ಶಿವನನ್ನು ಧ್ಯಾನಿಸಿ ಸದ್ಗುಣ ಬೆಳೆಸಿಕೊಳ್ಳಿ
ಮಹಾಶಿವರಾತ್ರಿ ಜಾಗರಣೆಯ ಸಂಗೀತ ಸಿಂಚನ ಕಾರ್ಯಕ್ರಮದಲ್ಲಿ ಪಾರ್ವತಿ ಅಕ್ಕ
ಸಿಂಧನೂರು: ಉಪವಾಸ ಮಾಡುವುದೆಂದರೆ ಶಿವನಿಗೆ ಹತ್ತಿರವಾಗುವುದು. ಶಿವನ ಧ್ಯಾನ ಮಾಡುವ ಸಮಯದಲ್ಲಿ ಊಟದ ಕಡೆಗೆ ಗಮನ ಹೋಗುವುದಿಲ್ಲ. ಇನ್ನು ಜಾಗರಣೆ ಎಂದರೆ ರಾತ್ರಿವೇಳೆಯಲ್ಲಿ ಎಚ್ಚರದಿಂದ ಇರುವುದು. ರಾತ್ರಿ ಎಂದರೆ ತಮೋಗುಣದ ಪ್ರತೀಕ. ನಮ್ಮಲ್ಲಿರುವ ಅಹಂಕಾರ, ಆಲಸ್ಯ, ಕೋಪ, ಅಜ್ಞಾನ ಮತ್ತಿತರ ದುಶ್ಚಟಗಳನ್ನು ಬಿಟ್ಟು ಶಿವನನ್ನು ಧ್ಯಾನಿಸುತ್ತ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಪಾರ್ವತಿ ಅಕ್ಕ ಹೇಳಿದರು.
ಅವರು ನಗರದ ವಳಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ವೀರಶೈವ ಸಂಘದ ಮಹಿಳಾ ಘಟಕ, ವಳಕೋಟೆ ವೀರಭದ್ರೇಶ್ವರ ಯುವಕ ಸಂಘಗಳ ಸಂಯುಕ್ತಾಶ್ರಯಲ್ಲಿ ವಿ.ವಿ. ನಗರದ ವಳಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಜಾಗರಣೆಯ ಸಂಗೀತ ಸಿಂಚನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿವರಾತ್ರಿಯ ಉಪವಾಸ ಹಾಗೂ ಜಾಗರಣೆಯ ಮಹತ್ವದ ಕುರಿತು ಮಾತನಾಡಿದರು.
ಕರಿಬಸವ ನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಆಶೀರ್ವಚನ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ವಳಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಬಸವರಾಜಗೌಡ ಜೋಳದರಾಶಿ, ಚಂದ್ರಶೇಖರ ಮೈಲಾರ್, ಪ್ರಭುರಾಜ್, ಕೆ. ಜಿಲಾನಿಪಾಷಾ, ಆದನಗೌಡ ಜಿ., ತೋಂಟದಾರ್ಯ ಸಿದ್ದಾಂತಿಮಠ, ಸರಸ್ವತಿ ಪಾಟೀಲ್, ಶೈಲಜಾ ಷಡಕ್ಷರಪ್ಪ, ಪ್ರೇಮಾ ಸಿದ್ದಾಂತಿಮಠ, ಸಿದ್ದೇಶ್ವರಿ ಉಪಸ್ಥಿತರಿದ್ದರು. ರೇವತಿ ಮೈಲಾರ ಹಾಗೂ ರಕ್ಷಾ ಪ್ರಾರ್ಥಿಸಿದರು. ಬೀರಪ್ಪ ಶಂಭೋಜಿ ಸ್ವಾಗತಿಸಿದರು. ಶಿವಲೀಲಾ ಹಿರೇಮಠ ವಂದಿಸಿದರು. ವೀರೇಶ ಗೋನವಾರ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ಸಿಂಚನ: ಕಾರ್ಯಕ್ರಮದಲ್ಲಿ ವರ್ಷಾ ಗುಂಡಪ್ಪ ಅಂಗಡಿ, ಮಾನ್ಯ ಹೂಗಾರ್, ರಕ್ಷಾ ಹುಬ್ಬಳ್ಳಿ, ಶಿವಾನಿ ಬಿ.ಶಿವುಕುಮಾರ, ಮಾನಸ ಭರತನಾಟ್ಯ ಮಾಡಿದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೀರೇಶ ಕಿತ್ತೂರ, ಸಿಂಧನೂರಿನ ವೀರೇಶ ಸಾಲಿಮಠ ಸುಗಮ ಸಂಗೀತ ನಡೆಸಿಕೊಟ್ಟರು.
ಪರಿಮಳಾ ದೇಶಪಾಂಡೆ ದಾಸರ ಪದಗಳನ್ನು ಹಾಡಿದರು. ಶೋಭಾ ಹಾಗೂ ಶ್ವೇತಾ ಸಹೋದರಿಯರು ವಚನಗಾಯನ ಮಾಡಿದರು. ಜಾನಪದ ಕಲಾವಿದೆಯರಾದ ಅಮರಾಪೂರದ ಅಂಬಮ್ಮ ಕುರಿ, ಸಿಂಧನೂರಿನ ರಾಧಾಬಾಯಿ ಮುಬ್ರುಂಕರ ಜನಪದ ಗೀತೆಗಳನ್ನು ಹಾಡಿದರು. ಸಂಗೀತ ಶಿಕ್ಷಕಿ ಎಚ್. ಭಾರತಿದೇವಿ, ದೀಪಾ ಹಾಗೂ ಸುನಿತಾ, ಬಸವರಾಜ ಗಸ್ತಿ, ತುರ್ವಿಹಾಳದ ಬಸವರಾಜ ಗವಾಯಿ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು. ಹೊಗರನಾಳಿನ ಅಮರೇಗೌಡ ಗವಾಯಿ ಹಾರ್ಮೋನಿಯಂ ಸಾಥ್ ನೀಡಿದರೆ, ಗಂಜಿಹಾಳದ ರಮೇಶಕುಮಾರ ಹೂಗಾರ ಹಾಗೂ ಮಾರುತೇಶ ಮೇಣದಾಳ ತಬಲಾ ಸಾಥ್ ನೀಡಿದರು.
ತೋಂಟದಾರ್ಯ ಸಿದ್ದಾಂತಿಮಠರ ನೇತೃತ್ವದಲ್ಲಿ ವಳಕೋಟೆ ವೀರಭದ್ರೇಶ್ವರ ಭಜನಾ ಮಂಡಳಿಯವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.