ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೋಲು- ಗೆಲವಿನ ಲೆಕ್ಕಾಚಾರ ಶುರು

Srinivasa Murthy VN
Updated On : 9 Mar 2013, 10:29 am

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.8
ಭಾರೀ ಪ್ರಮಾಣದ ಮತದಾನದ ಅಭ್ಯರ್ಥಿಗಳ ಕನಸು ಭಗ್ನವಾಗಿದೆ. ಭರ್ಜರಿ ಗೆಲವು ಇನ್ನೂ ಮರೀಚಿಕೆಯೇ ಸರಿ. ಮತದಾರರ ಪಟ್ಟಿಯ ಅವಾಂತರ ಅಭ್ಯರ್ಥಿಗಳಲ್ಲಿ ಆತಂಕ ತಂದಿದೆ. ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯ ಮತದಾನ ಮುಗಿದು ಈಗ ಸೋಲು- ಗೆಲವಿನ ಲೆಕ್ಕಾಚಾರ ಆರಂಭಗೊಂಡಿದೆ.
ಜಿಲ್ಲೆಯ ಎರಡು ನಗರಸಭೆ, ಮೂರು ಪುರಸಭೆಗಳು ಹಾಗೂ ಒಂದು ಪಟ್ಟಣ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆಗೆ ಗುರುವಾರ ಮತದಾನ ಪೂರ್ಣಗೊಂಡಿದೆ. ಮತದಾನ ಶಾಂತಿಯುತವಾಗಿಯೇ ನಡೆದಿದೆ. ಆದರೆ ಅಭ್ಯರ್ಥಿಗಳ ನೆಮ್ಮದಿ ಮಾತ್ರ ಭಂಗವಾಗಿದೆ. ದೋಷಪೂರಿತ ಮತದಾರರ ಪಟ್ಟಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಲ್ಲಿ ಗೊಂದಲ ಸೃಷ್ಟಿಸಿದೆ.
ಅಭ್ಯರ್ಥಿಗಳಲ್ಲಿ ನಡುಕ: ಈಗಾಗಲೇ ಮತಯಂತ್ರಗಳನ್ನು ಆಯಾ ಪ್ರದೇಶದ ಕಾಲೇಜುಗಳಲ್ಲಿ ಭದ್ರವಾಗಿರಿಸಲಾಗಿದೆ. ಬಿಗಿ ಪೊಲೀಸ್ ಕಾವಲೂ ಹಾಕಲಾಗಿದೆ. ಮಾ. 11ರಂದು ಮತಗಳ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಇತ್ತ ಸಜ್ಜಾಗುತ್ತಿದೆ. ಆದರೆ ಗೆಲವಿನ ಲೆಕ್ಕಾಚಾರದಲ್ಲಿದ್ದ ಅಭ್ಯರ್ಥಿಗಳಿಗೀಗ ನಡುಕ ಆರಂಭವಾಗಿದೆ.
ಮತದಾನಕ್ಕೆ ತೆರಳಿದವರ ಹೆಸರೇ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಜಿಲ್ಲಾಡಳಿತದ ಕ್ರಮಕ್ಕೆ ರಾಜಕೀಯ ಪಕ್ಷಗಳು ಹರಿ ಹಾಯುತ್ತಿವೆ. ಆದರೆ ಜಿಲ್ಲಾಡಳಿತದ್ದು ಒಂದೇ ಉತ್ತರ ಚುನಾವಣೆಯ ಕಾಲದಲ್ಲಿ ಪಟ್ಟಿಯಲ್ಲಿ ಬದಲಾವಣೆ ಅಸಾಧ್ಯ. ಹೀಗಾಗಿ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಮತದಾನ ಮುಗಿಸಿವೆ ಎನ್ನಬಹುದು.
ಪ್ರತಿ ವಾರ್ಡ್‌ಗೆ ಸಾವಿರ ಮತದಾರರು ಹಕ್ಕು ಚಲಾಯಿಸಿಲ್ಲ: ಈ ಮಧ್ಯೆ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿನ ಕಡಿಮೆ ಪ್ರಮಾಣದ ಮತದಾನ ಹಾಗೂ ಮತದಾರರ ಪಟ್ಟಿಯ ದೋಷವು ಅಭ್ಯರ್ಥಿಗಳನ್ನು ಆತಂಕಕ್ಕೆ ನೂಕಿದೆ. ಎಲ್ಲ ದಾಖಲೆಗಳು ಲಭ್ಯವಿದ್ದರೂ ಪ್ರತಿ ವಾರ್ಡಿನಲ್ಲಿ 800ರಿಂದ 1 ಸಾವಿರ ಜನ ಮತದಾನದಿಂದ ವಂಚಿತರಾಗಿರುವುದು ಆತಂಕಕ್ಕೆ ಮೂಲ ಕಾರಣ. ಅದೇ ರೀತಿ ವಾರ್ಡುಗಳಿಂದ ಮತದಾರರನ್ನು ಬೇರೆಡೆ ಸ್ಥಳಾಂತರಿಸಿದ್ದರಿಂದ ಅನೇಕರು ಮತದಾನಕ್ಕೆ ಆಸಕ್ತಿ ತೋರದಿರುವುದು ಗೊತ್ತಾಗಿದೆ.
ಪ್ರತಿ ಬಾರಿ ಮತದಾನದ ನಂತರದಲ್ಲಿ ಮತಗಳ ಲೆಕ್ಕಾಚಾರ ಹಾಕುತ್ತಿದ್ದ ಅಭ್ಯರ್ಥಿಗಳು ತಮ್ಮ ಗೆಲವು ನಿಶ್ಚಿತ ಎಂದೇ ಹೇಳಿಕೊಳ್ಳುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷದಲ್ಲಿಯೂ ನಿಶ್ಚಿತ ಗೆಲವು ಪಡೆಯುವ ವಿಶ್ವಾಸವುಳಿದಿಲ್ಲ ಎಂಬುದು ಸ್ಪಷ್ಟ.
ರಾಯಚೂರು ನಗರಸಭೆ ಗೊಂದಲದ ಗೂಡು: ಜಿಲ್ಲೆಯಲ್ಲಿಯೇ ರಾಯಚೂರು ನಗರಸಭೆಯ ಮತದಾನ ಮಾತ್ರ ಗೊಂದಲ ಗೂಡಾಗಿತ್ತು. ಸುಮಾರು 50 ಸಾವಿರಕ್ಕೂ ಹೆಚ್ಚಿನ ಮತದಾರರ ಹೆಸರುಗಳಿಗೆ ಜಿಲ್ಲಾಡಳಿತ ಕತ್ತರಿ ಪ್ರಯೋಗಿಸಿದ್ದು ಅಭ್ಯರ್ಥಿಗಳನ್ನು ಆತಂಕಕ್ಕೆ ಸಿಲುಕಿಸಿದೆ. ಸ್ಥಳೀಯ ಸಂಸ್ಥೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಂಬುದನ್ನು ಹೇಳಲಾಗದಷ್ಟು ಚುನಾವಣೆ ಗೊಂದಲ ಮೂಡಿಸಿದೆ.
ಈಗ ಮಾ.11ರ ಫಲಿತಾಂಶದವರೆಗೆ ಎಲ್ಲರೂ ಕಾಯುವಂತಾಗಿದೆ. ರಾಜಕೀಯ ಲೆಕ್ಕಾಚಾರವನ್ನು ಮತದಾರರ ಪಟ್ಟಿ ಬುಡಮೇಲು ಮಾಡಿದೆ. ರಾಜಕೀಯ ಪಕ್ಷಗಳು ತಲೆ ಮೇಲೆ ಕೈಹೊತ್ತು ಕುಳಿತಿವೆ. ಅಭ್ಯರ್ಥಿಗಳಿಗೆ ಫಲಿತಾಂಶದ ನಂತರವೇ ನೆಮ್ಮದಿ ಎಂಬುದರಲ್ಲಿ ಎರಡು ಮಾತಿಲ್ಲ. ಇವೆಲ್ಲದರ ಮಧ್ಯೆ ಮತದಾರರು ಅವಾಂತರಗಳಿಂದಾಗಿ ಫಲಿತಾಂಶ ಏನಾದೀತು ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.

ಮತಪಟ್ಟಿ ಅವಾಂತರ ಮರು ಚುನಾವಣೆಗೆ ಆಗ್ರಹ
ರಾಯಚೂರು:
ದೋಷಪೂರಿತ ಮತದಾರರ ಪಟ್ಟಿಯಿಂದಾಗಿ 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮರುಚುನಾವಣೆ ನಡೆಸಬೇಕು. ಮತದಾರರ ಪಟ್ಟಿಯ ಅವಾಂತರಕ್ಕೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಜೆಡಿಎಸ್ ದೂರು ಸಲ್ಲಿಸಲು ನಿರ್ಧರಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಮಾಜಿ ಸಚಿವ ಎಂ.ಎಸ್. ಪಾಟೀಲ್ ಮಾತನಾಡಿ, ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆದ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ. ಜಿಲ್ಲಾಡಳಿತ ಮತದಾರರ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.
ಪ್ರತಿ ವಾರ್ಡ್‌ಲ್ಲಿ ಮತದಾರರ ಹೆಸರು ನಾಪತ್ತೆ: ಪ್ರತಿಯೊಂದು ವಾರ್ಡಿನಲ್ಲಿ ಕನಿಷ್ಠ 800ರಿಂದ 1 ಸಾವಿರವರೆಗೆ ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ. ಅದಕ್ಕೆ ಜಿಲ್ಲಾಡಳಿತದ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಅದರಲ್ಲೂ ರಾಯಚೂರಿನ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ನಗರದ 35 ವಾರ್ಡುಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರನ್ನು ಯಾವುದೇ ಆಧಾರವಿಲ್ಲದೇ ಪಟ್ಟಿಯಿಂದ ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಲೋಪ ಸರಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಸದ್ಯದ ಚುನಾವಣೆಯಲ್ಲಿ ಮತದಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಗೊಂದಲಕ್ಕೆ ಅಸಹಕಾರ ಕಾರಣ: ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುನ್ನ ದೋಷ ಸರಿಪಡಿಸುವ ಅಗತ್ಯತೆಯಿದೆ. ತಪ್ಪಿದಲ್ಲಿ ಜೆಡಿಎಸ್‌ನಿಂದ ಉಗ್ರ ಹೋರಾಟ ನಡೆಸಲಾಗುತ್ತದೆ. ಸಹಾಯಕ ಆಯುಕ್ತರು ಪ್ರಾಮಾಣಿಕರಾಗಿದ್ದು ಅವರಿಗೆ ಆಡಳಿತದಲ್ಲಿ ಇನ್ನುಳಿದವರು ಅಸಹಕಾರ ತೋರಿದ್ದರಿಂದಲೇ ಮತದಾರರ ಪಟ್ಟಿಯಲ್ಲಿ ಗೊಂದಲಕ್ಕೆ ದಾರಿ ಮಾಡಿತೆಂದು ಅವರು ಆರೋಪಿಸಿದರು.
ಮತದಾರರ ಪಟ್ಟಿಯಲ್ಲಿನ ದೋಷದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗವು ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಇಂಥ ಕೃತ್ಯ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಯಚೂರು ನಗರಸಭೆಯ ಎಲ್ಲ 35 ವಾರ್ಡುಗಳಿಗೆ ಪುನಾ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.
ಆಯೋಗಕ್ಕೆ ದೂರು ಸಲ್ಲಿಸುವೆ: ಈಗಾಗಲೇ ನಗರಸಭೆಯ ಚುನಾವಣೆಯ ಮತದಾನದ ದೋಷದ ಬಗ್ಗೆ ರಾಜ್ಯ ಚುನಾವಣೆ ಆಯೋಗಕ್ಕೆ ಫ್ಯಾಕ್ಸ್ ಮೂಲಕ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಪಕ್ಷದ ಪ್ರಮುಖರು ಆಯೋಗಕ್ಕೆ ಖುದ್ದಾಗಿಯೂ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.
ರಾಯಚೂರು ನಗರಸಭೆಯ ಚುನಾವಣೆಯಲ್ಲಿ ಉಂಟಾದ ಗೊಂದಲದ ಬಗ್ಗೆ ಈಗಾಗಲೇ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷದ ವರಿಷ್ಠರ ನಿರ್ದೇಶನದಂತೆ ಮುಂದುವರಿಯುವುದಾಗಿ ಅವರು ತಿಳಿಸಿದರು. ಪಕ್ಷದ ಪ್ರಮುಖರಾದ ಈ.ಆಂಜನೇಯ, ವಿರೂಪಾಕ್ಷಿ, ಡಾ.ಶಿವರಾಜ್ ಪಾಟೀಲ್, ಶಿವಶಂಕರ್, ತಿಮ್ಮಪ್ಪ ಫಿರಂಗಿ, ತಿಮ್ಮಾರೆಡ್ಡಿ, ಎಂ.ಪವನಕುಮಾರ್ ಸೇರಿದಂತೆ ಅನೇಕರಿದ್ದರು.

ಸೀಲಿಂಗ್ ಫ್ಯಾನ್ ಪ್ರಾಬ್ಲಂ...!
ಮುದಗಲ್:
ಮತಗಟ್ಟೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳ ಭಾವಚಿತ್ರ ಅಥವಾ ಅವರ ಪಕ್ಷದ ಗುರುತುಗಳು ಕಾಣಬಾರದೆಂಬ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶವಿದ್ದರೂ ಮತಗಟ್ಟೆ 10 ಮತ್ತು 11ರಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಚಿಹ್ನೆಯಾದ ಸೀಲಿಂಗ್ ಫ್ಯಾನ್ ತೂಗು ಹಾಕಲಾಗಿತ್ತು. ಚುನಾವಣಾಧಿಕಾರಿಗಳು ಇವುಗಳನ್ನು ತೆರವುಗೊಳಿಸದೇ ಕೇವಲ ಕಾಟಾಚಾರಕ್ಕೆ ಫ್ಯಾನ್‌ಗಳ ಮೇಲೆ ಬಟ್ಟೆ ಸುತ್ತಿ ನೇತು ಬಿಡಲಾಗಿದ್ದನ್ನು ಕಂಡ ಬೇರೆ ಪಕ್ಷದ ಅಭ್ಯರ್ಥಿಗಳು ತಗಾದೆ ತಗೆದರು. ಆಗ ಪತ್ರಕರ್ತರು ಛಾಯಾಚಿತ್ರ ತೆಗೆಯಲು ಮುಂದಾಗುತ್ತಿದ್ದಂತೆ ಚುನಾವಣಾಧಿಕಾರಿಗಳು ಮತಗಟ್ಟೆ ಕೇಂದ್ರಗಳಿಗೆ ಧಾವಿಸಿ ನೇತು ಬಿಡಲಾಗಿದ್ದ ಫ್ಯಾನ್‌ಗಳನ್ನು ತೆರವುಗೊಳಿಸಿದರು. ಕಾಂಗ್ರೆಸ್ ಚಿಹ್ನೆ 'ಕೈ' ಇದ್ದು, ಕಾಂಗ್ರೆಸ್ ಚಿಹ್ನೆಯಾದ ಎಲ್ಲರ 'ಕೈ'ಗಳನ್ನು ತೆಗೆಯಬೇಕೆಂದು ಸಾರ್ವಜನಿಕರು ಮಾತನಾಡಿಕೊಂಡರು.
ಪತ್ರಕರ್ತರಿಗೆ ನಿರ್ಬಂಧ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಕುರಿತಾದ ವರದಿಗಾರಿಕೆಗೆ ತೆರಳಿದ್ದ ಸ್ಥಳೀಯ ಪತ್ರಕರ್ತರಿಗೆ ಮತಗಟ್ಟೆ ಪ್ರವೇಶಿಸಲು ಚುನಾವಣಾಧಿಕಾರಿಗಳು ನಿರ್ಬಂಧ ಹಾಕಿದ ಪ್ರಸಂಗ ಗುರುವಾರ ಮತಗಟ್ಟೆ 10ರ ನಾಡ ಕಾರ್ಯಾಲಯದಲ್ಲಿ ಜರುಗಿತು. ಇದರಿಂದಾಗಿ ಕೆಲ ಸಮಯ ಅಧಿಕಾರಿಗಳು ಮತ್ತು ಪತ್ರಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಚುನಾವಣಾ ಆಯೋಗವೇ ಮಾಧ್ಯಮದವರಿಗೆ ಪ್ರವೇಶ ಪ್ರಕಟಿಸಿದೆ. ಆದರೆ ಪತ್ರಕರ್ತರ ಹಕ್ಕನ್ನು ಕಸಿದುಕೊಳ್ಳುತ್ತೀರಿ ಎಂದು ಅಧಿಕಾರಿಗಳೊಂದಿಗೆ ವಾದಿಸಿದರು. ಆಗ ಮಧ್ಯಸ್ಥಿಕೆ ವಹಿಸಿದ ಚುನಾವಣಾಧಿಕಾ ಛಾಯಾಚಿತ್ರ ತೆಗೆಯಲು ಅನುವು ಮಾಡಿಕೊಟ್ಟರು.

'ಪ್ರತಾಪಗೌಡ ಎಲ್ಲಿತ್ತಾರೋ ನಾವೂ ಅಲ್ಲೇ...'
ಸಿಂಧನೂರು:
ಪ್ರತಾಪಗೌಡ ಪಾಟೀಲರು ನಮ್ಮ ನಾಯಕರು, ನಾವು ಅವರ ಅಭಿಮಾನಿಗಳು. ಅವರು ಎಲ್ಲಿರುತ್ತಾರೋ ನಾವು ಅಲ್ಲಿರುತ್ತೇವೆ..
- ಹೀಗೆಂದು ಹೇಳಿದವರು ಮಸ್ಕಿ ಶಾಸಕ ಪ್ರತಾಪಗೌಡರ ನೂರಾರು ಅಭಿಮಾನಿಗಳು.
ಶುಕ್ರವಾರ ಮಸ್ಕಿ ಶಾಸಕ ಪ್ರತಾಪಗೌಡರ ನಿವಾಸದಲ್ಲಿ ಪಾಟೀಲರ ಅಭಿಮಾನಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಕಾರ್ಯದರ್ಶಿ ಬಸವರಾಜ ಸ್ವಾಮಿ ಹಸಮಕಲ್ ಮಾತನಾಡಿ, ಮಸ್ಕಿ ಶಾಸಕರ ಜಾತ್ಯತೀತ ಮನೋಭಾವನೆ, ಅವರ ಸರಳತನವೇ ನಮ್ಮಲ್ಲಿ ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನ ಮೂಡಿಸಿದೆ. ಮಸ್ಕಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು, ಅವರೇ ಬೇರೆ ಬೇರೆ ಸಂದರ್ಭಗಳಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದರೂ ಬಿಜೆಪಿ ಮುಖಂಡರು ಮಸ್ಕಿ ಕ್ಷೇತ್ರದ ಪದಾಧಿಕಾರಿಗಳನ್ನು ಸಂಪರ್ಕಿಸಿಲ್ಲ. ಕನಿಷ್ಠ ಪಕ್ಷದಲ್ಲಿ ಮುಂದುವರೆಯುವಂತೆ ವಿನಂತಿಸಿಲ್ಲ. ಅವರ ಉದಾಸೀನ ನೀತಿಯನ್ನು ವಿರೋಧಿಸಿ ತಾವು ಮಸ್ಕಿ ಶಾಸಕರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ ಅವರನ್ನು ಹಿಂಬಾಲಿಸುವುದಾಗಿ ಹೇಳಿದರು. ದಯನೀಯ ಸ್ಥಿತಿಯಲ್ಲಿದ್ದ ಬಿಜೆಪಿಯಲ್ಲಿ ಉಳಿಯುವುದಕ್ಕಿಂತ ಕಾಂಗ್ರೆಸ್ ಸೇರುವುದೇ ಲೇಸೆಂಬ ನಿರ್ಧಾರಕ್ಕೆ ಶಾಸಕರು ಬಂದಿದ್ದಾರೆ. ಆದರೂ ಬಿಜೆಪಿ ಹೈಕಮಾಂಡ್ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದ ಶಾಸಕರನ್ನು ಹಿಂಬಾಲಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಉತ್ತರಿಸಿದರು. ಶರಣಪ್ಪ ಸಾಹುಕಾರ ವಕ್ರಾಣಿ, ದುರ್ಗೇಶ ಭೋಗಾಪುರ, ಅಮರೇಶ ತಿಡಿಗೋಳ, ಬಸವರಾಜಪ್ಪ ಗುಡದೂರ, ಅಮರೇಶ ಗಚ್ಚಿನಮನಿ, ಶರಣಬಸವ ಮತ್ತಿತರರು ಇದ್ದರು.

ಮಸ್ಕಿ: ಕೆಜೆಪಿಗೆ ಅನೇಕರ ಸೇರ್ಪಡೆ
ಮಸ್ಕಿ:
40 ವರ್ಷಗಳಿಂದ ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅದೇ ಪಕ್ಷದವರು ಬೆನ್ನಿಗೆ ಚೂರಿ ಹಾಕಿದ್ದರಿಂದ ಕೆಜೆಪಿ ಪಕ್ಷ ಸ್ಥಾಪಿಸಬೇಕಾಯಿತು ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ಮಹಾದೇವಪ್ಪಗೌಡ ಹೇಳಿದರು.
ಸಮೀಪದ ಬಳಗಾನೂರು ಗ್ರಾಮದ ಆಂಜಿನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೆಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಅಭಿವೃದ್ಧಿ ರಾಷ್ಟ್ರೀಯ ಪಕ್ಷಗಳಿಂದ ಅಸಾಧ್ಯ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಸಾರ್ ತಿರಸ್ಕರಿಸುವಂತೆ ಮನವಿ ಮಾಡಿದರು.
ಪಕ್ಷದ ಸಂಚಾಲಕ ಬಸಣ್ಣ ತೊಂತನಾಳ ಮಾತನಾಡಿದರು. ಬಸನಗೌಡ ಮುದೆಗೌಡರ್, ಮೂಲಿಮನಿ ಬಸಣ್ಣ, ಜಿ. ವೆಂಕಟೇಶ ನಾಯಕ, ಸೂಗಣ್ಣ ಬಾಳೇಕಾಯಿ, ಮೌನೇಶ ನಾಯಕ, ರವಿಕುಮಾರ ಲದ್ದಿ, ನಾಗರಾಜ ಯಂಬಲದ್, ಮಹಾಂತೇಶ ಬ್ಯಾಳಿ, ಮಂಜುನಾಥ ಮಾಟೂರ್, ವೀರೇಶ ಗೌಡ, ಹನುಮೇಶ, ಶ್ರೀಧರ ಕೊಂಡ, ಶಂಕರ ಎನ್. ಜೆಡೆ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸೇರ್ಪಡೆ: ಈ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಹಲವಾರು ಕಾರ್ಯಕರ್ತರು ಜಿಪಂ ಸದಸ್ಯ ಹಾಗೂ ಕೆಜೆಪಿ ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement