ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಸಕರ ವೈಫಲ್ಯದಿಂದ ಸಮಸ್ಯೆಗಳ ಸರಮಾಲೆ; ಬಿಜೆಪಿ ಟೀಕೆ

Srinivasa Murthy VN
Updated On : 3 May 2013, 11:20 am

ಕನ್ನಡಪ್ರಭ ವಾರ್ತೆ ರಾಯಚೂರು ಮೇ.2
ಇದುವರೆಗೆ ಅಧಿಕಾರ ನಡೆಸಿದ ಶಾಸಕರು ನಗರ ವಿಧಾನಸಭೆ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದು, ತಾವು ಆರಿಸಿ ಬಂದಲ್ಲಿ ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ಮೂಲ ಸೌಲಭ್ಯಗಳ ಒದಗಿಸುವಿಕೆಗೆ ಆದ್ಯತೆ ನೀಡುವುದಾಗಿ ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಭರವಸೆ ನೀಡಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಜನತೆಗೆ ಶುದ್ಧ ಹಾಗೂ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಕ ಹಂತದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಮಗೆ ಮತದಾರರು ಬೆಂಬಲ ನೀಡಿದಲ್ಲಿ ಆ ಯೋಜನೆಯನ್ನು ಮುಂದುವರಿಸಿ ಜನತೆಗೆ ಸತತ ನೀರೊದಗಿಸುವುದಾಗಿ ತಿಳಿಸಿದರು.
ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ: ಅದೇ ರೀತಿ ಶಕ್ತಿನಗರದಲ್ಲಿನ ಆರ್‌ಟಿಪಿಎಸ್‌ನಿಂದ ನಗರ ಕ್ಷೇತ್ರದ ಜನತೆಗೆ ಸಮರ್ಪಕ ವಿದ್ಯುತ್ ಒದಗಿಸುವುದು, ಸ್ಥಳೀಯ ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೇಗೇರಿಸುವುದು, ನಗರ ಮತ್ತು ಗ್ರಾಮೀಣ ಭಾಗಕ್ಕೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣದಂಥ ಗುರಿಯಿರಿಸಿಕೊಂಡಿದ್ದಾಗಿ ತಿಳಿಸಿದರು.
ರಾಯಚೂರು ನಗರದಲ್ಲಿ ಎನ್‌ಆರ್‌ಬಿಸಿ ಕಾಲುವೆಯನ್ನು ಸದ್ಯದ 95 ಕಿ.ಮೀ.ನಿಂದ 157 ಕಿ.ಮೀ. ವಿಸ್ತರಣೆ, ಕೃಷಿ ಭೂಮಿಗಳಿಗೆ ನೀರಾವರಿ ಸವಲತ್ತು, ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿಸುವುದು ತಮ್ಮ ಆಶಯವಾಗಿದೆ ಎಂದು ಹೇಳಿದರು.
ಸರ್ವಜನ ಹಿತಾಯ: ಸ್ವಚ್ಛತೆ, ಸುಂದರ ನಗರ ನಿರ್ಮಾಣಕ್ಕೆ ಆದ್ಯತೆ. ಜಿಲ್ಲೆಯಲ್ಲಿಯೇ ಐಐಟಿ ಸ್ಥಾಪನೆಗೆ ನಿರಂತರ ಹೋರಾಟ ನಡೆಸುವುದು ತಮ್ಮ ಗುರಿಯಾಗಿದ್ದು, ನಗರದ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದ ಅವರು, ಸರ್ವ ಜಾತಿ, ಜನಾಂಗದವರ ಹಿತಕಾಯುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಅಶೋಕ ಗಸ್ತಿ, ಆರ್. ತಿಮ್ಮಯ್ಯ, ಬಂಡೇಶ್ ವಲ್ಕಂದಿನ್ನಿ, ರಮಾನಂದ ಯಾದವ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement