ಸಮಾಜ ದೃಷ್ಟಿಕೋನ ಬದಲಾಗಲಿ
ದೇಶದಲ್ಲಿ ಮಹಿಳೆಯರು ಸುರಕ್ಷಿತ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಲು ಸಮಾಜದ ದೃಷ್ಟಿಕೋನದಲ್ಲಿ ಕೆಲ ಮಾರ್ಪಾಟು ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ್ ಕರೆ ನೀಡಿದರು.
ಅವರು ನಗರದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಯುನಿಸೆಫ್, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ರಕ್ಷಣೆಗೆ ದೇಶದಲ್ಲಿ ಹತ್ತಾರು ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಅವುಗಳ ಸಮರ್ಪಕ ಅನುಷ್ಠಾನದ ಅವಶ್ಯಕತೆಯಿದೆ ಎಂದು ಹೇಳಿದರು.
ಸುರಕ್ಷಿತ ಪರಿಸರ ಅಗತ್ಯ: ಕಾನೂನಾತ್ಮಕ ಬದಲಾವಣೆಗಳಿಂದ ಮಹಿಳೆಯರ ಸುರಕ್ಷತೆ ಅಸಾಧ್ಯ. ಅದರ ಜೊತೆಗೆ ಮಹಿಳೆಯರ ಕುರಿತು ಸಾಮಾಜಿಕ ದೃಷ್ಟಿಕೋನ ಬದಲಾಗಬೇಕಿದೆ. ಆಗ ಮಾತ್ರ ಮಹಿಳೆಯರು ಸುರಕ್ಷಿತವಾಗಿ ಜೀವನ ನಿರ್ವಹಿಸಲು ಸಾಧ್ಯ. ಅಂಥ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದ ಸಂದರ್ಭದಲ್ಲಿ ಎಲ್ಲರೂ ಕಾನೂನಿನ ವೈಫಲ್ಯದ ಬಗ್ಗೆಯೇ ಪ್ರತಿಕ್ರಿಯಿಸುತ್ತಾರೆ. ಆದರೆ ಕಾನೂನಿನ ಸಮರ್ಪಕ ಜಾರಿಗೆ ವಿಚಾರಣೆ ವೇಳೆ ಅಗತ್ಯವಾಗಿರುವ ಸಾಕ್ಷಿ ನೀಡಿಕೆಗೆ ನ್ಯಾಯಾಲಯಕ್ಕೆ ಆಗಮಿಸಲೂ ಹಿಂದೇಟು ಹಾಕುವಂಥ ಮನೋಭಾವ ಹೋಗಬೇಕಿದೆ ಎಂದು ಸಲಹೆ ನೀಡಿದರು.
ಕಾನೂನು ದುರ್ಬಳಕೆ ಬೇಡ: ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಲ್ಲಿ ಹೆದರಿಕೆ ಮೂಡಿಸುವಂಥ ಪರಿಸರ ನಿರ್ಮಿಸಿದರೆ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಇಳಿಕೆಯಾಗುತ್ತವೆ. ಅಪರಾಧಿಗಳಿಗೆ ಶಿಕ್ಷೆ ಖಾತ್ರಿಯಾಗಿಸಿದರೆ ಮಾತ್ರ ಮಹಿಳೆಯರು ಸಹಜ ಬದುಕು ಸಾಗಿಸಲು ಸಾಧ್ಯ ಎಂದರು.
ಅದೇ ರೀತಿ ಮಹಿಳೆಯರ ರಕ್ಷಣೆಗೆ ರೂಪಿಸಿದಂಥ ವಿವಿಧ ಕಾನೂನುಗಳ ದುರ್ಬಳಕೆಯನ್ನು ಅನೇಕ ಪ್ರಕರಣಗಳ ವಿಚಾರಣೆ ವೇಳೆ ಗಮನಕ್ಕೆ ಬಂದಿದ್ದಾಗಿ ತಿಳಿಸಿದ ಅವರು, ಮಹಿಳೆಯರು ತಮ್ಮ ಪತಿ ಮತ್ತು ಆತನ ಮನೆಯವರ ವಿರುದ್ಧವೇ ಸುಳ್ಳು ದೂರು ದಾಖಲಿಸುವುದರಿಂದ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂಬ ಅರಿವಿರಿಸಿಕೊಳ್ಳುವುದು ಅವಶ್ಯ ಎಂದರು.
ಪ್ರಗತಿಪಥದತ್ತ ಮಹಿಳೆ...: ಜಿಪಂ ಸಿಇಒ ಟಿ. ಜ್ಞಾನಪ್ರಕಾಶ್ ಮಾತನಾಡಿ, ದೇಶದಲ್ಲಿ ಮಹಿಳೆಯರು ಎಲ್ಲ ರೀತಿಯ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಸಂತಸದ ಸಂಗತಿ. ಪುರುಷನಷ್ಟೇ ಸರಿಸಮಾನವಾಗಿ ಸಮಾಜದ ಹಾಗೂ ದೇಶದ ಪ್ರಗತಿಗೆ ಮಹಿಳೆ ಕೊಡುಗೆ ನೀಡುತ್ತಿದ್ದಾರೆಂದು ಹೇಳಿದರು.
ದೇಶದ ರಾಷ್ಟ್ರಪತಿ, ಸ್ಪೀಕರ್ ಆಗಿಯೂ ಮಹಿಳೆಯು ಕಾರ್ಯನಿರ್ವಹಿಸಿದ್ದು ದೇಶದಲ್ಲಿ ಮಹಿಳೆ ಪ್ರಗತಿಪಥದತ್ತ ಸಾಗುತ್ತಿರುವುದರ ಸಂಕೇತ. ಮಹಿಳೆಯರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯಕ್ರಮಗಳ ಸಮರ್ಪಕ ಜಾರಿಗೆ ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳಿಗೆ ಕೋಟ್ಯಂತರ ರು. ಅನುದಾನ ಒದಗಿಸುತ್ತಿದ್ದು, ಅನುದಾನದ ಸಮರ್ಪಕ ಬಳಕೆ ಮೂಲಕ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮುಂದುವರಿಯಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎ. ಮೂಲಿಮನಿ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ವಕೀಲರ ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ, ಸಹಾಯಕ ಆಯುಕ್ತೆ ಮಂಜುಶ್ರೀ, ಡಿಎಸ್ಪಿ ಡಾ. ದಿವ್ಯಾ ಗೋಪಿನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.
ಜಾಗೃತಿ ಜಾಥಾ: ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ರಂಗಮಂದಿರದವರೆಗೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಜಾಥಾ ನಡೆಯಿತು.