ಸಿಂಧನೂರು ನಗರಸಭೆ: ಈಗ ಮೈತ್ರಿ ಯೋಗ?
ಸಿಂಧನೂರು: ನಗರಸಭೆ ಚುನಾವಣೆಯ ಮತದಾನ ಭಾನುವಾರ ಮುಗಿಯುತ್ತಿದ್ದಂತೆ ವಿದ್ಯುನ್ಮಾನ ಮತಯಂತ್ರಗಳು ಅತ್ತ ಸರ್ಕಾರಿ ಕಾಲೇಜು ಸೇರಿದವು. ಇತ್ತ ಎಲ್ಲ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಗೆಲವು- ಸೋಲುಗಳ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ.
ಕೆಲ ವಾರ್ಡ್‌ಗಳಲ್ಲಿ ಇದೇ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾನೆ. ಬೇಕಾದರೆ ಬೆಟ್ ಕಟ್ಟಿ ಎಂದು ಕೆಲವರು ಹೇಳಿಕೊಂಡರೆ, ಇನ್ನು ಕೆಲವರು ಇದಕ್ಕೆ ಕೆಜೆಪಿ, ಬಿಎಸ್ಸಾರ್ ಪಕ್ಷಗಳು ಕಾಂಗ್ರೆಸ್, ಬಿಜೆಪಿ ಗೆಲವಿಗೆ ಅಡ್ಡಗಾಲು ಹಾಕುವ ಬಗ್ಗೆಯೂ ಮಾತನಾಡುತ್ತಿದ್ದಾರೆ.
ಕಳೆದ ಬಾರಿ 31 ವಾರ್ಡ್‌ಗಳ ಪೈಕಿ ಜೆಡಿಎಸ್ 15 ಸ್ಥಾನಗಳನ್ನು ಗೆದ್ದಿತ್ತು. ಅವರಿಗೆ ಅಧಿಕಾರಕ್ಕೆ ಬರಲು ಒಬ್ಬ ಸದಸ್ಯರ ಅವಶ್ಯಕತೆ ಇತ್ತು. ಆಗ ಬಿಜೆಪಿಯ ಇಬ್ಬರು ಸದಸ್ಯರನ್ನು ದೇವೇಗೌಡರ ಸಮಕ್ಷಮದಲ್ಲಿ ಸೇರ್ಪಡೆ ಮಾಡಿಸಿಕೊಂಡು ಅಧಿಕಾರದ ಗದ್ದುಗೆ ಏರಿತ್ತು. ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದಲ್ಲಿ 5 ವರ್ಷ ಕಳೆಯಿತು.
ಅಲ್ಲದೆ, ಜೆಡಿಎಸ್‌ನ ದುರಾಡಳಿತದ ಬಗ್ಗೆ ಕಾಂಗ್ರೆಸ್ ಪ್ರತಿ ವಾರ್ಡ್‌ಗಳಲ್ಲಿ ಪ್ರಚಾರ ಮಾಡಿ ತನಗೆ ಆಶೀರ್ವಾದ ಮಾಡಬೇಕೆಂದು ಕೋರಿತು. ಈ ಮಧ್ಯೆ ಬಿಎಸ್ಸಾರ್ ಹಾಗೂ ಕೆಜೆಪಿ ಕಣದಲ್ಲಿದ್ದುದರಿಂದ ಪ್ರತಿ ವಾರ್ಡ್‌ನಲ್ಲಿ ಪಕ್ಷೇತರರು ಸೇರಿದಂತೆ 5- 6 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಜೆಡಿಎಸ್‌ಗೆ ಎರಡು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳೇ ಸಿಗಲಿಲ್ಲ. ಕಾಂಗ್ರೆಸ್ ಹಾಗೂ ಬಿಎಸ್ಸಾರ್ 31 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು. ಅದರಂತೆ ಚುನಾವಣೆ ನಡೆದು ಮತದಾರ ತನ್ನ ಹಕ್ಕು ಚಲಾಯಿಸಿದ್ದಾನೆ.
ಈಗ ಮೈತ್ರಿ ಲೆಕ್ಕಾಚಾರ: ಈಗ ಕಾಂಗ್ರೆಸ್ ಕನಿಷ್ಠ 18-20 ಸೀಟುಗಳನ್ನು ಪಡೆದು ಅಧಿಕಾರಕ್ಕೆರುವುದು ಖಚಿತವೆಂದು ನಗರ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಹಗೀರದಾರ ಹೇಳಿದರೆ, ಬಿಎಸ್ಸಾರ್ ಕೋರ್ ಕಮಿಟಿ ಸದಸ್ಯ ಕೆ.ವಿರುಪಾಕ್ಷಪ್ಪ, ನಮ್ಮ ಪಕ್ಷ ಬಹುಮತ ಪಡೆಯುವ ವಿಶ್ವಾಸವಿದೆ. ಒಂದು ವೇಳೆ ಸೀಟುಗಳು ಕಡಿಮೆ ಬಿದ್ದರೆ ಕೆಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವುದಾಗಿ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ತಮಗೆ ಪ್ರಬಲ ಪ್ರತಿ ಸ್ಪರ್ಧಿ. ಹೀಗಾಗಿ ಅದಕ್ಕೆ ಬೆಂಬಲಿಸುವ ವಿಚಾರವೇ ಇಲ್ಲ. ಜೆಡಿಎಸ್‌ಗೆ ಬಹುಮತ ಬರದಿದ್ದರೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಶಾಸಕ ವೆಂಕಟರಾವ ನಾಡಗೌಡ ದೂರವಾಣಿಯಲ್ಲಿ ಉತ್ತರಿಸಿದರು.
ಕೆಜೆಪಿ- ಬಿಎಸ್ಸಾರ್ ಮೈತ್ರಿ?: ಕೆಜೆಪಿ ಮುಖಂಡ ರಾಜಶೇಖರ ಪಾಟೀಲ ಅವರ ಪ್ರಕಾರ- ಈ ಬಾರಿ ಕೆಜೆಪಿ ಕನಿಷ್ಠ 10- 12 ಸೀಟುಗಳನ್ನು ಪಡೆಯುತ್ತದೆ. ಸಂದರ್ಭ ಬಂದರೆ ಬಿಎಸ್ಸಾರ್ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಆಡಳಿತವನ್ನು ಹೊಂದುವುದಾಗಿ ವಿಶ್ವಾಸದಿಂದ ಹೇಳುತ್ತಾರೆ.
ಈ ಬಾರಿ ಕಾಂಗ್ರೆಸ್‌ಅನ್ನು ಅಧಿಕಾರದಿಂದ ದೂರವಿಡಲು ಎಲ್ಲ ಪಕ್ಷಗಳ ಮುಖಂಡರು ಸೆಡ್ಡು ಹೊಡೆದಂತಿದೆ. ಈ ಮಧ್ಯೆ ಕಾರ್ಯಕರ್ತರು ತಮ್ಮ ಬೆಂಬಲಿಗ ಅಭ್ಯರ್ಥಿಗಳು ಗೆಲ್ಲುತ್ತಾರೆಂಬ ಸೋಲು- ಗೆಲವುಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದೆಲ್ಲದಕ್ಕೂ ಮಾ.11ರ ಫಲಿತಾಂಶ ಸೂಕ್ತ ಉತ್ತರ ಹೇಳಬೇಕು.
ಜೆಡಿಎಸ್‌ನಿಂದ ಮಾತ್ರ ರೈತರ ಅಭಿವೃದ್ಧಿ: ಸೋಮನಾಥ
ಸಿಂಧನೂರು: ಬಳಗಾನೂರಲ್ಲಿ ತಮ್ಮ ಆಡಳಿತಾವಧಿಯಲ್ಲಿ ರೈತಪರ ಯೋಜನೆ ಜಾರಿಗೆ ತರುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಇನ್ನೂ ಜನಮಾನಸದಲ್ಲಿ ಉಳಿದಿದ್ದಾರೆ. ಜೆಡಿಎಸ್‌ನಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ಹೇಳಿದರು.
ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಸಭೆಯನ್ನುದ್ದೇಶಿಸಿ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಎದೆಗುಂದದೆ ಪಕ್ಷವನ್ನು ಗ್ರಾಮೀಣ ಮಟ್ಟದಿಂದ ಕಟ್ಟಿ. ಎದುರಾಗುವ ಯಾವುದೇ ಸವಾಲುಗಳನ್ನು ಗಟ್ಟಿ ಮನಸ್ಸಿನಿಂದ ಪರಿಹರಿಸಿಕೊಳ್ಳಿ. ಜಟಿಲ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಸನ್ನದ್ಧರಾಗುವಂತೆ ಮನವಿ ಮಾಡಿದರು.
ಕಾರ್ಯಾಧ್ಯಕ್ಷ ಅಮರೇಶ ಹಂಚಿನಾಳ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪೀರ್ ಅಹ್ಮದ್, ಸಂಘಟನಾ ಕಾರ್ಯದರ್ಶಿ ಶೇಖರಗೌಡ, ಹುಸೇನಬಾಷಾ ಮಾತನಾಡಿದರು. ಮಲ್ಲಪ್ಪ ಬಾರಕೇರ, ಶರಣಬಸವ, ವಿರುಪಣ್ಣ ಪರಡ್ಡಿ, ನಂದೀಶ ನಾಯಕ ಇದ್ದರು.