ನೀತಿ ಸಂಹಿತೆ ಉಲ್ಲಂಘನೆ; ದೂರು ದಾಖಲು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ.2
ಕೆಜೆಪಿ, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ. ಆಳಂದ ತಾಲೂಕಿನ ನಿಂಬಾಳ ಗ್ರಾಮದ ಬಸ್ ನಿಲ್ದಾಣದ ಚೆಕ್ಫೋಸ್ಟ್ ಹತ್ತಿರ ಚುನಾವಣಾ ಅಧಿಕಾರಿ ಪರವಾನಿಗೆ ಇಲ್ಲದೆ ಜೀಪಿನಲ್ಲಿ ಕೆಜೆಪಿ ಪಕ್ಷದ ಮಾದರಿ ಮತಯಂತ್ರವುಳ್ಳ ಕರಪತ್ರಗಳು ಸಾಗಿಸಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಎಸ್ಎಸ್ಟಿ ತಂಡದ ಮುಖ್ಯಸ್ಥ ನಾಗಪ್ಪ ಬಿರಾದಾರ ಅವರು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಫಜಲ್ಪುರ ರಸ್ತೆಯ ಶರಣಸಿರಸಗಿ ಗ್ರಾಮದ ರಚಿಕುಮಾರ ಆಳಂದ ಅವರ ಅಂಗಡಿ ಶೆಟ್ಟರ್ ಮೇಲ್ಭಾಗದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿ ಭಾವಚಿತ್ರವುಳ್ಳ ಸ್ಟಿಕರ್ಗಳು ಅಂಟಿಸಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಮೇಲೆ ಕ್ರಮ ಜರುಗಿಸುವಂತೆ ಪ್ಲಾಯಿಂಗ್ ಸ್ಟ್ಕಾಡ್ ಅಧಿಕಾರಿ ಡಾ. ಡಿ.ಎಂ. ಮಣ್ಣೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ, ಎಚ್. ಡಿ. ಕುಮಾರಸ್ವಾಮಿ ಅವರ ಭಾವಚಿತ್ರ ಮತ್ತು ಪಕ್ಷದ ಚಿಹ್ನೆಯುಳ್ಳ ಸ್ಟಿಕರ್, ಪಾಂಪ್ಲೆಟ್ಗಳು ಯಳವಂತಗಿ ಗ್ರಾಮದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ದೂರವಾಣಿ ಕಂಬಕ್ಕೆ ಅಂಟಿಸಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕುರಿತು ಪ್ಲಾಯಿಂಗ್ ಸ್ಟ್ಕಾಡ್ ಅಧಿಕಾರಿ ಉನ್ಯಾ ಚವ್ಹಾಣ ಅವರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿರುದ್ಧ ಕರವೇ ಗರಂ
ರಾಯಚೂರು: ತಾಲೂಕಿನ ಹುಣಿಸಿಹಾಳ ಹುಡಾ ಗ್ರಾಮದ ಕರವೇ ಗ್ರಾಮ ಘಟಕದವರು ಬಿಜೆಪಿ ಪಕ್ಷದ ಪರ ಪ್ರಚಾರ ಇಲ್ಲವೇ ಆ ಪಕ್ಷವನ್ನು ಸೇರ್ಪಡೆಗೊಂಡಿಲ್ಲ ಎಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಈಶಪ್ಪ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ರಾಮ ಘಟಕದ ಸದಸ್ಯರಾದ ಓಂಕಾರಿ, ನರಸಪ್ಪ, ರಾಮಣ್ಣ, ಬಸವರಾಜ, ಪರಶುರಾಮ, ವೆಂಕಟೇಶ್, ನಾಗರಾಜ್, ಉರುಕುಂದಪ್ಪ, ಚನ್ನಪ್ಪ, ಶಿವಾರೆಡ್ಡಿ ಮತ್ತಿತರರು ತಮಗೆ ಬೆಂಬಲಿಸಿ ಬಿಜೆಪಿ ಸೇರಿದ್ದಾರೆಂದು ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ತಿಪ್ಪರಾಜು ಹೇಳಿಕೆ ನೀಡಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕರವೇ ಹೆಸರು ಬಳಸಿಕೊಂಡು ಉಚಿತ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಇದಾಗಿದ್ದು, ಕರವೇ ಗ್ರಾಮ ಘಟಕದ ಯಾಮೊಬ್ಬರೂ ರಾಜಕೀಯ ಪಕ್ಷಗಳಿಗೆ ಬೆಂಬಲಿಸಿಲ್ಲ ಮತ್ತು ಸೇರ್ಪಡೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ತಿಪ್ಪರಾಜು ಕೂಡಲೇ ಕಾರ್ಯಕರ್ತರ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕರವೇ ಸಂಘಟನೆಯ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿ ಗ್ರಾಮದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿದ್ದಾರೆ.
ಸಿಪಿಎಮ್ಮೆಲ್ ರೆಡ್ ಸ್ಟಾರ್ನಿಂದ ಮತಯಾಚನೆ
ರಾಯಚೂರು: ನಗರ ವಿಧಾನಸಭೆ ಕ್ಷೇತ್ರದ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಅಭ್ಯರ್ಥಿ ನೂರಜಹಾನ್ ಇತ್ತೀಚೆಗೆ ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು. ನಗರ ಕ್ಷೇತ್ರದ ವ್ಯಾಪ್ತಿಯ ರಾಂಪುರ, ಅಸ್ಕಿಹಾಳ, ಯಕ್ಲಾಸಪುರ ಮತ್ತಿತರೆ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖರೊಂದಿಗೆ ಪ್ರಚಾರ ನಡೆಸಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಅಭಿವೃದ್ಧಿ ಕಡೆಗಣಿಸಿದ್ದು, ಪ್ರಸಕ್ತ ಚುನಾವಣೆಯಲ್ಲಿ ಈ ಮೂರು ಪಕ್ಷಗಳನ್ನು ಅಧಿಕಾರದಿಂದ ದೂರವಿರಿಸುವಂತೆ ಮನವಿ ಮಾಡಿದರು. ಈ ವೇಳೆ ಪಕ್ಷದ ಮುಖಂಡರಾದ ರಾಜಶೇಖರ್, ಮಲ್ಲೇಶ್, ರವಿಕುಮಾರ್, ಮಣಿ, ವೀರಭದ್ರ, ಭೀಮೇಶ್, ಹನುಮಂತರಾಯ ಸೇರಿದಂತೆ ಅನೇಕರಿದ್ದರು.
ಎಸ್ಯುಸಿಐ ಪ್ರಚಾರ
ರಾಯಚೂರು: ನಗರ ಕ್ಷೇತ್ರದ ಎಸ್ಯುಸಿಐಸಿ ಪಕ್ಷದ ಅಭ್ಯರ್ಥಿ ಅಪರ್ಣಾ ಬಿ.ಆರ್. ಅವರು ಇತ್ತೀಚೆಗೆ ವಿವಿಧೆಡೆ ಚುನಾವಣೆ ಪ್ರಚಾರ ಕೈಗೊಂಡರು. ನಗರ ಕ್ಷೇತ್ರದ ವ್ಯಾಪ್ತಿಯ ಬಾಯಿದೊಡ್ಡಿ, ಗೌಸ್ ನಗರ, ವಡವಾಟಿ, ದೇವನಪಲ್ಲಿ, ಮಿಟ್ಟಿ ಮಲ್ಕಾಪುರ, ಮಲಿಯಾಬಾದ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದ ಅಭ್ಯರ್ಥಿ ಅಪರ್ಣಾ ಅವರು, ಪಕ್ಷದ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಡಾ. ಸುನೀತಕುಮಾರ್, ವೀರೇಶ್ ಎನ್.ಎಸ್., ಶರಣಪ್ಪ ಉದ್ಬಾಳ್, ಮಹೇಶ್ ಚೀಕಲಪರ್ವಿ ಸೇರಿ ಅನೇಕರಿದ್ದರು.
ಜನರ ಒಲವು ಬಿಜೆಪಿಯತ್ತ: ತೇಲ್ಕೂರ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮೇ.2
ಸೇಡಂ ಮತಕ್ಷೇತ್ರದಲ್ಲಿ ಅನುಕಂಪದ ಅಲೆ ಹೆಚ್ಚಾಗಿದ್ದು, ಜನರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ತಮ್ಮ ಗೆಲವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಸೋಮವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಾಕಷ್ಟು ಹಣವನ್ನು ಮಂಜೂರಿಗೊಳಿಸಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದೆ. ತಾವು ಸೇಡಂ ಮತಕ್ಷೇತ್ರಕ್ಕೆ 2 ಸಲ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಎಲ್ಲ ಗ್ರಾಮಗಳಲ್ಲಿಯೂ ತಮ್ಮ ಬಗ್ಗೆ ಅನುಕಂಪದ ಅಲೆ ಹೆಚ್ಚಿದೆ. ಹೀಗಾಗಿ ಈ ಬಾರಿ ತಮ್ಮ ಗೆಲವು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಅಭ್ಯರ್ಥಿ ತಮ್ಮ ಬಗ್ಗೆ ಅಪಪ್ರಚಾರ ನಡೆಸಿ ಜನರಿಗೆ ಸುಳ್ಳು ವದಂತಿ ಹರಡಿಸುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ ಸುಲೇಪೇಟ್ ಭಾಗದಿಂದ ಹೆಚ್ಚಿನ ಮತಗಳು ತಮಗೆ ಲಭಿಸಲಿವೆ. ಈ ವಲಯದಲ್ಲಿ ಬಿಜೆಪಿ ಸರ್ಕಾರದಿಂದ ಸಾಕಷ್ಟ ಅಭಿವೃದ್ಧಿಯನ್ನು ಮಾಡಲಾಗಿದೆ ಎಂದರು. ಪ್ರಚಾರದಲ್ಲಿ ಮಹೇಶ ಬೆಮಳಗಿ, ಅತೀಶ ಪವಾರ, ಡಾ. ವಿಶ್ವನಾಥ ಪವಾರ, ವಿಷ್ಣುರಾವ ಬಸೂದೆ ಇತರರು ಇದ್ದರು.
ಮತದಾನ ಜಾಗೃತಿ ಜಾಥಾ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಕಲಾ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾವನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಅಭಿಯಾನದ ಅಂಗವಾಗಿ ವಿದ್ಯಾರ್ಥಿನಿಯರು ನಗರ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ ಜಾಗೃತಿ ಮೂಡಿಸಿದರು. ಮತದಾನದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಹೊನಗುಂಟಾ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಜನರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.
ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ, ಪ್ರಾದ್ಯಾಪಕರಾದ ರವೀಂದ್ರ ನರೋಣಿ, ಭೀಮಾಶಂಕರ, ಗುರಲಿಂಗಪ್ಪ ತುಂಗಳ, ಮೋಹನ ಚವ್ಹಾಣ, ಸುನಂದ ಪಾಟೀಲ್, ಚಂದ್ರಕಲಾ ಕುಂಬಾರ, ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವೈಜನಾಥ ಪಾಟೀಲರಿಗೆ ಬೆಂಬಲ
ಗುಲ್ಬರ್ಗ: ಚಿಂಚೋಳಿ ವಿಧಾನಸಭಾ ಚುನಾವಣೆಗೆ ಸ್ಪಂದಿಸಿದ 371(ಜೆ) ವಿಧಿ ಹೋರಾಟದ ರೂವಾರಿ, ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಅವರಿಗೆ ಹೈ.ಕ. ಹೋರಾಟ ಸಮಿತಿ ಕೊಪ್ಪಳ ಘಟಕ ಬೆಂಬಲ ವ್ಯಕ್ತಪಡಿಸಿದೆ. ಕ್ಷೇತ್ರದ ಮತದಾರರು ಪಾಟೀಲ್ ಹೋರಾಟವನ್ನು ಪರಿಗಣಿಸಿ ಅವರಿಗೆ ಮತ ನೀಡಿ ಆರಿಸಿ ತರಬೇಕು ಎಂದು ಎಚ್.ಎಸ್. ಪಾಟೀಲ್ ಮತ್ತು ಅಲ್ಲಮಪ್ರಭು ಬೆಟ್ಟದೂರು ಪ್ರಕಟಣೆ ಮೂಲಕ ಮತದಾರರಿಗೆ ಮನವಿ ಮಾಡಿದ್ದಾರೆ.
ಚಿತ್ರಕಲೆ; ಮಾಹಿತಿ ಸಲ್ಲಿಕೆಗೆ ಮನವಿ
ರಾಯಚೂರು: ರಾಜ್ಯ ಚಿತ್ರಕಲೆ ಶಿಕ್ಷಕರ ಸಂಘದ ವೆಬ್ಸೈಟ್ನಲ್ಲಿ ಅಳವಡಿಸಲು ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳ ಹಾಗೂ ಡಯಟ್ ಕಾಲೇಜಿನ ಚಿತ್ರಕಲೆ ಬೋಧಕರ ಸ್ವ-ವಿವರಗಳನ್ನು ಸಲ್ಲಿಸಲು ಕೋರಲಾಗಿದೆ. ಸಂಘದ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಈ ಬಗ್ಗೆ ಪ್ರಕಟಣೆ ನೀಡಿ, ಚಿತ್ರಕಲಾ ಶಿಕ್ಷಕರ ಸಂಘವು ಕಳೆದ 9ನೇ ರಾಜ್ಯ ಸಮ್ಮೇಳನದ ಸಂದರ್ಭ ವೆಬ್ಸೈಟ್ ಆರಂಭಿಸಿದ್ದು ಅದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾ ಶಿಕ್ಷಕರ ವಿವರಗಳನ್ನು ಅಳವಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಡಯಟ್ ಕಾಲೇಜಿನ ಚಿತ್ರಕಲೆ ಬೋಧಕರು ಮೇ 31ರೊಳಗೆ ಸ್ವ-ವಿವರ, 4 ಕಲಾಕೃತಿಗಳ ಛಾಯಾಚಿತ್ರಗಳನ್ನು ಚಿತ್ರಕಲಾ ಶಿಕ್ಷಕರ ಸಂಘಕ್ಕೆ ತಲುಪಿಸಲು ಕೋರಿದ್ದಾರೆ.
ಮತದಾರ ಚೀಟಿ ಹಂಚಿಕೆಗೆ ಚುನಾವಣಾಧಿಕಾರಿ ಚಾಲನೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಮೇ.2
ವಿಧಾನಸಭೆ ಚುನಾವಣೆ ಮೇ 5ರಂದು ನಡೆಯಲಿರುವ ಪ್ರಯುಕ್ತ ಚುನಾವಣಾ ಆಯೋಗದಿಂದ ಮತದಾರರ ಚೀಟಿ ಹಂಚುವ ಕಾರ್ಯಕ್ಕೆ ಲಿಂಗಸ್ಗೂರು ಕ್ಷೇತ್ರದ ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ. ಯೋಗೇಶ ಗುರುವಾರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಆಯೋಗದಿಂದ ಪ್ರಥಮ ಬಾರಿಗೆ ನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ಷೇತ್ರದಲ್ಲಿ 1,00,445 ಪುರುಷರು ಮತ್ತು 97,290 ಮಹಿಳೆಯರು ಸೇರಿದಂತೆ ಒಟ್ಟು 1,97,735 ಮತದಾರರಿಗೆ ಮತದಾರ ಚೀಟಿ ಹಂಚಿಕೆ ಮಾಡಲಾಗುವುದು. ಹಂಚಿಕೆ ಕಾರ್ಯಕ್ಕೆ 236 ಮತಗಟ್ಟೆ ಅಧಿಕಾರಿಗಳು ಕ್ಷೇತ್ರದಾದ್ಯಂತ ಮನೆ ಮನೆಗೆ ತೆರಳಿ ಹಂಚಿಕೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಪಾರದರ್ಶಕ ಮತದಾನ ಜೊತೆಗೆ ಶೇ. 100ರಷ್ಟ ಮತದಾನ ಮಾಡುವ ಗುರಿ ಹೊಂದಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ತುಳಜಾರಾಮ್ ಸಿಂಗ್, ಸಿಬ್ಬಂದಿ ಜಾವಿದ್ ಹುಸೇನ, ಸಾವಿತ್ರಿ, ಶಿವಮ್ಮ ಇದ್ದರು.
ಚುನಾವಣೆ ಕಾರ್ಯ; ಸಿಬ್ಬಂದಿಗೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಯು ಚುನಾವಣೆ ಕಾರ್ಯಕ್ಕೆ ತೆರಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಾಹಿತಿ ಒದಗಿಸಿದೆ.
ಚುನಾವಣೆ ಕಾರ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಯು ಸಂಬಂಧಿಸಿದ ತಾಲೂಕುಗಳಿಗೆ ತೆರಳುವ ಸಲುವಾಗಿ ಮೇ 4ರ ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಆಯಾ ತಾಲೂಕುಗಳಿಗೆ ನಿಗದಿಪಡಿಸಿದ ಬಸ್ ನಿಲ್ದಾಣಗಳಲ್ಲಿ ಹಾಜರಿರಲು ಜಿಲ್ಲಾಡಳಿತ ಸೂಚಿಸಿದ್ದು, ಗೈರು ಹಾಜರಾಗುವ ಸಿಬ್ಬಂದಿ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯಿದೆ ಅನ್ವಯ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದೆ.
ರಾಯಚೂರು ಗ್ರಾಮೀಣ ಮತ್ತು ರಾಯಚೂರು ನಗರ ಕ್ಷೇತ್ರದ ಸಿಬ್ಬಂದಿ ಜಿಲ್ಲಾ ಕ್ರೀಡಾಂಗಣದಿಂದ ತಮಗೆ ಸೂಚಿಸಿದ ತಾಲೂಕುಗಳಿಗೆ ತೆರಳಬೇಕು. ಮಾನವಿಯ ತಹಸೀಲ್ದಾರ್ ಕಚೇರಿ, ದೇವದುರ್ಗದ ಸಿಬ್ಬಂದಿ ಅಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲೆ, ಲಿಂಗಸ್ಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಸ್ಕಿ ಕ್ಷೇತ್ರಕ್ಕೆ ತೆರಳುವವರು ಲಿಂಗಸ್ಗೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಿಂಧನೂರು ಕ್ಷೇತ್ರದಿಂದ ವಿವಿಧ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಯು ಸಿಂಧನೂರಿನ ತಹಸೀಲ್ದಾರ್ ಕಚೇರಿಯಿಂದ ತೆರಳಲು ಸೂಚಿಸಲಾಗಿದೆ.
ವೆಚ್ಚದ ಮಾಹಿತಿ ನೀಡದ್ದಕ್ಕೆ ಕೇಸ್
ರಾಯಚೂರು: ಚುನಾವಣೆ ವೆಚ್ಚಕ್ಕೆ ಸಂಬಂಧಿಸಿ ವರದಿ ಸಲ್ಲಿಸದ ವಿವಿಧ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ, ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್, ಜೆಡಿಯು ಅಭ್ಯರ್ಥಿ ನೂರ್ ಮಹ್ಮದ್, ಸಿಪಿಐಎಂಎಲ್ ರೆಡ್ ಸ್ಟಾರ್ ಅಭ್ಯರ್ಥಿ ನೂರ್ ಜಹಾನ್ ಪಕ್ಷೇತರ ಅಭ್ಯರ್ಥಿ ಭೀಮನಗೌಡ ಹಾಗೂ ಲೋಕಸತ್ತಾ ಪಕ್ಷದ ಅಭ್ಯರ್ಥಿ ರಾಮಣ್ಣ ಆರ್.ಎಚ್.ಜೆ. ಚುನಾವಣೆ ವೇಳೆ ಮಾಡಿದ ವೆಚ್ಚಗಳ ಬಗ್ಗೆ ಏ. 23 ಹಾಗೂ ಏ. 29ರಂದು ನೀಡಬೇಕಿದ್ದ ವರದಿಯನ್ನು ಸಲ್ಲಿಸದ ಹಿನ್ನೆಲೆ ವೆಚ್ಚದ ಮಾಹಿತಿ ಒದಗಿಸಲು ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ನೋಟಿಸ್ಗೆ ಉತ್ತರಿಸದ ಹಿನ್ನೆಲೆ ನೀತಿ ಸಂಹಿತೆಯ ಉಲ್ಲಂಘನೆಯ ಕೇಸ್ ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಚುನಾವಣೆಗೆ 210 ಬಸ್ ಬಳಕೆ; ಮನವಿ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಯಚೂರು ವಿಭಾಗದಿಂದ ಒಟ್ಟು 210 ಬಸ್ಗಳನ್ನು ಒದಗಿಸಲಾಗಿದೆ ಎಂದು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯು, ಮೇ 4ರಿಂದ ಮೇ 5ರವರೆಗೆ ವಿಭಾಗದ ವ್ಯಾಪ್ತಿಯ ರಾಯಚೂರು, ಲಿಂಗಸ್ಗೂರು, ಮಾನವಿ, ಸಿಂಧನೂರು, ದೇವದುರ್ಗ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೇವೆಯಲ್ಲಿ ಇದರಿಂದಾಗಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಮತದಾನ ಪ್ರಮಾಣ ಹೆಚ್ಚಳಕ್ಕೆ ಸಲಹೆ
ರಾಯಚೂರು: ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮೇ 5ರಂದು ಜಿಲ್ಲೆಯಲ್ಲಿ ನಡೆಯುವ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಪಂ ಸಿಇಒ ಜ್ಞಾನಪ್ರಕಾಶ್ ಸಲಹೆ ನೀಡಿದರು. ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾವಣೆಯ ವೀಕ್ಷಕ ಅಮೀತಕುಮಾರ ರಾಣಾ, ಜಿ.ಎಚ್. ವೀರಣ್ಣ, ಪೂಜಾರ, ಹರಳಯ್ಯಾ, ಮಾರಪ್ಪಾ, ಶ್ರೀನಿವಾಸ, ಬಿ. ಹನುಮೇಶ್, ಮಹಾದೇವಪ್ಪ, ಯುನಿಸೆಫ್ನ ಅಧಿಕಾರಿ ರಾಘವೇಂದ್ರ ಭಟ್ ಇದ್ದರು.
4ರವರೆಗೆ ಮತದಾರರ ಚೀಟಿ ಹಂಚಿಕೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾರರಿಗೆ ಮತದಾನದ ಚೀಟಿಯನ್ನು ಈಗಾಗಲೇ ಚುನಾವಣೆ ಸಿಬ್ಬಂದಿಯು ಮೇ 4ರವರೆಗೆ ಹಂಚಿಕೆ ಮಾಡಲಿದ್ದಾರೆ. ಮೇ 2ರಿಂದ 4ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮಗೆ ನಿಯೋಜಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ 2 ಗಂಟೆಗಳವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಮತದಾನ ಚೀಟಿ ಹಂಚಿಕೆ ಮಾಡುತ್ತಿದ್ದಾರೆ. ಮಧ್ಯಾಹ್ನ 3ರಿಂದ 5.30ರವರೆಗೆ ಮತಗಟ್ಟೆಯಲ್ಲಿದ್ದು ಮತದಾನ ಚೀಟಿ ವಿತರಿಸಲಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.
ಅನುಮತಿಯಿಲ್ಲದ ಕಟ್ಟಡ; ತೆರವಿಗೆ ಆಗ್ರಹಿಸಿ ದೂರು
ರಾಯಚೂರು: ನಗರದಲ್ಲಿರುವ ಸರ್ವೇ ನಂಬರ್ 1220ರ ಶ್ರೀ ಸತ್ಯನಾಥ ಗೃಹ ನಿರ್ಮಾಣ ಸಹಕಾರಿ ಸಂಘದ ಬಡಾವಣೆಯಲ್ಲಿ ಸರ್ಕಾರದ ಅನುಮತಿಯಿಲ್ಲದೇ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಿದ ಉದ್ಯಾನವನ, ಶಾಲೆ, ಹಾಗೂ ಸ್ಮಶಾನದಲ್ಲಿ ರಚಿಸಿದ ನಿವೇಶನಗಳನ್ನು ತೆರವುಗೊಳಿಸುವಂತೆ ನಗರದ ತಿಮ್ಮಾಪುರ ಪೇಟೆ ನಿವಾಸಿ ಟಿ. ಮಾರೆಪ್ಪ ಮನವಿ ಮಾಡಿದ್ದಾರೆ.ಈ ಕುರಿತು ಅವರು ರಾಜ್ಯ ಲೋಕಾಯುಕ್ತರಿಗೆ ದೂರಿತ್ತಿದ್ದು, ಬಡಾವಣೆಯ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಿರಿಸಿದ ಜಾಗದಲ್ಲಿ ಅನುಮತಿಯಿಲ್ಲದೇ ನಿವೇಶನ ರಚಿಸಲಾಗಿದೆ. ಹಾಗೆಯೇ ಕೆಲ ಕಟ್ಟಡಗಳನ್ನೂ ನಿರ್ಮಿಸಲಾಗಿದೆ. ಈ ಕಟ್ಟಡಗಳನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಅಕ್ರಮಕ್ಕೆ ದಾರಿ ಮಾಡಿರುವ ಸರ್ಕಾರಿ ಹಾಗೂ ಸರ್ಕಾರೇತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಎಲ್ಐಸಿ ನೌಕರರಿಂದ ಕಾರ್ಮಿಕ ದಿನಾಚರಣೆ
ಸಿಂಧನೂರು: ನಗರದ ಭಾರತೀಯರ ಜೀವ ವಿಮಾ ನಿಗಮದ ಕಾರ್ಯಾಲಯದಲ್ಲಿ ವಿಮಾ ನೌಕರರ ಸಂಘದಿಂದ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಮಾ ನೌಕರರ ಸಂಘದ ಅಧ್ಯಕ್ಷ ಹುಲಗಯ್ಯ, ದಿನವಿಡೀ ಬೆವರು ಹರಿಸಿ ದುಡಿಯುವ ಕಾರ್ಮಿಕರಿಗೆ ದೇಶದಲ್ಲಿ ಸೂಕ್ತ ಭದ್ರತೆ ಒದಗಬೇಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವ ವರ್ಗ ಜೀವನ ನಡೆಸುವುದು ದುಸ್ತರವೆನಿಸಿದೆ. ಕಾರ್ಮಿಕರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕು, ಸ್ವಾತಂತ್ರ್ಯ, ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಭಟನಾ ಮನೋಭಾವನೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಖೆ ಸಹಾಯಕ ವ್ಯವಸ್ಥಾಪಕ ನರಸಿಂಗರಾವ್, ಕಾರ್ಯದರ್ಶಿ ಶರಣಬಸಪ್ಪ, ಪ್ರತಿನಿಧಿ ಎಂ.ಕೆ. ಜಗ್ಗೇಶ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರವಿಕುಮಾರ, ಕುಮಾರೆಪ್ಪ, ದೇವದಾನ, ಪ್ರಕಾಶ, ಅಯ್ಯಪ್ಪ, ಚಂದ್ರಹಾಸ, ರಾಚಣ್ಣ, ಸಂತೋಷ ಮತ್ತಿತರರು ಪಾಲ್ಗೊಂಡಿದ್ದರು.
ಕ್ಷೇತ್ರದ ಮಗನಿಗೆ ಹರಸಿ ವಿಧಾನಸಭೆಗೆ ಕಳಿಸಿ: ನಾಯ್ಕ
ಮುದಗಲ್: ಲಿಂಗಸ್ಗೂರು ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಲ್ಲಿ ಸ್ಪರ್ಥಿಸಿದ ಅಭ್ಯರ್ಥಿಗಳು ಅನ್ಯ ಜಿಲ್ಲೆಯವರು, ಅನ್ಯ ಕ್ಷೇತ್ರದವರು ನಾನೊಬ್ಬನೇ ತಾಲೂಕಿನ ಕ್ಷೇತ್ರದ ಆಶೀಹಾಳ ತಾಂಡಾದ ನಿವಾಸಿಯಾಗಿದ್ದು, ನಾನು ಕ್ಷೇತ್ರದ ಮಗನಾಗಿದ್ದೇನೆ. ಮತದಾರ ಪ್ರಭುಗಳು ತಂದೆ ತಾಯಿಯಿದ್ದಂತೆ ಕ್ಷೇತ್ರದ ಮಗನಿಗೆ ಮೇ 5 ರಂದು ಕಮಲದ ಗುರುತಿಗೆ ಮತ ಹಾಕುವ ಮೂಲಕ ಹರಸಿ ಆಶೀರ್ವದಿಸಿ ವಿಧಾನಸಭೆಗೆ ಕಳಿಸುವಂತೆ ಬಿಜೆಪಿಯ ಅಭ್ಯರ್ಥಿ ಟಿ.ಆರ್. ನಾಯ್ಕ ಬಹಿರಂಗ ಮತಯಾಚಿಸಿದರು.
ಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನು ಕಳೆದ 5 ವರ್ಷದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ, ನನಗೆ ಅನ್ಯಾಯವಾಗಿದೆ. ನನ್ನ ಅನ್ಯಾಯಕ್ಕೆ ಕ್ಷೇತ್ರದ ಜನತೆ ನ್ಯಾಯ ನೀಡುವರು ಎನ್ನುವ ಆಶಾಭಾವನೆಯೊಂದಿಗೆ ಕ್ಷೇತ್ರದ ಮತದಾರರ ಮುಂದೆ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಮುಂದೆ ಬಂದಿದ್ದೇನೆ.
ಕೋಟೆ ಉತ್ಸವ, ಕ್ಷೇತ್ರದಲ್ಲಿರುವ ಮುದಗಲ್, ಹಟ್ಟಿ ತಾಲೂಕು ಕೇಂದ್ರ, ಹೋಬಳಿಗೊಂದು ಸುಸಜ್ಜಿತ ಕ್ರೀಡಾಂಗಣ, ಶೌಚಾಲಯ ಮಾಡುವ ಗುರಿಯನ್ನು ಇಟ್ಟು ಕೊಂಡಿದ್ದಲ್ಲದೇ, ನಿರುದ್ಯೋಗಿ ಯುವಕರಿಗೆ ಐಟಿಬಿಟಿ ಕಂಪನಿಯವರನ್ನು ಇಲ್ಲಿಗೆ ಕರೆಯಿಸಿ ಸಂದರ್ಶನದ ಮೂಲಕ ಉದ್ಯೋಗ ಕೊಡಿಸುವ ಆಸೆ ಇಟ್ಟುಕೊಂಡಿದ್ದೇನೆ ಎಂದು ತಮ್ಮ ವಯಕ್ತಿಕ ಪ್ರಣಾಳಿಕೆಯನ್ನು ಮತದಾರ ಪ್ರಭುಗಳ ಮುಂದೆ ಇಟ್ಟರು.
ನಂಬಿಕೆಯೇ ನನ್ನ ಮೂಲ ಮಂತ್ರ, ನನಗೆ ಮೋಸ ಮಾಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅನ್ಯಾವೆಸಗಿದವರಿಗೆ ಲೇವಡಿ ಮಾಡಿದರು. ನನ್ನ ವಿರುದ್ಧ ಪ್ರಮುಖ ಪಕ್ಷದ ಅಭ್ಯರ್ಥಿಗಳಾಗಿ ಗಣಿ ಧಣಿಗಳು ಸ್ಪರ್ಥಿಸಿದ್ದಾರೆ. ನನ್ನ ಸೇವಾವಧಿಯುದ್ದಕ್ಕೂ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದದೇ ರಾಷ್ಟ್ರಪತಿ, ರಾಜ್ಯಪಾಲರ, ಸರಕಾರದಿಂದ ಉತ್ತಮ ಸೇವೆಗಾಗಿ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದೇನೆ. ಅವೆಲ್ಲವೂ ಈ ಕ್ಷೇತ್ರದ ಜನತೆಗೆ ಸಂದ ಗೌರವ ಎಂದರು.
ಶರಣಮ್ಮ ಜಾತ್ರಾ ರಥೋತ್ಸವ
ಮುದಗಲ್: ಸಮೀಪದ ಸಜ್ಜಲಗುಡ್ಡದ ಶಿವಶರಣೆ ಅಮ್ಮನವರ 33ನೇ ಪುಣ್ಯಾರಾಧನೆ ಹಾಗೂ ಮಹಾ ರಥೋತ್ಸವ ಕಾರ್ಯಕ್ರಮ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ಜಾತ್ರೆಯಲ್ಲಿ ರಾಯಚೂರು, ಬಾಗಲಕೋಟೆ, ಬಿಜಾಪುರ, ಜಿಲ್ಲೆಗಳ ಸಹಸ್ರಾರು ಭಕ್ತರು ಮಹಾ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸದ್ದರು. ಮಠಾಧೀಶರು, ಹರ-ಗುರು ಚರಮೂರ್ತಿಗಳು ರಾಜಕಾರಣಿಗಳು ಭಾಗವಹಿಸಿದ್ದರು.
ಬಿಎಸ್ಆರ್ ಕಾಂಗ್ರೆಸ್ಗೆ ಸೇರ್ಪಡೆ
ಲಿಂಗಸ್ಗೂರು: ಪಟ್ಟಣದ ಬಿಎಸ್ಆರ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರಾದ ಆರ್.ಎಸ್. ನಾಡಗೌಡ, ಶಂಕರಗೌಡ ಅಮರಾವತಿ, ಜಿ.ಜಿ. ನಾಯಕ ಹಾಗೂ ಗೋವಿಂದ ಬಂಡಿ ಸಮ್ಮುಖದಲ್ಲಿ ಹಾಲಬಾವಿ, ಗೋನವಾಟ್ಲಾ, ಪರಂಪೂರ, ಕಾಳಾಪುರ, ಫೂಲಬಾವಿ, ಮಿಂಚೇರಿ, ಕರಡಕಲ್ ತಾಂಡಾಗಳ ಮುಖಂಡರಾದ ಲಾಲಪ್ಪ ರಾಠೋಡ, ವೆಂಕಟೇಶ, ಬೂದೆಪ್ಪ, ಭೀಮು ಲಮಾಣಿಕರ, ವಿಶ್ವನಾಥ, ಕೂಬಣ್ಣ, ಹೋಬಣ್ಣ ಜಾಧವ, ಗೋಪಾಲ, ವೀರೇಶ, ನಾಗಪ್ಪ ಮತ್ತಿತರರು ಸೇರ್ಪಡೆಗೊಂಡರು.
ಸಿಬ್ಬಂದಿಗೆ ಸೌಲಭ್ಯ ಒದಗಿಸಲು ಆಗ್ರಹ
ರಾಯಚೂರು: ಜಿಲ್ಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿ, ಚುನಾವಣೆಯ ಕಾರ್ಯದಲ್ಲಿ ನಿಯೋಜನೆಗೊಂಡ ಸಿಬ್ಬಂದಿಯು ಅವರಿಗೆ ಸೂಚಿಸಿದ ಸ್ಥಳದಲ್ಲಿ ತಂಗುವ ವೇಳೆ ಯಾರ ಆತಿಥ್ಯವನ್ನೂ ಸ್ವೀಕರಿಸುವುದು ನಿಷಿದ್ಧ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹೊಟೇಲ್ ಸೇರಿದಂತೆ ವಿವಿಧ ಸವಲತ್ತುಗಳಿರುವುದಿಲ್ಲ. ಪ್ರತಿ ಬಾರಿ ಸಿಬ್ಬಂದಿ ಪ್ರಯಾಸಪಡುತ್ತಲೇ ಚುನಾವಣೆ ಕಾರ್ಯ ಮುಗಿಸುತ್ತಾ ಬಂದಿದ್ದಾರೆಂದು ದೂರಿದೆ. ಪ್ರಸಕ್ತ ಚುನಾವಣೆಯಲ್ಲಿ ನಿಯೋಜನೆಗೊಂಡ ಸಿಬ್ಬಂದಿಗೆ ಅವರಿರುವ ಸ್ಥಳದಲ್ಲಿಯೇ ಊಟ, ಉಪಹಾರ, ಕುಡಿವ ನೀರಿನ ಸೌಲಭ್ಯ ತಪ್ಪದೇ ಒದಗಿಸುವಂತೆ ಸಂಘ ಮನವಿ ಮಾಡಿದೆ.
ಕಾಂಗ್ರೆಸ್- ಬಿಜೆಪಿ ತೊರೆದು ಕೆಜೆಪಿ ಸೇರ್ಪಡೆ
ಸೇಡಂ: ಕಾಂಗ್ರೆಸ್ ಮತ್ತು ಬಿಜೆಪಿ ತೊರೆದ ಕೆಲ ಪ್ರಮುಖರು ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ್ ಸಮ್ಮುಖದಲ್ಲಿ ಕೆಜೆಪಿ ಸೇರ್ಪಡೆಗೊಂಡರು. ಬಿಚ್ಚರೆಡ್ಡಿ ಪೈಕೋಡಿ, ತಮ್ಮಯ್ಯಗೌಡ, ಭೀಮಶಪ್ಪ ಬಟಗೇರಾ, ಮಲ್ಲಪ್ಪ ಮೇತ್ರಿ, ಸಣ್ಣ ಮಲ್ಲಪ್ಪ ಬಟಗೇರಾ, ರವಿ ರಾಠೋಡ, ವಿಜಯರೆಡ್ಡಿ, ರಾಜು ಮೇಸ್ತ್ರಿ, ಸುರೇಶ, ಕರಿಯಪ್ಪ ಸೇರಿದಂತೆ ಹಲವರು ಕೆಜೆಪಿ ಸೇರ್ಪಡೆಗೊಂಡರು. ತಾಲೂಕು ಅಧ್ಯಕ್ಷ ಶ್ರೀನಾಥ ಪಿಲ್ಲಿ, ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಪರ್ವತರೆಡ್ಡಿ ಪಾಟೀಲ್ ನಾಮವಾರ, ಅನಂತೇಶ್ವರರೆಡ್ಡಿ, ನರೇಶ ಮಲಕೂಡ, ಶರಣರೆಡ್ಡಿ ಪಾಟೀಲ್ ಇಮಡಾಪುರ, ಶರಣರೆಡ್ಡಿ ಜಿಲ್ಲೇಡಪಲ್ಲಿ, ನಾಗಭೂಷಣರೆಡ್ಡಿ ಇದ್ದರು.
'ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ'
ಚಿತ್ತಾಪುರ: ಈ ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಹೇಳಿದರು.
ತಾಲೂಕಿನ ಸಾತನೂರ ಗ್ರಾಮದಲ್ಲಿ ಕಾಂಗ್ರೆಸ್ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಮುಂದಿನ ಪೀಳಿಗೆ ಉಜ್ವಲ್ ಭವಿಷ್ಯಕ್ಕಾಗಿ ಕ್ಷೇತ್ರ ಅಭಿವೃದ್ಧಿ ಹೊಂದಲು ಪ್ರಿಯಾಂಕ್ ಖರ್ಗೆ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಕ್ಷೇತ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಅವರು ಭವಿಷ್ಯ ನುಡಿದರು.ಮುಖಂಡರಾದ ಸೋಮಶೇಖರ ಪಾಟೀಲ್ ಹೆಬ್ಬಾಳ, ಬಸವರಾಜ ಸಂಗಾವಿ, ರಾಮರೆಡ್ಡಿ ಕೊಳ್ಳಿ, ಸೂರ್ಯಕಾಂತ ಪಲ್ಲೇದ್, ಶಿವಶರಣಪ್ಪ ಉಟಗೂರ, ಬಸವರಾಜ ಚಿಮ್ಮನ, ಸಾಹೇಬಗೌಡ ಪಾಟೀಲ್ ಉಪಸ್ಥಿತರಿದ್ದರು.
ನಮೋಶಿಗೆ ಬೆಂಬಲ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರಿಗೆ ಸ್ನಾತಕ/ಸ್ನಾತಕೋತ್ತರ ಪದವೀಧರರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ, ಈ ಭಾಗದ ಶಿಕ್ಷಕರ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದ್ದಾರೆ. ವಿಧಾನ ಮಂಡಲದ ಮೇಲ್ಮನೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸಿದ ಶಶೀಲ್ ನಮೋಶಿ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗುಲ್ಬರ್ಗ ದಕ್ಷಿಣ ಮತ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರು ನಿರಂತರವಾಗಿ ಶಿಕ್ಷಕರ, ಪದವೀಧರರ ಬಗ್ಗೆ ಕಳಕಳಿ ಹೊಂದಿದವರಾಗಿರುವುದರಿಂದ ಸ್ನಾತಕ/ಸ್ನಾತಕೋತ್ತರ ಪದವೀಧರರ ವೇದಿಕೆ ನಮೋಶಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು, ಎಲ್ಲ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು ನಮೋಶಿ ಅವರಿಗೆ ಮತ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ವೀರಣ್ಣ ಪಾಟೀಲ್ ಮನವಿ ಮಾಡಿದ್ದಾರೆ.
ಬ್ರಾಹ್ಮಣರಿಗೆ ಅನ್ಯಾಯ
ಗುಲ್ಬರ್ಗ: ಎಲ್ಲ ರಾಜಕೀಯ ಪಕ್ಷಗಳಿಂದ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯವಾಗಿದ್ದು, ಬ್ರಾಹ್ಮಣ ಸಮಾಜದ ಮುಖಂಡರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡದೆ ವಂಚಿಸಿವೆ ಎಂದು ಜಿಲ್ಲಾ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಗುರುರಾಜ ಕುಲಕರ್ಣಿ ರೇವೂರ ಆರೋಪಿಸಿದರು. ಕಾಂಗ್ರೆಸ್ 2008, 2010, 2013 ಹೀಗೆ ಮೂರು ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜದವರಿಗೆ ಟಿಕೆಟ್ ನೀಡಿಲ್ಲ. 2010ರ ಮರು ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಟಿಕೆಟ್ನಿಂದ ವಂಚಿಸಲಾಗಿದೆ. ಟಿಕೆಟ್ ಆಕಾಂಕ್ಷಿಯಾದ ಡಾ. ವಿಜಯ ಕಣ್ಮಳ್ಕರ್, ಕೃಷ್ಣಾಜಿ ಕುಲಕರ್ಣಿ ಅವರಿಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಕೈಬಿಡಲಾಗಿದೆ. ಚುನಾವಣೆ ಬಂದಾಗ ಮಾತ್ರ ಬ್ರಾಹ್ಮಣ ಸಮಾಜದವರು ಮಾತ್ರ ನೆನಪಿಗೆ ಬರುತ್ತಾರೆ. ಆದರೆ, ಟಿಕೆಟ್ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ಬಿಜೆಪಿ, ಜೆಡಿಎಸ್, ಕೆಜೆಪಿ ಕೂಡ ಈ ನೀತಿ ರೂಢಿಸಿಕೊಂಡಿವೆ ಎಂದು ತಿಳಿಸಿದ್ದಾರೆ. ರಾಜಕೀಯ ಪಕ್ಷಗಳ ಧೋರಣೆಯಿಂದ ಬ್ರಾಹ್ಮಣ ಸಮಾಜ ಬಹಳ ನೊಂದಿದ್ದು, ಈ ಪಕ್ಷಗಳ ರಾಜಕೀಯ ನೀತಿಯನ್ನು ಖಂಡಿಸಿದ್ದಾರೆ ಎಂದು ಗುರುರಾಜ ಕುಲಕರ್ಣಿ ರೇವೂರ, ಪ್ರವೀಣ ಕುಲಕರ್ಣಿ, ಪದಾಧಿಕಾರಿಗಳು, ಸದಸ್ಯರು ತಿಳಿಸಿದ್ದಾರೆ.
'ಯುವಕರನ್ನು ಆಯ್ಕೆಗೊಳಿಸಿ'
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಿದ್ದು, ಈ ಯುವಕ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಬೇಕು ಎಂದು ಕರ್ನಾಟಕ ಯುವ ಜನ ಒಕ್ಕೂಟ ಮನವಿ ಮಾಡಿದೆ. ಒಕ್ಕೂಟದ ಮಾಸಿಕ ಸಭೆಯಲ್ಲಿ ಒಕ್ಕೂಟದ ಮುಖಂಡರು ಚರ್ಚಿಸಿ ರಾಜ್ಯದ ಹಿತಕ್ಕಾಗಿ ಯುವಕರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸಬೇಕು ಎಂದು ನಿರ್ಣಯ ಕೈಗೊಂಡರು. ಸಭೆಯಲ್ಲಿ ರಾಜ್ಯ ಸಂಚಾಲಕ ವಿನೋದಕುಮಾರ ಜನವರಿ, ಅಧ್ಯಕ್ಷ ಅನಂತಗುಡಿ, ಕಾರ್ಯಾಧ್ಯಕ್ಷ ಭೀಮರಾವ ಜೀರಗಿ, ಕಾರ್ಯದರ್ಶಿ ಶ್ರೀಕಾಂತ ಪಾಟೀಲ್, ನಗರಾಧ್ಯಕ್ಷ ಸಂಗು ಹತ್ತಿ, ಜಗನ್ನಾಥ ಮಂಠಾಳೆ ಇದ್ದರು.
ರಾಜ್ಯದ ಹಿತಕ್ಕೆ ಮತ ಹಾಕಿ
ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಮತದಾರರು ತಮ್ಮ ಅಮೂಲ್ಯ ಮತ ನೀಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಮಾಜ ಸೇವಕ ಸಿದ್ಧಾರೂಡ ರಾಜೇಂದ್ರ ಡೋಣಿ ಮತದಾರರಿಗೆ ಮನವಿ ಮಾಡಿದ್ದಾರೆ.
ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಿ
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಿ ಕಳುಹಿಸಿ ನಿಜವಾದ ಪ್ರಜಾಪ್ರಭುತ್ವ ಉಳಿಸಿ ಎಂದು ಬಸವ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಬಿ.ಎಚ್.ಪುರಂತಗಿ ಮತ್ತು ಸದಸ್ಯ ಶಿವಶಂಕರ ಹರಸೂರ ಮತದಾರರಿಗೆ ಮನವಿ ಮಾಡಿದ್ದಾರೆ. ರಾಜಕೀಯದಲ್ಲಿ ಎಲ್ಲರೂ ಭ್ರಷ್ಟರೇ. ಇದರ ಮೂಲ ಹುಡುಕಲು ಸಾಧ್ಯವಿಲ್ಲ. ಹುಡುಕಿದರೂ ಪ್ರಯೋಜನವಿಲ್ಲ. ಹಾಗಂತ ಮತ ನೀಡದೆ ತಮ್ಮ ಹಕ್ಕು ಕಳೆದುಕೊಳ್ಳುವಂತಿಲ್ಲ. ಭ್ರಷ್ಟರಲ್ಲಿಯೇ ಸ್ವಲ್ಪ ಉತ್ತಮ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿ ಎಂದು ಕೋರಿದ್ದಾರೆ.
ವಾರಸುದಾರರ ಪತ್ತೆಗೆ ಮನವಿ
ಗುಲ್ಬರ್ಗ: ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಮಾ. 1ರಂದು ಆರು ವರ್ಷದ ಗಂಡು ಮಗು ಪತ್ತೆಯಾಗಿದ್ದು, ಈ ಕುರಿತು ವಾಡಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಳ್ಳಲಾಗಿದೆ. ಸದ್ಯ ಈ ಮಗುವು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವು ಮಾತಾಡುವ ಸ್ಥಿತಿಯಲ್ಲಿರುವುದಿಲ್ಲ, ಸೊಂಟದಿಂದ ಅಂಗವಿಕಲತೆ ಹೊಂದಿದೆ. ಕೋಲುಮುಖ, ದಪ್ಪನೆಯ ಮೂಗು, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಮಗುವಿನ ವಾರಸುದಾರರ ಯಾರಾದರೂ ಇದ್ದಲ್ಲಿ ವಾಡಿ ರೇಲ್ವೆ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ. ದೂ. 08476-202244ನ್ನು ಸಂಪರ್ಕಿಸಬಹುದು.