ನೆನೆಗುದಿಗೆ ರಸ್ತೆ ಕಾಮಗಾರಿ; ಪರದಾಟ
ಕನ್ನಡಪ್ರಭ ವಾರ್ತೆ ಮುದಗಲ್ ಮೇ.2
ಪಟ್ಟಣ ಸಮೀಪದ ನಾಗರಹಾಳದಿಂದ ಹಲ್ಕಾವಟಗಿ ಮಾರ್ಗವಾಗಿ ಅಂಕನಾಳ ಸೇರುವ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದಿದೆ. ಪರಿಣಾಮ ಸಂಚಾರಕ್ಕೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆರು ತಿಂಗಳ ಹಿಂದೆಯೇ (ಡಿ.19 ರಂದು) ಅಂದಿನ ಶಾಸಕ ವಜ್ಜಲ್‌ರಿಂದ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಚಾಲನೆ ನಿಡಿ ಅರ್ಧ ವರ್ಷ ಕಳೆದರೂ ಇದುವರೆಗೂ ರಸ್ತೆ ದುರಸ್ತಿ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಗರಹಾಳದಿಂದ ಹುನಗುಂದ ಸೇರುವ ರಾಜ್ಯ ಹೆದ್ದಾರಿ 14 ರಿಂದ ಒಳ ರಸ್ತೆಯಾದ ಹಲ್ಕಾವಟಗಿ ಮೂಲಕ ತಾಲೂಕಿನ ಕೊನೆಯ ಹಳ್ಳಿಯಾದ ಅಂಕನಾಳ-ಉಪನಾಳ ಗ್ರಾಮಗಳಿಗೆ ಸಂಪರ್ಕಕ್ಕೆ ಮುಖ್ಯ ರಸ್ತೆ ಇದಾಗಿದೆ.
ದಶಕಗಳಿಂದ ಡಾಂಬರ್ ಕಾಣದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸರ್ಕಸ್ ಮಾಡಬೇಕಾಗುತ್ತದೆ. ಒಟ್ಟು 8 ಕಿ.ಮೀ. ದೂರದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ದುರಸ್ಥಿಗೆ ಸರಕಾರ 2011-12 ನೇ ಸಾಲಿನಲ್ಲಿ 1.20 ಕೋಟಿ ರೂ.ಮಂಜೂರು ಮಾಡಲಾಗಿದೆ. ದುರಸ್ತಿ ಕಾಮಗಾರಿಯನ್ನ ಗುತ್ತಿಗೆ ಪಡೆದ ಗುತ್ತಿಗೆದಾರರು ರಸ್ತೆ ಪಕ್ಕದಲ್ಲಿ ಜಲ್ಲಿ ಕಲ್ಲುಗಳನ್ನು ಮಾತ್ರ ಹಾಕಿ ಕೈ ತೊಳೆದುಕೊಂಡಿದ್ದಾರೆ.
ನಿರ್ಲಕ್ಷ್ಯ: ರಾಜ್ಯ ಹೆದ್ದಾರಿ 14 ರಿಂದ ಅಂಕನಾಳ ಸೇರುವ ರಸ್ತೆ ಮೊದಲನೆ ಸುಮಾರು 2 ಕಿ.ಮೀ.ಮಾತ್ರ ಪಕ್ಕದ ಹುನಗುಂದ ತಾಲೂಕಿನ ವ್ಯಾಪ್ತಿಗೆ ಸೇರುತ್ತದೆ. ವಿಚಿತ್ರವೆಂದರೆ ಹುನುಗುಂದ ತಾಲೂಕ ವ್ಯಾಪ್ತಿಯೊಳಗೆ ಬರುವ ರಸ್ತೆ ಕಾಮಗಾರಿ ಆರಂಭಿಸಿದ ಒಂದು ತಿಂಗಳಲ್ಲಿಯೇ ಗುತ್ತಿಗೆದಾರರು ಕಾಮಗಾರಿಯನ್ನ ಪೂರ್ಣಗೊಳಿಸಿ ಜವಬ್ದಾರಿ ಮೆರೆದಿದ್ದಾರೆ. ಲಿಂಗಸ್ಗೂರು ವ್ಯಾಪ್ತಿಯಲ್ಲಿ ಬರುವ ಈ ಮುಂದಿನ ರಸ್ತೆಯನ್ನ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರು ದುರಸ್ಥಿಗೊಳಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಬೇಜವಾಬ್ದಾರಿ: ಕಾಮಗಾರಿಗೆ ಚಾಲನೆ ನೀಡಿ ಹೋದ ನಂತರ ಶಾಸಕ ಮಾನಪ್ಪ ವಜ್ಜಲ್ ಇತ್ತಕಡೆ ಸುಳಿದಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಸ್ತೆ ಕಾಮಗಾರಿ ಮಾಡಿಸದೆ ಹಣ ದುರುಪಯೋಗ ಮಾಡಿಕೊಳ್ಳಲು ಅನುಕೂಲ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಲಿಂಗಸ್ಗೂರು ತಾಲೂಕಿನ ಕೊನೆಯ ಭಾಗದ ಹಳ್ಳಿಗಳಾದ ಪಲಗಲದಿನ್ನಿ, ಹ ಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು ದುರಸ್ತಿ ಯಾವಾಗ ಕಾಣುತ್ತದೆ ಎಂದು ಕಾದು ನೋಡಬೇಕಾಗಿದೆ.