆ ಮೆರೆದ ವರ್ತಕರು

Srinivasa Murthy VN
Updated On : 17 Feb 2013, 1:06 am

ಮುದಗಲ್: ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಎತ್ತೊಂದು ಮುಗ್ಗರಿಸಿ ಬಿದ್ದು ನಾಲಿಗೆ ಕಚ್ಚಿಕೊಂಡು ಸ್ಥಳದಲ್ಲೇ ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ಜರುಗಿದೆ.
ಪಟ್ಟಣದ ರೈತ ಅಮರೇಶ ತಂದೆ ಹನುಮಂತಪ್ಪ ಎನ್ನುವ ರೈತ ತನ್ನ ಜಮೀನಲ್ಲಿ ಬೆಳೆದಿದ್ದ ಸಜ್ಜೆ ಮತ್ತು ಕಡಲೆ ಧಾನ್ಯಗಳನ್ನು ಮಾರಾಟ ಮಾಡಲು ಬಂಡಿಯಲ್ಲಿ ಸಾಗಿಸುತ್ತಿದ್ದಾಗ ಎಪಿಎಂಸಿ ಆವರಣದಲ್ಲಿ ಎಡವಿ ಬಿದ್ದು ನಾಲಿಗೆ ಕಡಿದುಕೊಂಡು ಎತ್ತು ಸಾವಿಗೀಡಾಗಿದೆ. ರೈತ ಅಮರೇಶ ಬೆಲೆ ಬಾಳುವ ಎತ್ತು ಸತ್ತಿದ್ದರಿಂದ ದುಃಖತಪ್ತನಾಗಿದ್ದಾನೆ.
ಮಾನವೀಯತೆ ಮೆರೆದ ವರ್ತಕರು: ಬೆಲೆ ಬಾಳುವ ಎತ್ತು ಮುಗ್ಗರಿಸಿ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದರಿಂದ ದುಃಖದಲ್ಲಿರುವ ರೈತನಿಗೆ ವರ್ತಕರು 5100 ಸಂಗ್ರಹ ಮಾಡಿ ಪರಿಹಾರ ನೀಡಿದ್ದಾರೆ. ಸಾವಿಗೀಡಾದ ಎಪಿಎಂಸಿ ಆವರಣದಲ್ಲಿ ಎತ್ತಿನ ಮೆರವಣಿಗೆ ಮಾಡಿದ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದರು. ಎಪಿಎಂಸಿ ಆವರಣದಲ್ಲೇ ಗದ್ದುಗೆ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ವರ್ತಕರು ತಿರ್ಮಾನಿಸಿದರು.
ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಮಾಟೂರು, ವರ್ತಕರಾದ ನಾಗನಗೌಡ ತುರಡಗಿ, ಲಕ್ಷ್ಮೀಪತಿ ತಾವರಗೇರಾ, ಚನ್ನಪ್ಪ ಗದ್ದಿ, ಸತೀಶ ಕಂಪ್ಲಿ, ಸಿದ್ದರಾಮರಡ್ಡಿ, ವೆಂಕಟೇಶ ಸುರಪುರ, ಪ್ರಾಣೇಶ ಹಾಲೂರು, ಭದ್ರಿನಾಥ ಸೇರಿದಂತೆ ಎಪಿಎಂಸಿ ಹಮಾಲರು ಭಾಗವಹಿಸಿದ್ದರು.
ದಪ್ಪನೆಯ ಕಂಕರಗಳು ಮೇಲೆದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದೇ ಮೂಲ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಕಾಮಗಾರಿ ಗುತ್ತೆದಾರರು ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದು, ದುರಸ್ತಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ವರ್ತಕರಿಗೆ ಮತ್ತು ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭಿಸಿ ಡಾಂಬರೀಕರಣ ಮಾಡದಿದ್ದರೆ ವರ್ತಕರು ವ್ಯಾಪಾರ ಬಂದ್ ಮಾಡಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement