ತೀರದ ನೀರಿನ ಬವಣೆ; ಶೇಂಗಾ ರೈತರ ಸಂಕಟ
ನಾರಾಯಣಪುರ ಬಲದಂಡೆ ಕಾಲುವೆ ರೈತರಿಗಿಲ್ಲ ನೀರು ನೀರಿನ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲ
ವಿಶೇಷ ವರದಿ
ರಾಯಚೂರು: ನಾರಾಯಣಪುರ ಬಲದಂಡೆಯಿಂದ ನೀರಾವರಿಯಾಗಿರುವ ದೇವದುರ್ಗ ತಾಲೂಕಿನ ರೈತರಿಗೀಗ ಸಂಕಷ್ಟ ಎದುರಾಗಿದೆ. ಶೇಂಗಾ ಬೆಳೆದಿರುವ ರೈತರು ನೀರಿಗಾಗಿ ಪರಿತಪಿಸುವಂತಾಗಿದ್ದು, ಕಾಲುವೆಯ ನೀರಿನ ನಿರ್ವಹಣೆಯಲ್ಲಿನ ವೈಫಲ್ಯ ರೈತರಿಗೆ ಮಾರಕವಾಗಿ ಪರಿಣಮಿಸಿದೆ.
ಪರಿಣಾಮ ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶೇಂಗಾ ಬೆಳೆದವರು ಅಕ್ಷರಶಃ ಆರ್ಥಿಕ ನಷ್ಟದ ಭೀತಿಗೆ ಸಿಲುಕಿದ್ದಾರೆ. ಲಕ್ಷಾಂತರ ರು. ವೆಚ್ಚ ಮಾಡಿ ಬೆಳೆದ ಶೇಂಗಾ ಬೆಳೆಗೆ ಕಟ್ಟಕಡೆಯ ಅವಧಿಯಲ್ಲಿ ನೀರಿಲ್ಲದೇ ರೈತರು ಕಂಗಾಲಾಗಿದ್ದು, ನಾರಾಯಣಪುರ ಬಲದಂಡೆ ಕಾಲುವೆಯ ನೀರು ರೈತರಿಗೆ ತಲುಪದೇ ಹಳ್ಳದ ಪಾಲಾಗುತ್ತಿರುವುದು ಆತಂಕ ತಂದಿದೆ.
ಎಕರೆಗೆ ಕನಿಷ್ಠ 25 ಸಾವಿರ ಖರ್ಚು: ತಾಲೂಕಿನ 15 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶೇಂಗಾ ಬೆಳೆದಿದ್ದಾರೆ. ಪ್ರತಿ ಎಕರೆಗೆ ಕನಿಷ್ಠವೆಂದರೂ 25 ಸಾವಿರ ಮೌಲ್ಯದ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ವ್ಯಯಿಸಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಗೆ ನಿರೀಕ್ಷಿತ ಬೆಲೆ ರೈತರಿಗೆ ದೊರೆಯುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶೇಂಗಾ ಬೆಳೆಗೆ ಕೊನೆಯ ಬಾರಿ ನೀರು ಹರಿಸಲು ಕಾಲುವೆಯ ಮೂಲಕ ನೀರು ದೊರೆಯದಿರುವುದು ರೈತರಲ್ಲಿ ಬೇಸರಕ್ಕೆ ದಾರಿ ಮಾಡಿದೆ.
ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ಎರಡನೇ ಹಂಗಾಮಿಗೆ ರೈತರು ಬತ್ತ ಬೆಳೆಯದಂತೆ ಕೃಷ್ಣಾ ಭಾಗ್ಯ ಜಲ ನಿಗಮವು ಕಳೆದ ಹಂಗಾಮಿನ ಅಂತ್ಯಕ್ಕೆ ಮನವಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ರೈತರು ಬತ್ತ ಬೆಳೆಯದೇ ಶೇಂಗಾ ಬೆಳೆದಿದ್ದರು. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಮೊದಲ ಹಂಗಾಮಿನ ಬತ್ತದ ಕಟಾವಿನ ವೇಳೆ ನೀರು ನಿಲುಗಡೆ ಮಾಡುವುದನ್ನೇ ಮರೆತಿದ್ದರಿಂದ ಎರಡನೇ ಹಂಗಾಮಿಗೆ ನೀರು ದೊರೆಯದಂತಾಗಿದೆ.
ನೀರಿನ ಕೊರತೆಗೇನು ಕಾರಣ?: ಕಾಲುವೆಯ ನೀರು ಮೊದಲ ಹಂಗಾಮಿನ ಅಂತ್ಯಕ್ಕೆ ಸಮರ್ಪಕ ಬಳಕೆಯಾಗದೇ ಹಳ್ಳದ ಮೂಲಕ ಹರಿದು ಆಂಧ್ರಕ್ಕೆ ಸೇರಿದ್ದು ರೈತರಿಗೆ ಸದ್ಯ ನೀರಿನ ಕೊರತೆ ಉಂಟಾಗಲು ಮೂಲ ಕಾರಣ ಎಂಬುದು ರೈತರ ಆರೋಪ. ಈ ನೀರಿನ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಎರಡನೇ ಹಂಗಾಮಿಗೆ ಬತ್ತ ಹೊರತುಪಡಿಸಿ ಬೆಳೆದ ಬೆಳೆಗಳಿಗೆ ನೀರಿಲ್ಲದಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ರೈತರಲ್ಲಿ ಅಸಮಾಧಾನ: ಈ ಮಧ್ಯೆ ಸಮಸ್ಯೆ ತೀವ್ರತೆ ಅರಿತು ಫೆ.16ರಂದು ಕರೆದಿದ್ದ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ರಾಜ್ಯ ರೈತ ಸಂಘದ ಸಭೆಯಿಂದ ನೀರಾವರಿ ಅಧಿಕಾರಿಗಳು ದೂರವುಳಿದಿದ್ದರಿಂದ ಸಭೆಯನ್ನು ಫೆ.19ಕ್ಕೆ ಮುಂದೂಡಲಾಗಿದೆ. ಇದು ರೈತರಲ್ಲಿನ ಅಸಮಾಧಾನ ಹೆಚ್ಚಿಸಿದೆ.
ಒಂದೆಡೆ ಶೇಂಗಾ ಬೆಳೆಯು ನೀರಿಲ್ಲದೇ ಒಣಗುವಂಥ ಪರಿಸ್ಥಿತಿಯಿದ್ದು, ಶೇಂಗಾ ಬೆಳೆ ಕೀಳಲು ನೀರು ಹರಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಫೆ. 19ರ ಸಭೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನ ರೈತರ ಪಾಲಿಗೆ ಮಹತ್ವದ್ದಾಗಿದೆ. ನೀರು ದೊರಕಿಸುವುದು ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಆರ್ಥಿಕ ನಷ್ಟ ಎದುರಿಸುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸುವ ಮೂಲಕ ನಾರಾಯಣಪುರ ಬಲದಂಡೆ ಕಾಲುವೆಯ ಅಡಿ ಶೇಂಗಾ ಮತ್ತಿತರೆ ಮಿತ ನೀರಾವರಿ ಬೆಳೆ ಬೆಳೆದ ರೈತರ ಹಿತ ಕಾಯಲು ಮುಂದಾಗಬೇಕು ಎಂಬುದು ರೈತರ ಆಗ್ರಹ.