ಆರ್ಟಿಪಿಎಸ್ 6ನೇ ಘಟಕ ಸ್ಥಗಿತ
ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಭಾನುವಾರ ಬೆಳಗ್ಗಿನಿಂದ ಆರನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ವಿದ್ಯುತ್ ಕೇಂದ್ರದ ಆರನೇ ಘಟಕದ ಬಾಯ್ಲರ್ ಟ್ಯೂಬ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ವಿದ್ಯುತ್ ಕೇಂದ್ರದ ಐದನೇ ಘಟಕ ಕಳೆದ ಎರಡು ದಿನಗಳ ಹಿಂದಷ್ಟೇ ದುರಸ್ತಿಗೀಡಾಗಿತ್ತು. ಸದ್ಯ ಆರನೇ ಘಟಕವೂ ದುರಸ್ತಿಗೆ ಸಿಲುಕಿದ್ದರಿಂದ ವಿದ್ಯುತ್ ಕೇಂದ್ರದ ಒಟ್ಟಾರೆ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ವಿದ್ಯುತ್ ಕೇಂದ್ರದ ಆರು ಘಟಕಗಳಿಂದ ಭಾನುವಾರ ಬೆಳಗ್ಗಿನವರೆಗೆ 950 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗಿದೆ. ಈಚೆಗೆ ಇಎಸ್ಪಿ ಕುಸಿತದ ಅವಘಡದ ನಂತರದಲ್ಲಿ ದುರಸ್ತಿಗೊಂಡಿದ್ದ 8ನೇ ಘಟಕದ ಪೂರ್ಣ ಸಾಮರ್ಥ್ಯ 250 ಮೆವ್ಯಾಗೆ ಪ್ರತಿಯಾಗಿ 100 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕಳೆದ ಕೆಲ ತಿಂಗಳಿಂದ ವಿದ್ಯುತ್ ಕೇಂದ್ರಕ್ಕೆ ಲಭ್ಯವಾಗುತ್ತಿರುವ ಕಲ್ಲಿದ್ದಲು ಕಳಪೆ ಗುಣಮಟ್ಟದ್ದಾಗಿರುವುದು ವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿದ್ದು, ತಾಂತ್ರಿಕದೋಷ ಹಾಗೂ ಕಳಪೆ ಕಲ್ಲಿದ್ದಲು ಪೂರೈಕೆಯಾಗುತ್ತಿರುವುದರಿಂದ ಸುಮಾರು 700ಮೆವ್ಯಾ ವಿದ್ಯುತ್ ಉತ್ಪಾದನೆಯಲ್ಲಿ ಖೋತಾ ಆಗುತ್ತಿದೆ ಎಂದು ಹೇಳಲಾಗಿದೆ.
ಗಡಾಯಿಕಲ್ಲಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದವರ ಮೇಲೆ ಹೆಜ್ಜೇನು ದಾಳಿ
ಬೆಳ್ತಂಗಡಿ: ಕಪ್ಪು ತಿಂಗಳ ಪ್ರಯುಕ್ತ ಇಲ್ಲಿಗೆ ಸಮೀಪದ ಐತಿಹಾಸಿಕ ಗಡಾಯಿಕಲ್ಲು ಗುಡ್ಡದ ಮೇಲೆ ಪ್ರಾರ್ಥನೆ ಸಲ್ಲಿಸಲು ಹೋದ 80ಕ್ಕೂ ಹೆಚ್ಚು ಮಂದಿಗೆ ಭಾನುವಾರ ಸಂಜೆ ಹೆಜ್ಜೇನು ಕಡಿದಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಗುಡ್ಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿ ವರ್ಷದಂತೆ ಭಾನುವಾರ ಮಧ್ಯಾಹ್ನ 2.30ಕ್ಕೆ ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್ಗೆ ಸಂಬಂಧಪಟ್ಟ 500 ಮಂದಿ ಕ್ರೈಸ್ತರು ಧರ್ಮಗುರು ಫಾ. ಜೇಮ್ಸ್ ಡಿಸೋಜ ಹಾಗೂ ಸಹಾಯಕ ಧರ್ಮಗುರು ಮೆಲ್ವಿನ್ ನೊರೊನ್ಹಾ ನೇತೃತ್ವದಲ್ಲಿ ಕಪ್ಪು ತಿಂಗಳ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಗಡಾಯಿಕಲ್ಲಿಗೆ ಹೋಗಿದ್ದರು. ಪ್ರಾರ್ಥನೆ ಮುಗಿಸಿದ ಬಳಿಕ ಧರ್ಮಗುರುಗಳು ಮಾತನಾಡಿ, 'ಕಳೆದ ವರ್ಷವೂ ಗುಡ್ಡದಲ್ಲಿ ಹೆಜ್ಜೇನು ಕಡಿದು ಹಲವರು ಅಸ್ವಸ್ಥರಾಗಿದ್ದರು, ಹಾಗಾಗಿ ಈ ಬಾರಿ ಯಾರೂ ಅಂಥ ದುಸ್ಸಾಹಸಕ್ಕೆ ಕೈಹಾಕಬೇಡಿ' ಎಂದು ಎಚ್ಚರಿಸಿದ್ದರು.
ಆದರೂ, ಉಜಿರೆ ಭಾಗದ ಕೆಲವರ ತಂಡ ಪ್ರಾರ್ಥನೆ ನಡೆದ ಜಾಗದಿಂದ ಮೇಲೆ ಹತ್ತತೊಡಗಿದರು. ಆಗ ದಿಢೀರನೆ ಹೆಜ್ಜೇನು ದಾಳಿ ಆರಂಭವಾಗಿದ್ದರಿಂದ ಈ ಅವಘಡ ಸಂಭವಿಸಿದೆ.