ಸೋಲು- ಗೆಲವಿನ ಆತ್ಮಾವಲೋಕನ: ಅಧಿಕಾರಕ್ಕೆ ತಂತ್ರ
ರಾಜಕೀಯ ಪಕ್ಷಗಳ ನಾಯಕರ ಮಧ್ಯದ ಭಿನ್ನಮತವೇ ತೊಡಕು ಪಕ್ಷೇತರರ ಓಲೈಕೆ ಪ್ರಯತ್ನ ಆರಂಭ
ವಿಶೇಷ ವರದಿ
ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಜಿಲ್ಲೆಯಲ್ಲಿ ಅನೇಕ ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಮೂಲಕ ವಿವಿಧ ರಾಜಕೀಯ ಪಕ್ಷಗಳಿಗೆ ಬಿಕ್ಕಟ್ಟು ತಂದಿದೆ. ಪರಿಣಾಮ ರಾಜಕೀಯ ಪಕ್ಷಗಳು ಸೋಲು- ಗೆಲವಿನ ಆತ್ಮಾವಲೋಕನದ ಜತೆಗೆ ಅಧಿಕಾರಕ್ಕೇರಲು ಅಗತ್ಯವಿರುವ ಬಹುಮತದ ಅಂಕಿ ತಲುಪಲು ಪ್ರಯತ್ನ ಆರಂಭಿಸಿವೆ.
ಜಿಲ್ಲೆಯ ರಾಯಚೂರು ನಗರಸಭೆ, ಮಾನವಿ, ಲಿಂಗಸ್ಗೂರು ಪುರಸಭೆ ಹಾಗೂ ಮುದಗಲ್ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಅಗತ್ಯವಿರುವ ಪಕ್ಷೇತರರ ಬೆಂಬಲ ಪಡೆಯಲು ಮುಂದಾಗಿದ್ದು, ಈಗಾಗಲೇ ಪಕ್ಷೇತರರನ್ನು ಬೆಂಬಲ ಪಡೆಯಲು ಪ್ರಯತ್ನ ಆರಂಭಿಸಿವೆ.
ಭಾರೀ ಬೇಡಿಕೆ: ರಾಯಚೂರು ನಗರಸಭೆಯಲ್ಲಿ ಐವರು, ಮಾನವಿ ಪುರಸಭೆಯಲ್ಲಿ ಐವರು, ಲಿಂಗಸ್ಗೂರು ಪುರಸಭೆಯಲ್ಲಿ ಇಬ್ಬರು ಹಾಗೂ ಮುದಗಲ್‌ನಲ್ಲಿ ಒಬ್ಬ ಪಕ್ಷೇತರ ಆಯ್ಕೆಯಾಗಿದ್ದು, ಅಂಥ ಎಲ್ಲ ಸದಸ್ಯರಿಗೆ ಈಗ ಭಾರೀ ಬೇಡಿಕೆ ಬಂದಿದೆ. ವಿವಿಧ ರಾಜಕೀಯ ಪಕ್ಷಗಳು ಪಕ್ಷೇತರರನ್ನು ಮನಮೊಲಿಸುವುದು ಅನಿವಾರ್ಯವಾಗಿದೆ.
ರಾಯಚೂರು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯದ್ದರಿಂದ ಆ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿದ್ದ ಮೂವರು ಪಕ್ಷೇತರರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲ ಸದ್ಯ ಕಾಂಗ್ರೆಸ್ ಪಕ್ಷ 14 ಸ್ಥಾನಗಳನ್ನು ಪಡೆದಿದ್ದು, ಅಧಿಕಾರಕ್ಕೇರಲು ಇನ್ನೂ ನಾಲ್ಕು ಸ್ಥಾನಗಳ ಅವಶ್ಯಕತೆಯಿದೆ.
ಅನಿವಾರ್ಯತೆ: ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಪಕ್ಷದ ಭಿನ್ನರ ಮನಮೊಲಿಸುವುದು ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಪಕ್ಷೇತರರು ಕಾಂಗ್ರೆಸ್ ಹಿರಿಯ ನಾಯಕ ಬೋಸರಾಜು ಅವರ ಬೆಂಬಲಿಗರಾಗಿದ್ದು ಅವರ ಸೂಚನೆಯಂತೆ ಕೊನೆಗೆ ಮುಂದು ವರಿಯುವ ಸಾಧ್ಯತೆಯಿದೆ. ಈ ಮಧ್ಯೆ ರಾಯಚೂರು ನಗರಸಭೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿದಲ್ಲಿ ಅಧಿಕಾರ ಹಿಡಿಯಬಹುದು. ಆದರೆ ಬಿಜೆಪಿಯ ಸ್ಥಳೀಯ ನಾಯಕರ ಮಧ್ಯೆಯಿರುವ ಭಿನ್ನಾಭಿಪ್ರಾಯದಿಂದ ಇದು ಕಷ್ಟಸಾಧ್ಯವೇ ಆಗಿದೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪಕ್ಷೇತರ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮಾರೆಪ್ಪ, ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ಸದ್ಯ ನಿರ್ಧರಿಸಿಲ್ಲ. ಆದರೆ ಎಲ್ಲ ಪಕ್ಷಗಳು ತಮ್ಮನ್ನು ಬೆಂಬಲಿಸುವಂತೆ ಕೋರಿವೆ. ಪಾರದರ್ಶಕ ಹಾಗೂ ಪ್ರಾಮಾಣಿಕ ಕಳಕಳಿಯ ಆಡಳಿತ ನಡೆಸುವಂಥವರಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡ ನಂತರವೇ ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯ. ಅಲ್ಲಿಯವರೆಗೆ ಎಲ್ಲರೂ ಕಾಯಲೇಬೇಕು ಎಂದು ಹೇಳಿದ್ದಾರೆ.
ಇನ್ನು ಮಾನವಿ ಪುರಸಭೆಯಲ್ಲಿ ನಿಚ್ಚಳ ಬಹುಮತ ಯಾವ ಪಕ್ಷಕ್ಕೂ ದೊರೆತಿಲ್ಲ. ಕಾಂಗ್ರೆಸ್ ಅತೀ ಹೆಚ್ಚು 8 ಸ್ಥಾನಗಳನ್ನು ಗೆದ್ದಿದೆ. ಅಧಿಕಾರ ಹಿಡಿಯಲು 12 ಸ್ಥಾನಗಳ ಅವಶ್ಯಕತೆಯಿದೆ.
ಪಕ್ಷೇತರರಿಗೆ ಮಣೆ: ಲಿಂಗಸ್ಗೂರು ಪುರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನದಲ್ಲಿ ಗೆದ್ದಿದ್ದು ಒಂದು ಸ್ಥಾನದ ಅಗತ್ಯವಿದೆ. ಅಲ್ಲಿಯೂ ಪಕ್ಷೇತರರೇ ಗತಿ ಎಂಬಂತಿದೆ. ಒಬ್ಬ ಪಕ್ಷೇತರರಿದ್ದು ಅವರ ಸೆಳೆಯಲು ಪ್ರಯತ್ನ ಆರಂಭಿಸಲಾಗಿದೆ. ಇನ್ನು ಮುದಗಲ್ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ 9 ಸ್ಥಾನಗಳಲ್ಲಿ ಜಯ ಕಂಡಿದೆ. ಹೀಗಾಗಿ ಒಂದು ಸ್ಥಾನದ ಅವಶ್ಯವಿದ್ದು, ಒಬ್ಬ ಪಕ್ಷೇತರರು ಆಯ್ಕೆಯಾಗಿದ್ದು ಅವರನ್ನು ಸೆಳೆಯಲು ಪಕ್ಷ ಚಿಂತನೆ ನಡೆಸಿದೆ. ಆದರೆ ಅವರು ಬಿಎಸ್ಸಾರ್ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.
ಒಟ್ಟಾರೆಯಾಗಿ ಕಾಂಗ್ರೆಸ್, ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ನಾಯಕರುಗಳ ನಡುವಿನ ಭಿನ್ನಮತದಿಂದ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ತೊಡಕಾಗಲಿದೆಯೇ ಎಂಬ ಅನುಮಾನ ಆಯಾ ಪಕ್ಷಗಳ ಕಾರ್ಯಕರ್ತರಲ್ಲಿ ಮೂಡಿದೆ.
ಲಿಂಗಸ್ಗೂರು ಪುರಸಭೆ ನೂತನ ಸದಸ್ಯರಿಗೆ ಸನ್ಮಾನ
ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಮಾ.12
ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ ನೂತನ ಸದಸ್ಯರಿಗೆ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸನ್ಮಾನಿಸಲಾಯಿತು.
ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಪುರಸಭೆ 15ನೇ ವಾರ್ಡಿನ ಸದಸ್ಯೆ ಶಾಂತಾಬಾಯಿ ಕುಲ್ಕರ್ಣಿ ಹಾಗೂ 18ವಾರ್ಡಿನ ಸದಸ್ಯ ಗುಂಡೇರಾವ್ ಅವರನ್ನು ಬ್ರಾಹ್ಮಣ ಮಹಾಸಭಾದ ತಾಲೂಕು ಗೌರವಾಧ್ಯಕ್ಷ ಡಾ.ಗುರುರಾಜ ದೇಶಪಾಂಡೆ ಸನ್ಮಾನಿಸಿ, ಸಮಾಜದಲ್ಲಿ ಮಾರ್ಗದರ್ಶಕರಾಗಿದ್ದ ಬ್ರಾಹ್ಮಣರು ಇಂದಿನ ದಿನಮಾನಗಳಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುವ ಪರಿಸ್ಥಿತಿ ಬಂದೊದಗಿದೆ. ಬ್ರಾಹ್ಮಣ ಯುವಕರು ಯಾವುದೇ ಕ್ಷೇತ್ರವಿರಲಿ ಸರ್ವ ಜನಾಂಗದವರಿಂದ ಪ್ರೀತಿ, ವಿಶ್ವಾಸ ಗಳಿಸುವತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಮುತಾಲಿಕ ವಕೀಲರು, ಪುರುಷೋತ್ತಮಾಚಾರ ಜೋಶಿ, ಪ್ರಾಣೇಶ ಜಾವೂರ. ರಾಜು ಕುರ್ತಕೋಟಿ, ವರದ ದಿಗ್ಗಾವಿ, ರವಿ, ವಿಜಯ ದೇಶಪಾಂಡೆ, ಶ್ರೀನಿವಾಸ ದೇಶಪಾಂಡೆ, ಅಶೋಕ, ಕುಪ್ಪಣ್ಣ, ಹನುಮೇಶ ಸರಾಫ್, ಶ್ಯಾಮರಾವ ಗೋರೆಬಾಳ, ನಾರಾಯಣ ಬಿಜ್ಜೂರ, ರಾಘವೇಂದ್ರ ಬುರಲಿ, ಭೀಮಸೇನ್ ಆನೆಹೊಸೂರ, ಶೇಷದಾಸ, ಅಡವಿರಾವ, ಮದ್ದುರಾವ ದೇಶಪಾಂಡೆ, ಪ್ರಮೋದ ಕುಲಕರ್ಣಿ, ಪದ್ಮಾ ದೇಶಪಾಂಡೆ ಇದ್ದರು.