ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ
ರಾಯಚೂರು: ಜಿಲ್ಲೆಯಲ್ಲಿ ಮಾ.13ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಗಳು ಸುಗಮ ಹಾಗೂ ಅಕ್ರಮಗಳ ಹೊರತಾದ ಪರೀಕ್ಷೆ ನಡೆಸುವಂತಾಗಲು ಅಗತ್ಯ ಸಿದ್ಧತೆ ಕೈಗೊಂಡಿವೆ.
ಮಾ.13ರಿಂದ 28ರವರೆಗೆ ನಡೆಯುವ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗೆ ಜಿಲ್ಲೆಯಲ್ಲಿ 9691 ಹೊಸ ವಿದ್ಯಾರ್ಥಿಗಳು, 4187 ಪುನರಾವರ್ತಿ ಹಾಗೂ 1112 ಖಾಸಗಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ರಾಯಚೂರು ತಾಲೂಕಿನಲ್ಲಿ 5 ಸಾಮಾನ್ಯ, 5 ಸೂಕ್ಷ ಪರೀಕ್ಷೆ ಕೇಂದ್ರಗಳಿವೆ. ಸಿಂಧನೂರು ತಾಲೂಕಿನಲ್ಲಿ 5 ಸೂಕ್ಷ್ಮ ಮತ್ತು ಒಂದು ಹೊಸ ಕೇಂದ್ರ ಸ್ಥಾಪಿಸಲಾಗಿದೆ. ಮಾನವಿ ತಾಲೂಕಿನಲ್ಲಿ 3 ಕೇಂದ್ರಗಳು ಸೂಕ್ಷ್ಮ ಕೇಂದ್ರಗಳಾಗಿವೆ. ಲಿಂಗಸ್ಗೂರುನಲ್ಲಿ 1 ಸಾಮಾನ್ಯ ಹಾಗೂ 4 ಸೂಕ್ಷ್ಮ ಕೇಂದ್ರಗಳಿದ್ದು, ಒಂದು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ.
ವಿಶೇಷ ವಿಚಕ್ಷಣಾ ದಳ: ದೇವದುರ್ಗ ತಾಲೂಕಿನಲ್ಲಿ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಎರಡೂ ಕೇಂದ್ರಗಳನ್ನು ಅತೀ ಸೂಕ್ಷ್ಮ ಕೇಂದ್ರಗಳೆಂದು ಪರಿಗಣಿಸಲಾಗಿದೆ. ಒಟ್ಟು ಜಿಲ್ಲೆಯ 27 ಕೇಂದ್ರಗಳ ಪೈಕಿ 6 ಸಾಮಾನ್ಯ, 17ಸೂಕ್ಷ್ಮ ಮತ್ತು 3 ಅತೀ ಸೂಕ್ಷ್ಮ ಮತ್ತು ಒಂದು ಹೊಸ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಯು ಇಲಾಖೆ ತಿಳಿಸಿದೆ.
ಪರೀಕ್ಷೆಯ ವೇಳೆ ನಕಲು ತಡೆಗೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿರುವ ವಿಶೇಷ ವಿಚಕ್ಷಣಾ ದಳ ರಚಿಸಿದ್ದು, ಪರೀಕ್ಷೆಯಲ್ಲಿ ನಕಲು ತಡೆಗೆ ನಿಗಾಯಿರಿಸಲಾಗುತ್ತಿದೆ. ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ಅಗತ್ಯ ಆಸನಗಳ ವ್ಯವಸ್ಥೆ, ಕುಡಿವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮುಂದಾಗಿದೆ.
ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳೆ ಯಾವುದೇ ರೀತಿಯಲ್ಲಿ ನಕಲು ನಡೆಯದಂತೆ ಎಚ್ಚರಿಕೆ ವಹಿಸಲು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಡಚಣೆಯಾಗದಂತೆ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.
ಸ್ಥಳಾಂತರ: ಸಿಂಧನೂರು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿರುವ ಹಿನ್ನೆಲೆ ಅಲ್ಲಿನ ಪರೀಕ್ಷೆ ಕೇಂದ್ರವನ್ನು ಸಿಂಧನೂರಿನ ದುದ್ದುಪೂಡಿ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ಡಿಡಿಪಿಯು ಇಲಾಖೆ ಈಗಾಗಲೇ ತಿಳಿಸಿದೆ.
ಕಳೆದ ಕೆಲ ವರ್ಷಗಳಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಕಳಪೆಯಾಗಿದ್ದು, ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದ್ದು, ಆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸುಗಮ ಪರೀಕ್ಷೆ ನಡೆಸಲು ಹಾಗೂ ಅಕ್ರಮ ತಡೆಗೆ ಅಗತ್ಯ ಕ್ರಮ ಕೈಗೊಂಡಿದೆ.
ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ
ರಾಯಚೂರು: ಜಿಲ್ಲೆಯಲ್ಲಿ ಮಾ.13ರಿಂದ 28ರವರೆಗೆ ನಡೆಯಲಿರುವ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಆದೇಶ ಹೊರಡಿಸಿದ್ದಾರೆ. ಪರೀಕ್ಷೆ ಕೇಂದ್ರಗಳ 200 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಪರೀಕ್ಷೆ ಸಮಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ.ಪರೀಕ್ಷೆ ಕೇಂದ್ರದೊಳಗೆ ನಿಯೋಜಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಯಾರನ್ನೂ ಪ್ರವೇಶಿಸಲು ಅವಕಾಶ ನೀಡದಂತೆ ಸೂಚಿಸಿದ್ದಾರೆ. ಅದೇ ರೀತಿ ಪರೀಕ್ಷೆ ಕೇಂದ್ರದೊಳಕ್ಕೆ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಗಳಲ್ಲಿ ಅವ್ಯವಹಾರ ತಡೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.