ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ದತ್ತಿ ಉಪನ್ಯಾಸ

Srinivasa Murthy VN
Updated On : 9 Mar 2013, 10:31 am

ಸಿಂಧನೂರು: ನಗರದ ಸಂಕೇತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಮಾ. 9ರಂದು ಮ.12ಕ್ಕೆ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಕೇತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಬಸವರಾಜ್ ವಹಿಸಲಿದ್ದು, ದಿ. ಬಸಪ್ಪ ನಾಗಪ್ಪ ತುಕ್ಕಾಯಿ ಸ್ಮಾರಕ ದತ್ತಿಯ ಉಪನ್ಯಾಸವನ್ನು ಶರಣ ಸಾಹಿತ್ಯ ವಿಷಯ ಕುರಿತು ಬಸವ ಕೇಂದ್ರದ ಹಿರಿಯ ಅನುಭಾವಿ ಪಿ.ವೀರಭದ್ರಪ್ಪ ಕುರಕುಂದಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದತ್ತಿ ದಾನಿಗಳಾದ ಬೆಂಗಳೂರಿನ ಉಚ್ಚ ನ್ಯಾಯಾಲಯದ ನ್ಯಾಯವಾದಿ ನಾಗಪ್ಪ ತುಕ್ಕಾಯಿ, ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ, ಸಂಕೇತ ಪದವಿ ಕಾಲೇಜು ಪ್ರಾಚಾರ್ಯ ಪ್ರಕಾಶ ಎಸ್.ಎಚ್., ಸಹಶಿಕ್ಷಕಿ ಚಂಪಕ್ಕ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಶ್ರೀಶೈಲ್ ಕೌದಿ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಉಪಸ್ಥಿತರಿರುವರು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೀರೇಶ, ಆರ್.ಸಿ. ಪಾಟೀಲ್ ಮನವಿ ಮಾಡಿದ್ದಾರೆ.

ಸಮಿತಿ ಸಂತಾಪ
ರಾಯಚೂರು:
ಇತ್ತೀಚೆಗೆ ನಗರದಲ್ಲಿ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಕಾಶೀರಾವ ಪಾಟೀಲ್ ಅವರಿಗೆ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸಂಘಟನೆಯ ಅಧ್ಯಕ್ಷ ಮಹೇಶ ಚೀಕಲ್ಪರ್ವಿ, ಚೇತನಾ ಬನಾರೆ, ಚನ್ನ ಬಸವ ಜಾನೇಕಲ್ ಸೇರಿದಂತೆ ಮತ್ತಿತರರು ಇದ್ದರು.

ಭ್ರೂಣಹತ್ಯೆ ತಡೆ: ತೀರ್ಪಿಗೆ ಸ್ವಾಗತ
ರಾಯಚೂರು:
ದೇಶದ ಸರ್ವೋಚ್ಚ ನ್ಯಾಯಾಲಯವು ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಂಬಂಧಿಸಿ ನೀಡಿದ ತೀರ್ಪನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಸ್ವಾಗತಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ, ಕೋರ್ಟ್ ಹತ್ಯೆ ತಡೆಗೆ ನೀಡಿರುವ ನಿರ್ದೇಶನಗಳು ಪರಿಣಾಮಕಾರಿಯಾಗಿದ್ದು, ಅವುಗಳ ಪಾಲನೆಯಿಂದ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಬಹುದಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗುವಂತೆ ಅವರು ಒತ್ತಾಯಿಸಿದ್ದಾರೆ.

ರಸ್ತೆ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ
ಲಿಂಗಸ್ಗೂರು:
ತಾಲೂಕಿನ ಜಲದುರ್ಗ ಕೂಡು ರಸ್ತೆಯಿಂದ 9 ಕಿಮೀ ರಸ್ತೆ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯಿಂದ 2011-12 ನೇ ಸಾಲಿನ ವಿಶೇಷ ಅನುದಾನದಡಿ 3.60 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಕ್ಕೆ ಹಾಲಬಾವಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಜಲದುರ್ಗ ಕೋಟೆ ಹಾಗೂ ಸುತ್ತಮುತ್ತಲ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ಈ ರಸ್ತೆ ನಿರ್ಮಾಣದಿಂದ ಅನುಕೂಲವಾಗಲಿದೆ. ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗುವ ಸಾಧ್ಯತೆಯಿತ್ತು. ಇದರಿಂದ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಕಾಲುವೆಗೆ ನೀರು ಹರಿಸಲಾಗಿದೆ ಮತ್ತು ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಲದುರ್ಗ ಏತನೀರಾವರಿ ಯೋಜನೆ ಪುನ- ಆರಂಭಿಸಲಾಗಿದ್ದು, ಈ ಭಾಗದ ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು. ಜಲದುರ್ಗದ ಪ್ರಭುದೇವ ತಾತಾ, ಎಂಜಿನಿಯರ್ ಮಹಾಂತಪ್ಪ ಕಣ್ಣೂರು, ಗೊರೆಬಾಳ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ತಾಪಂ ಸದಸ್ಯೆ ದುರುಗಮ್ಮ ದೇಸಾಯಿ ಇದ್ದರು.

ಕಳೆ ನಿಯಂತ್ರಣ ತಂತ್ರಜ್ಞಾನ ಒದಗಿಸಲು ಮನವಿ
ರಾಯಚೂರು:
ರೈತರಿಗೆ ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಕಳೆ ನಿಯಂತ್ರಣ ತಂತ್ರಜ್ಞಾನವನ್ನು ಒದಗಿಸುವಂತೆ ತಾಲೂಕಿನ ಉಡುಮಗಲ್ ಖಾನಾಪುರ ಗ್ರಾಮದ ಶ್ರೀ ರಾಮೇಶ್ವರ ರೈತ ಶಕ್ತಿ ಗುಂಪು ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬಿಟಿ ತಂತ್ರಜ್ಞಾನದ ನಂತರದಲ್ಲಿ ಹತ್ತಿ ಕಾಯಿ ಕೊರಕದ ಬಾಧೆಯಿಂದ ಮುಕ್ತಿ ದೊರೆತಿದೆ. ಹೀಗಾಗಿ ರೈತರು ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. ಆದರೆ ಹತ್ತಿ ಬೆಳೆಯಲ್ಲಿ ಕಳೆಯ ನಿಯಂತ್ರಣಕ್ಕೆ ಅವಶ್ಯಕವಾದ ತಂತ್ರಜ್ಞಾನವನ್ನು ಹತ್ತಿ ಬೆಳೆಗಾರರಿಗೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಆಡಳಿತವು ನೆರವು ನೀಡಿ ರೈತ ಶಕ್ತಿ ಗುಂಪಿಗೆ ಈ ತಂತ್ರಜ್ಞಾನ ಒದಗಿಸುವಂತೆ ಪ್ರಮುಖರಾದ ನರಸಪ್ಪ, ವೀರನಗೌಡ, ಈರನಗೌಡ, ಬೂದೆಪ್ಪ ಮನವಿ ಮಾಡಿದ್ದಾರೆ.

ಮನೆ ನಿರ್ಮಾಣಕ್ಕೆ ವಿರೋಧ
ಮುದಗಲ್:
ಸಮೀಪದ ಕನ್ನಾಳ ಗ್ರಾಪಂ ವ್ಯಾಪ್ತಿಯ ಪೈಗಂಬರ್ ನಗರದಲ್ಲಿ 2012- 13ನೇ ಸಾಲಿನ ರಾಜೀವ ಗಾಂಧಿ ವಸತಿ ನಿಗಮದ ಮನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಬಂದಂತೆ ಮನೆಗಳನ್ನು ಹಂಚಿಕೆ ಮಾಡಿ ತಾರತಮ್ಯ ನೀತಿ ಅನುಸರಿಸಿದ್ದಾರೆ.                                                         
ಪ್ರಸಕ್ತ ಸಾಲಿನಲ್ಲಿ ಒಟ್ಟು 73 ಹೆಚ್ಚುವರಿ ಮನೆಗಳು ಮಂಜೂರಾಗಿದ್ದು, ಮನೆಗಳ ಹಂಚಿಕೆಯಲ್ಲಿ ಫಲಾನುಭವಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಅರ್ಹ ಫಲಾನುಭವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಪಂ ಸದಸ್ಯರಾದ ಮುತ್ತುರಾಜ್, ಛತ್ರಪ್ಪ, ಸುನಂದಾ, ವೆಂಕೋಬ, ಅಮರೇಶ ನಿಗಮಕ್ಕೆ ದೂರು ಸಲ್ಲಿಸಿದ್ದಾರೆ.
ಗ್ರಾಪಂ ಸದಸ್ಯರು ಸಲ್ಲಿಸಿದ ದೂರಿನನ್ವಯ ತಾಪಂ ಸಹಾಯಕ ನಿರ್ದೇಶಕ ನಿಲೋಗಲ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ದೇವಪುತ್ರಪ್ಪ ನಿಗಮದ ಅಧಿಕಾರಿ ಶಂಕರ ಇವರ ಜಂಟಿ ಆಶ್ರಯದಲ್ಲಿ ದೂರಿನ ಮೇರೆಗೆ ಫಲಾನುಭವಿಗಳ ವಿಚಾರಣೆಯನ್ನು ಮಾಡಿದರು. ಪೈಗಂಬರ್ ನಗರದಲ್ಲಿ ಬೇರೆ ವರ್ಗದ ಜನಾಂಗದವರು ವಾಸಿಸದೇ ಇದ್ದುದರಿಂದ ಒಂದೇ ಸಮಾಜಕ್ಕೆ 66 ಮನೆಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು ಇನ್ನುಳಿದ 7 ಮನೆಗಳನ್ನು ಬೇರೆ ವರ್ಗದವರಿಗೆ ಹಂಚಲಾಗಿದೆ ಎಂದು ಗ್ರಾಪಂ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement