ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುರುತಿನ ಚೀಟಿ ಅಲಭ್ಯತೆ

Srinivasa Murthy VN
Updated On : 3 May 2013, 11:18 am

ಗುಳೆ ಹೋದ ಮತದಾರರನ್ನು ಕರೆತರುವರು ಯಾರು; ಜಿಲ್ಲಾಡಳಿತಕ್ಕೆ ಚಿನ್ನಯ್ಯ ಪ್ರಶ್ನೆ
ಕನ್ನಡಪ್ರಭ ವಾರ್ತೆ ರಾಯಚೂರು ಮೇ.2
ಪ್ರಸಕ್ತ ಚುನಾವಣೆಯಲ್ಲಿ ಮತದಾನಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಶೇ.98ರಷ್ಟು ಮತದಾರರ ಗುರುತಿನ ಚೀಟಿ ವಿತರಿಸಿರುವುದಾಗಿ ಹೇಳಿದೆ. ಆದರೆ 2009ರ ಪ್ರವಾಹ ಪರಿಸ್ಥಿತಿಯಿಂದಾಗಿ ಅನೇಕರ ಬಳಿ ಗುರುತಿನ ಚೀಟಿಗಳಿಲ್ಲವಾಗಿದೆ. ಅಷ್ಟೇ ಅಲ್ಲ ಮಹಾನಗರಗಳಿಗೆ ದುಡಿಯಲು ಅನೇಕರು ಗುಳೆ ಹೋಗಿದ್ದು, ಮತದಾನ ಪೂರ್ಣ ಪ್ರಮಾಣದಲ್ಲಿ ನಡೆಯುವುದು ಅನುಮಾನ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಿನ್ನಯ್ಯ ನಾಯಕ ಸಂಶಯ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಶೇ.98ರಷ್ಟು ಜನ ಮತದಾರರ ಬಳಿ ಗುರುತಿನ ಚೀಟಿಯಿದೆ. ಇನ್ನುಳಿದ ಶೇ.2ರಷ್ಟು ಜನ ಮಾತ್ರ 23 ದಾಖಲೆಗಳನ್ನು ಪ್ರದರ್ಶಿಸಿ ಮತದಾನ ಮಾಡಬಹುದು ಎಂದು ತಿಳಿಸಿದೆ. ಆದರೆ ಕ್ಷೇತ್ರದ ವ್ಯಾಪ್ತಿಯ ಅನೇಕರಲ್ಲಿ ವಿವಿಧ ಕಾರಣಗಳಿಂದಾಗಿ ಮತದಾರರ ಗುರುತಿನ ಚೀಟಿಗಳು ಲಭ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮನವರಿಕೆಗೆ ಒತ್ತಾಯ: ಸುಮಾರು 10 ವರ್ಷ ಹಿಂದೆ ವಿತರಿಸಿದ ಮತದಾರರ ಗುರುತಿನ ಚೀಟಿ ಕಾಯ್ದಿಟ್ಟುಕೊಳ್ಳುವುದು ಗ್ರಾಮೀಣ ಪ್ರದೇಶದ ಜನತೆಗೆ ಸಾಧ್ಯವಾಗಿಲ್ಲ. ಅದೇ ರೀತಿ 2009ರಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭ ಅನೇಕರು ಗುರುತಿನ ಚೀಟಿಗಳನ್ನು ಕಳೆದುಕೊಂಡಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳ ಕಾರಣಕ್ಕೆ ಮತದಾರರ ಗುರುತಿನ ಚೀಟಿ ಕಳೆದುಕೊಂಡವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ ಅವರು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಚುನಾವಣೆ ಆಯೋಗಕ್ಕೆ ಸಮಸ್ಯೆಯ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿದರು.
ಪೂರ್ಣ ಪ್ರಮಾಣ ಮತದಾನ ಅನುಮಾನ: ಅದೇ ರೀತಿ ಚುನಾವಣೆ ಆಯೋಗವು 23 ದಾಖಲೆಗಳಲ್ಲಿ ಒಂದನ್ನು ಪ್ರದರ್ಶಿಸಿ ಮತದಾನ ಮಾಡಲು ನೀಡಿದ ಅವಕಾಶವನ್ನು ಎಲ್ಲ ಮತದಾರರಿಗೆ ವಿಸ್ತರಿಸುವಂತೆ ಆಗ್ರಹಿಸಿ ಅವರು, ಚುನಾವಣೆ ಆಯೋಗವು ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಕಾರ್ಯದಲ್ಲಿ ತೊಡಗಿದೆ. ಆದರೆ ಕಣದಲ್ಲಿ ಪ್ರಾಮಾಣಿಕರ ಕೊರತೆಯಿದ್ದು, ಮತದಾರರು ಆಯ್ಕೆ ಮಾಡುವುದಾದರೂ ಯಾರನ್ನು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಹೇಳಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 147 ಹಳ್ಳಿಗಳಲ್ಲಿ 1.98 ಲಕ್ಷ ಮತದಾರರಿದ್ದಾರೆ. ಈ ಪೈಕಿ ಶೇ.20ರಷ್ಟು ಜನ ಮತದಾರರು ಈಗಾಗಲೇ ಬರದ ಹಿನ್ನೆಲೆ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣದ ಮತದಾನ ಅನುಮಾನ. ಮಹಾನಗರಗಳಿಗೆ ತೆರಳಿದ ಕಾರ್ಮಿಕರನ್ನು ಮರಳಿ ಕರೆತರದೇ ಶೇ.100ರಷ್ಟು ಮತದಾನ ಅಸಾಧ್ಯ ಎಂದು ಅವರು ಹೇಳಿದರು.
ಪ್ರಸಕ್ತ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬಹಿರಂಗ ಸಭೆಗಳನ್ನು ಆಯೋಜಿಸುವ ಮೂಲಕ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿವೆ. ಆದರೆ ಆಯ್ಕೆಯಾದ ನಂತರದಲ್ಲಿ ಅವುಗಳು ನೀಡಿದ ಭರವಸೆ ಮರೆಯುತ್ತವೆ. ಈ ಹಿನ್ನೆಲೆಯಲ್ಲಿ ಆಯ್ಕೆಯಾದವರು ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಅಂಥ ವ್ಯಕ್ತಿ ವಿರುದ್ಧ ಮತದಾರರಿಗೆ ವಂಚಿಸಿದ ಆರೋಪದ ಮೇಲೆ ಕೇಸ್ ದಾಖಲಿಸುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement