ಮಹಾಗಾಂವ್ ತಾಲೂಕು ಕೇಂದ್ರವಾಗಿಸಲು ಆಗ್ರಹ
ಗುಲ್ಬರ್ಗ: ಮಹಾಗಾಂವ್ ಸುತ್ತಮುತ್ತಲಿನ 15 ಗ್ರಾಮ ಪಂಚಾಯತಿಯ 109 ಗ್ರಾಮಗಳಿಗೆ ಕೇಂದ್ರಸ್ಥಾನವಾಗಿರುವ ಮಹಾಗಾಂವ್ವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಮಹಾಗಾಂವ್ ತಾಲೂಕು ಹೋರಾಟ ಸಮತಿ ಮುಖ್ಯಮಂತ್ರಿಗೆ ಆಗ್ರಹಿಸಿದೆ.
ಈಗಾಗಲೇ ಮಹಾಗಾಂವ್ ಕ್ರಾಸ್ನಲ್ಲಿ ಹೈನುಗಾರಿಕೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ, ಕೈಗಾರಿಕಾ ತರಬೇತಿ ಕೇಂದ್ರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳಿವೆ. ಆಂಗ್ಲ ಮತ್ತು ಕನ್ನಡ ಮಾಧ್ಯಮ 25 ರಿಂದ 30 ಹಿರಿಯ ಪ್ರಾಥಮಿಕ ಶಾಲೆಗಳು, 10-12 ಪ್ರೌಢಶಾಲೆಗಳು ಹಾಗೂ ಮಹಾಗಾಂವ್ ಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ 218 ಹಾದುಹೋಗಿದ್ದು, ನಾಲ್ಕು ರಾಜ್ಯಗಳಿಗೆ ನೇರ ಸಂಪರ್ಕವಿದೆ. ದಿನಾಲು ಸುಮಾರು 10-15 ಸಾವಿರ ಜನರು ಇಲ್ಲಿಂದ ಪ್ರಯಾಣಿಸುತ್ತಾರೆ. ಪ್ರತಿ ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ದನಗಳ ಸಂತೆ ಮತ್ತು ತರಕಾರಿ ಮಾರುಕಟ್ಟೆ ಇತ್ಯಾದಿ ಸೌಲಭ್ಯವೂ ಇದೆ.
ಕಳೆದ 15 ವರ್ಷಗಳಿಂದ ಮಹಾಗಾಂವ್ನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಹೋರಾಟ ಮಾಡಲಾಗುತ್ತಿದೆ. ಅನೇಕ ಬಾರಿ ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಹೋರಾಟದ ಮೂಲಕ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಮಹಾಗಾಂವ್ನ್ನು ವಿಶೇಷ ತಹಸೀಲ್ದಾರ್ ಕಾರ್ಯಾಲಯ ಸ್ಥಾಪಿಸಲು ಸೂಚಿಸಿದ್ದಾರೆ. ಅದೇ ರೀತಿ ಬೆಣ್ಣೆತೊರಾ ಯೋಜನೆಯಡಿ ಮುಳುಗಡೆಯಾದ ನಾಗೂರು, ಹರಕಂಚಿ, ತಡಕಲ್, ಗ್ರಾಮಗಳನ್ನು ಪುನರ್ ಪರಿಶೀಲಿಸಿ ಮಹಾಗಾಂವ್ ಗ್ರಾಮಕ್ಕೆ ಸೇರ್ಪಡೆ ಮಾಡಿಕೊಂಡು ಪುನರ್ ವಸತಿ ಕಲ್ಪಿಸಿದೆ. ಹೀಗಾಗಿ ಮಹಾಗಾಂವ್ನ್ನು ಕೂಡಲೇ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಗುಲ್ಬರ್ಗ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಮಹಾಗಾಂವ್ನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ನಿರಾಕರಿಸಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೃಹತ್ ಪ್ರತಿಭಟನೆ ಮಾಡಿ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಣಯಿಸಬೇಕಾಗುತ್ತದೆ ಎಂದು ಮಹಾಗಾಂವ್ ತಾಲೂಕು ಹೋರಾಟ ಸಮಿತಿ ಮನವಿಯಲ್ಲಿ ಎಚ್ಚರಿಸಿದೆ.
ಸಚಿವ ರೇವುನಾಯಕ ಬೆಳಮಗಿ, ವೈಜನಾಥ ತಡಕಲ್, ಬಸವರಾಜ ಮೊಳಕೇರಿ, ಶ್ರೀಕಾಂತ ಪಾಟೀಲ್, ಮಜರ ಅಲಿ ದರ್ಜಿ, ನಂದಕುಮಾರ ಹರಸೂರಕರ್, ನಿರಂಜನಸ್ವಾಮಿ, ಜಗನ್ನಾಥ ಹೊಸಮನಿ, ರೇವಣಸಿದ್ದಪ್ಪ ವೈರಾಗ, ಅಮರನಾಥ ಮುಕರಂಬಿ, ನಾಗರಾಜ ಕಾಳಗಿ, ಶಿವಾನಂದ ಗೊಬ್ಬೂರವಾಡಿ, ಸುಭಾಶ್ಚಂದ್ರ ನಾಟೀಕರ್, ಗೌತಮ, ಜಾಕೀರ್ ಇದ್ದರು.