ಗ್ರಾಹಕರ ಜಾಗೃತಿಗೆ ಅನುದಾನದ ಕೊರತೆ
ರಾಯಚೂರು: ರಾಜ್ಯ ಸರ್ಕಾರದಿಂದ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ಸಮರ್ಪಕ ಅನುದಾನ ಒದಗಿಸುತ್ತಿಲ್ಲ. ಅದರಿಂದಾಗಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ರಾಜ್ಯ ಗ್ರಾಹಕ ವ್ಯಾಜ್ಯಗಳ ಇತ್ಯರ್ಥ ಆಯೋಗದ ಅಧ್ಯಕ್ಷ ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷ ರಾಜ್ಯದ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿನ ಗ್ರಾಹಕರಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಇಂಥ ಕಾರ್ಯಕ್ರಮಕ್ಕೆ ಅನುದಾನ ದೊರೆಯದ್ದರಿಂದ ಜಾರಿ ಸಾಧ್ಯವಾಗಿಲ್ಲ ಎಂದರು.
ವಿಳಂಬಕ್ಕೆ ಸಿಬ್ಬಂದಿ ಕೊರತೆ ಕಾರಣ: ಆಯೋಗದಲ್ಲಿ ಸಿಬ್ಬಂದಿ ಕೊರತೆಯಿದ್ದು ಅದರಿಂದ ಕಾರ್ಯನಿರ್ವಹಣೆಗೆ ಅಡಚಣೆಯಾಗಿದೆ. ರಾಜ್ಯ ಸರ್ಕಾರ ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲು ತಿಳಿಸಿದ್ದು, ಪ್ರತಿ 5 ವರ್ಷಕ್ಕೊಮ್ಮೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಕೆಪಿಎಸ್ಸಿ ನಡೆಸುತ್ತಿರುವುದರಿಂದ ಸಿಬ್ಬಂದಿ ನೇಮಕಾತಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಸ್ಥಳಗಳಲ್ಲಿ ಗ್ರಾಹಕರ ವೇದಿಕೆಯ ಕಚೇರಿಗಳಿಗೆ ಸ್ವಂತದಾದ ಕಟ್ಟಡಗಳಿಲ್ಲ. ಎಲ್ಲೆಡೆ ಬಾಡಿಗೆ ಕಟ್ಟಡಗಳಲ್ಲಿಯೇ ವೇದಿಕೆಯು ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಪ್ರತಿ ಕಟ್ಟಡಕ್ಕೆ 30 ಲಕ್ಷ ನೀಡುವುದಾಗಿ ಹೇಳಿ ಪ್ರಸ್ತಾವನೆ ಕೋರಿತ್ತು. ಆದರೆ ಪ್ರಸ್ತಾವನೆ ಸಲ್ಲಿಸಿದ ನಂತರದಲ್ಲಿ ನಿರ್ಮಾಣ ವೆಚ್ಚದ ಹೆಚ್ಚಳದಿಂದಾಗಿ ಕಟ್ಟಡದ ನಿರ್ಮಾಣಕ್ಕೆ 30 ಲಕ್ಷ ಸಾಕಾಗದು ಎಂದು ಕೇಂದ್ರಕ್ಕೆ ತಿಳಿಸಿದ್ದರಿಂದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿಲ್ಲ ಎಂದರು.
ಗ್ರಾಹಕ ವೇದಿಕೆಗೆ ನೇಮಕಾತಿ ನಡೆದಿಲ್ಲ: ಗ್ರಾಹಕರ ವೇದಿಕೆಯ ಅಧ್ಯಕ್ಷ ಸ್ಥಾನಗಳಿಗೆ 6 ಜಿಲ್ಲೆಗಳಲ್ಲಿ ನೇಮಕಾತಿಯಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ 14 ಸದಸ್ಯರ ನೇಮಕಾತಿ ನಡೆಯಬೇಕಿದೆ. ಗ್ರಾಹಕರ ವೇದಿಕೆಯಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಗ್ರಾಹಕರ ವೇದಿಕೆಯಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಆದರೆ ಗ್ರಾಹಕರ ವೇದಿಕೆಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ತೊಂದರೆಗೊಳಗಾದವರು ಮಾತ್ರ ದೂರು ದಾಖಲಿಸಬೇಕು. ಆಗ ಮಾತ್ರ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕಳಪೆ ಬೀಜ, ಕ್ರಿಮಿನಾಶಕ ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿ ಪರಿಹಾರ ಕಂಡಿವೆ. ರಾಜ್ಯದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಗ್ರಾಹಕರ ವೇದಿಕೆಯ ಕಚೇರಿಗಳಿವೆ ಎಂದು ಅವರು ತಿಳಿಸಿದರು. ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಪಂಪಾಪತಿ ಅವರಿದ್ದರು.