ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಿಲ್ಲಾಡಳಿತ ಸಕಲ ಸಜ್ಜು

Srinivasa Murthy VN
Updated On : 17 Feb 2013, 1:05 am

ರಾಯಚೂರು: ಜಿಲ್ಲೆಯಲ್ಲಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಮಾ.7ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿದ್ದು, ಮತದಾನಕ್ಕಾಗಿ 350 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ 153 ಸೂಕ್ಷ್ಮ, 175 ಅತೀ ಸೂಕ್ಷ್ಮ ಮತಗಟ್ಟೆ ಮತ್ತು 22 ಸಾಮಾನ್ಯ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ.
ಜಿಲ್ಲೆಯಲ್ಲಿ ಮಾ.7ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದಲ್ಲಿ ಈ ಬಾರಿ 301015 ಮತದಾರರು ಮತದಾನ ಮಾಡಲಿದ್ದಾರೆ. ರಾಯಚೂರು ನಗರಸಭೆಯ 35 ವಾರ್ಡುಗಳಲ್ಲಿ 1,60,896 ಮತದಾರರಿದ್ದು, 81,949 ಪುರುಷರು, 78947 ಮಹಿಳಾ ಮತದಾರರಿದ್ದಾರೆ. ಮತದಾನಕ್ಕೆ ನಗರದಲ್ಲಿ 183 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದರಲ್ಲಿ 96 ಸೂಕ್ಷ್ಮ, 79 ಅತೀ ಸೂಕ್ಷ್ಮ ಹಾಗೂ 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಸಿಂಧನೂರು: ಸಿಂಧನೂರು ನಗರಸಭೆಯ 31 ವಾರ್ಡುಗಳಲ್ಲಿ ಒಟ್ಟು 51,755 ಮತದಾರರಿದ್ದಾರೆ. ಅವರಲ್ಲಿ 26624 ಪುರುಷರು, 25,131 ಮಹಿಳಾ ಮತದಾರರಿದ್ದಾರೆ. ಮತದಾನಕ್ಕೆ 63 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 30ಮತಗಟ್ಟೆಗಳು ಸೂಕ್ಷ, 33 ಅತಿ ಸೂಕ್ಷ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ.
ಮಾನವಿ ಪುರಸಭೆಯ 23 ವಾರ್ಡುಗಳಲ್ಲಿ ಒಟ್ಟು 31,938 ಮತದಾರರಿದ್ದು, 15913 ಪುರುಷ, 16025 ಮಹಿಳಾ ಮತದಾರರಿದ್ದಾರೆ. ಮತದಾನಕ್ಕೆ 34 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಅದರಲ್ಲಿ 20 ಮತಗಟ್ಟೆಗಳು ಸೂಕ್ಷ, 14 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ದೇವದುರ್ಗ: ದೇವದುರ್ಗ ಪುರಸಭೆಯ 23 ವಾರ್ಡುಗಳಲ್ಲಿ ಒಟ್ಟು 16,518 ಮತದಾರರಿದ್ದು, 8379 ಪುರುಷ, 8139 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ 25 ಮತಗಟ್ಟೆ ಸ್ಥಾಪಿಸಿದ್ದು, 5 ಸೂಕ್ಷ್ಮ, 6 ಅತಿ ಸೂಕ್ಷ್ಮ ಹಾಗೂ 14 ಸಾಮಾನ್ಯ ಮತಗಟ್ಟೆಗಳೆಂದು ಜಿಲ್ಲಾಡಳಿತ ಗುರುತಿಸಿದೆ.
ಲಿಂಗಸ್ಗೂರು ಪುರಸಭೆಯ 23 ವಾರ್ಡುಗಳಲ್ಲಿ ಒಟ್ಟು 22,968 ಮತದಾರರಿದ್ದಾರೆ. ಅವರಲ್ಲಿ 11621 ಪುರುಷ, 11347 ಮಹಿಳಾ ಮತದಾರರಿದ್ದಾರೆ. ಮತದಾನಕ್ಕೆ 24 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 13 ಸೂಕ್ಷ್ಮ, 11 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಮುದಗಲ್: ಮುದಗಲ್ ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಗೆ ಒಟ್ಟು 16940 ಮತದಾರರಿದ್ದು, ಅವರಲ್ಲಿ 8563 ಪುರುಷ, 8377 ಮಹಿಳಾ ಮತದಾರರಿದ್ದಾರೆ. ಮತದಾನಕ್ಕೆ 21 ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ 11 ಸೂಕ್ಷ್ಮ ಮತಗಟ್ಟೆಗಳು, 10 ಅತೀ ಸೂಕ್ಷ್ಮ ಮತಗಟ್ಟೆಗಳಿರಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಜಕೀಯ ಪಕ್ಷಗಳ ಸಭೆ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಸಭೆ ನಡೆಸಿದ ಪ್ರಭಾರಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ಚುನಾವಣೆ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದ್ದು, ಅದರ ಪಾಲನೆಗೆ ಮನವಿ ಮಾಡಿದರು.
ಈ ಸಭೆಯಲ್ಲಿ ನೀತಿ ಸಂಹಿತೆಯ ಪಾಲನೆ ಬಗ್ಗೆ ಮಾತನಾಡಿದ ಜೆಡಿಎಸ್ ಮುಖಂಡ ವಿರೂಪಾಕ್ಷಿ, ನಗರಸಭೆಯಲ್ಲಿ ಈವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಾಧನೆಯ ಬಗ್ಗೆ ಈಚೆಗೆ ಪ್ರಕಟಣೆ ನೀಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ಕ್ರಮಕ್ಕೆ ಒತ್ತಾಯಿಸಿದರು.
ಭರವಸೆ: ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರಿ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ನಗರಸಭೆಯ ಅಧ್ಯಕ್ಷರಾಗಿದ್ದ ಮಮತಾ ಸುಧಾಕರ್ ಮತ್ತು ಉಪಾಧ್ಯಕ್ಷರಾಗಿದ್ದ ಸುಲೋಚನಾ ಅವರಿಗೆ ಈ ಬಗ್ಗೆ ನೋಟೀಸ್ ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಅದೇ ರೀತಿ ಸಭೆಯಲ್ಲಿ ಒಟ್ಟಾರೆ ಚುನಾವಣೆ ಪ್ರಕ್ರಿಯೆ ಮಾಹಿತಿ ನೀಡಿದ ಚುನಾವಣೆ ವಿಭಾಗದ ಅಧಿಕಾರಿಗಳು ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಸಹಕಾರಕ್ಕೆ ಮನವಿ ಮಾಡಿದರು.
ಫೆ.16ರಂದೇ ಅಧಿಸೂಚನೆ ಹೊರಡಿಸಿದ್ದು, ಫೆ.23ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಫೆ.25ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು, ಮಾ.7ರಂದು ಮತದಾನ ನಡೆಯಲಿದೆ ಎಂದು ಸಭೆಗೆ ತಿಳಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಡಿಸಿ ಎಂ.ತಿಮ್ಮಪ್ಪ, ಚುನಾವಣೆ ವಿಭಾಗದ ಸಿಬ್ಬಂದಿ, ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement