'ಕೈ'ಗೆ ಬೆಂಬಲಿಸಲು ಎಡದಂಡೆ ರೈತರಿಗೆ ಕರೆ ಸಮಂಜಸವಲ್ಲ
ಕನ್ನಡಪ್ರಭ ವಾರ್ತೆ ರಾಯಚೂರು ಮೇ.2
ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ಭಾಗದ ರೈತರು ಕಳೆದ ಅನೇಕ ವರ್ಷಗಳಿಂದ ನೀರಿನ ಅಭಾವ ಎದುರಿಸುತ್ತಿದ್ದರೂ ಅದರ ಬಗ್ಗೆ ಚಕಾರವೆತ್ತದ ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ ಪ್ರಸಕ್ತ ಚುನಾವಣೆಯಲ್ಲಿ ಬೆಂಬಲಿಸುವಂತೆ ರೈತ ಹೋರಾಟಗಾರ ಬಸಪ್ಪ ತಿಪ್ಪಾರೆಡ್ಡಿ ಅವರು ಕರೆ ನೀಡಿರುವುದು ದುರದೃಷ್ಟಕರ ಸಂಗತಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ತುಂಗಭದ್ರಾ ಎಡದಂಡೆ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದಲ್ಲಿರುವ ರೈತರು ಕಳೆದ ಅನೇಕ ವರ್ಷಗಳಿಂದ ಬೆಳೆಗಳಿಗೆ ನೀರು ದೊರೆಯದೇ ನಷ್ಟ ಅನುಭವಿಸಿದ್ದಾರೆ. ನೀರಿಗಾಗಿ ಅನೇಕ ಬಾರಿ ಹೋರಾಟ ನಡೆಸಲಾಗಿದೆ. ಆದರೆ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಿಸದ ಕಾಂಗ್ರೆಸ್ ಪಕ್ಷದ ಗ್ರಾಮೀಣ ಕ್ಷೇತ್ರದ ಶಾಸಕ ರಾಜಾ ರಾಯಪ್ಪ ನಾಯಕ ಅವರಿಗೆ ಮತ ನೀಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನ್.ಎಸ್.ಬೋಸರಾಜು ಅವರೊಂದಿಗೆ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಿದ್ದು, ಅವರು ನೀಡಿದ ಭರವಸೆ ಮೇರೆಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ರೈತರಿಗೆ ಸಲಹೆ ನೀಡಿರುವುದು ಸರಿಯಲ್ಲ. ಬೋಸರಾಜು ಅವರು ಸದ್ಯದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಷ್ಟೇ. ಅಂಥವರ ಭರವಸೆಯನ್ನು ನಂಬಿರಲು ರೈತರು ಸಾಧ್ಯವಿಲ್ಲ ಎಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಅಡಿ ರೈತರು ಎದುರಿಸುತ್ತಿರುವ ನೀರಿನ ಅಭಾವ ಮತ್ತಿತರೆ ಸಮಸ್ಯೆಗಳನ್ನು ಪ್ರಸಕ್ತ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸದವರಿಗೆ ಬೆಂಬಲ ನೀಡುವಂತೆ ಹೇಳುವುದು ತಪ್ಪಾದೀತು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಗೆಲವು ಸಾಧಿಸುವುದು ಸ್ಪಷ್ಟ. ಜಿಲ್ಲಾದ್ಯಂತ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪರವಾದ ಅಲೆಯಿದೆ. ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡ ಜನಪರ ಕಾರ್ಯಕ್ರಮಗಳಿಗೆ ಮತದಾರರ ಒಲವು ವ್ಯಕ್ತವಾಗಿದೆ. ರೈತರು ಜೆಡಿಎಸ್ ಪಕ್ಷದ ಪರ ನಿಲ್ಲಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಪ್ರಮುಖರಾದ ವಿರೂಪಾಕ್ಷಿ, ಆಂಜನೇಯ, ಜಾಫರ್ ಪಟೇಲ್, ತಿಮ್ಮಾರೆಡ್ಡಿ, ಶಿವಶಂಕರ್ ಮತ್ತಿತರರಿದ್ದರು.