ಗಾಂಧಿವಾದದ ಹೋರಾಟದಿಂದ ಯಶಸ್ಸು ಸಾಧ್ಯ
ಕಾರ್ಮಿಕ ದಿನಾಚರಣೆಯಲ್ಲಿ ವಿಶ್ರಾಂತ ಕುಲಪತಿ ಡಾ. ಜಿ.ಎಸ್. ಪಾಟೀಲ್ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ.2
ಅಹಿಂಸೆ ಮತ್ತು ಶಾಂತಿಯುತ ಗಾಂಧಿವಾದದ ಸಿದ್ಧಾಂತದ ಮೇಲೆ ಹೋರಾಟ ಮಾಡಿದಾಗ ಯಶಸ್ಸು ಖಂಡಿತ ದೊರೆಯಲಿದೆ ಎಂದು ಕರ್ನಾಟಕ ಕಾನೂನು ಮಹಾವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಜಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಶ್ರಮಜೀವಿಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಅಹಿಂಸೆ ಮತ್ತು ಶಾಂತಿ ಸಿದ್ಧಾಂತದ ಮೇಲೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ದಾರಿಯಲ್ಲಿ ಹೋರಾಟ ನಡೆಸುವ ಮೂಲಕ ಗಾಂಧಿಯನ್ನು ಮರಳಿ ನಾಡಿಗೆ ಬರುವಂತೆ ಮಾಡಿ ಎಂದು ಕರೆ ನೀಡಿದರು.
ಅಹಿಂಸೆ ಮಾರ್ಗದ ಸಲಹೆ: ಕಾರ್ಮಿಕರ ತಮ್ಮ ಕನಿಷ್ಠ ಹಕ್ಕುಗಳನ್ನು ಪಡೆಯುವುದಕ್ಕಾಗಿ ಅನಿವಾರ್ಯ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕ್ರಾಂತಿಕಾರಿ ಮಾರ್ಗ ಅನುಸರಿಸದೆ ಗಾಂಧಿ ಟೋಪಿ ಧರಿಸಿ ಅಹಿಂಸೆ ಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿ ಟೋಪಿಗೆ ಅತ್ಯಂತ ಗೌರವದಿಂದ ಕಾಣಲಾಗುತ್ತಿತ್ತು. ಆದರೆ, ಇಂದು ಗಾಂಧಿ ಟೋಪಿ ಎಂದರೆ ರಾಜಕೀಯ ಫುಂಡಾರಿಗಳ ಟೋಪಿಯೆಂದು ಅಸಡ್ಡೆ ಮತ್ತು ಅತ್ಯಂತ ತಿರಸ್ಕಾರ ಮನೋಭಾವದಿಂದ ಕಾಣಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಮಿಕರ ಹೋರಾಟ ಸಂಕಷ್ಟಕ್ಕೆ: ಕಾರ್ಮಿಕರ ಹೋರಾಟ ಇಂದು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಸಂಘಟನೆಗಳು ಕಾರ್ಮಿಕರ ಬೇಡಿಕೆಗಳ ಪಟ್ಟಿ ಸಿದ್ದಗೊಳಿಸಿ ಸಂಘಟನೆಯನ್ನು ಬಲಪಡಿಸಿಕೊಂಡು ಒಗ್ಗಟ್ಟಿನಿಂದ ಎಲ್ಲರೂ ಸಂಬಂಧಪಟ್ಟ ಅಧಿಕಾರಿಗಳು ಬೇಡಿಕೆ ಈಡೇರಿಸುವವರೆಗೆ ನಿರಂತರ ಶಾಂತಿಯುತವಾಗಿ ಹೋರಾಟ ರೂಪಿಸಬೇಕು ಎಂದರು.
ಶ್ರಮಜೀವಿಗಳ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಗುಲ್ಬರ್ಗ ಜಿಲ್ಲೆಯಲ್ಲಿರುವ ವಿವಿಧ ಹಂತದ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅವಿರತ ಹೋರಾಟ ನಡೆಸಿ ಅವುಗಳಲ್ಲಿ ಕೆಲವು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿ ಕಂಡಿದ್ದು, ಇನ್ನುಳಿದ ಬೇಡಿಕೆಗಳಿಗೆ ಹೋರಾಟ ಮುಂದುವರೆದಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪತ್ರಕರ್ತ ಶಿವರಾಂ ಅಸುಂಡಿ, ಉದ್ಯಮಿ ಬಿ.ಜಿ. ಪಾಟೀಲ್, ಸುಲಫಲ ಮಠದ ಮಹಾಂತ ಶಿವಾಚಾರ್ಯರು ಉಪಸ್ಥಿತರಿದ್ದರು. ಲಕ್ಷ್ಮಣ ಸೂಗೂರ, ಅಮೃತ ನರೋಣಾ, ಗುತ್ತಣ್ಣ, ಮಸ್ತಾನ ಕಟ್ಟಿ, ಬಸವರಾಜ ಹಿರೇಮಠ, ಮರಲಿಂಗ ದೊಡ್ಮನಿ, ವೇದಾಂತ ತುಪ್ಪದ, ವಿಜಯಕುಮಾರ ಪಾಟೀಲ್, ಸಂಘಟನೆಗಳ ಹಲವಾರು ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.
ರಮಾಕಾಂತ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಹರಸೂರ ಸ್ವಾಗತಿಸಿದರು. ಎಸ್. ಸಜ್ಜನ್ ವಂದಿಸಿದರು.