ಸಂಜೆ 5 ಗಂಟೆಗೆ ಡೆಡ್ಲೈನ್
ಕ್ಷೇತ್ರ ಬಿಟ್ಟು ತೆರಳಲು ರಾಜಕೀಯ ಮುಖಂಡರಿಗೆ ಡಿಸಿ ಸೂಚನೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ.2
ಚುನಾವಣಾ ಆಯೋಗದ ನಿರ್ದೇಶನದಂತೆ ಬಹಿರಂಗ ಪ್ರಚಾರಕ್ಕಾಗಿ ಆಗಮಿಸಿದ ಗುಲ್ಬರ್ಗ ಜಿಲ್ಲೆಗೆ ಆಗಮಿಸಿದ ಮತದಾರರಲ್ಲದ ರಾಷ್ಟ್ರ, ರಾಜ್ಯ ಹಾಗೂ ಹೊರ ಜಿಲ್ಲೆಗಳ ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು ಹಾಗೂ ಜಿಲ್ಲೆಯ ವಿವಿಧ ಮತಕ್ಷೇತ್ರಗಳಲ್ಲಿ ಮತದಾರರಲ್ಲದ ರಾಜಕೀಯ ಪುಢಾರಿಗಳು ಬಹಿರಂಗ ಪ್ರಚಾರದ ಅವಧಿ ಮುಗಿದ ಕೂಡಲೇ ಅಂದರೆ ಮೇ 3ರ ಸಂಜೆ 5 ಗಂಟೆಯ ಬಳಿಕ ಕ್ಷೇತ್ರಬಿಟ್ಟು ತೆರಳುವಂತೆ ಚುನಾವಣಾ ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು, ಫ್ಲಾಯಿಂಗ್ ಸ್ಕ್ವಾಡ್ ಮತ್ತು ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡದ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚಿಸಿದ್ದಾರೆ.
ಗುಲ್ಬರ್ಗದಲ್ಲಿ ಎಂಸಿಸಿ, ಫ್ಲಾಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೆನ್ಸ್ ಮತ್ತು ವೀಡಿಯೋ ಸರ್ವೇಲೆನ್ಸ್ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆದೇಶ ಪಾಲಿಸುವಂತೆ ಸೂಚನೆ: ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತದಾನ ಮೇ 5ರಂದು ಬೆಳಗಿನ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಗುಲ್ಬರ್ಗ ಜಿಲ್ಲೆಯ ವಿವಿಧ ಮತಕ್ಷೇತ್ರಗಳ ಪ್ರಚಾರಕ್ಕಾಗಿ ಆಗಮಿಸಿರುವ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಆಯೋಗದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಹೊಟೇಲ್, ಕಲ್ಯಾಣ ಮಂಟಪ, ಸಮುದಾಯ ಭವನ, ಲಾಡ್ಜ್, ಚೌಲ್ಟ್ರಿ, ತಾತ್ಕಾಲಿಕ ಸ್ಥಳ ಮತ್ತು ಅತಿಥಿಗೃಹಗಳನ್ನು ತೀವ್ರ ತಪಾಸಣೆಗೊಳಪಡಿಸಬೇಕು ಹಾಗೂ ಮೇ 3ರ ಸಂಜೆ 5ರ ನಂತರ ಹೊರಗಡೆಯಿಂದ ಬರುವವರಿಗೆ ಹಾಗೂ ಮತದಾರರಲ್ಲದವರಿಗೆ ಕೋಣೆ ನೀಡದಿರುವಂತೆ ಹೋಟೆಲ್ ಮತ್ತ ಲಾಡ್ಜ್ ಮಾಲೀಕರಿಗೆ ಸೂಚಿಸಬೇಕು. ವಾಣಿಜ್ಯ ವ್ಯವಹಾರಕ್ಕಾಗಿ ಬಂದವರಿಗೂ ಉಳಿದುಕೊಳ್ಳಲು ಅವಕಾಶ ನೀಡಬಾರದೆಂದು ತಿಳಿ ಹೇಳಬೇಕು. ಮೇ 4 ಮತ್ತು 5 ರಂದು ನಡೆಯುವ ವಿವಿಧ ವಿವಾಹ ಸಮಾರಂಭಗಳ ಮೇಲೂ ತೀವ್ರ ನಿಗಾ ವಹಿಸಬೇಕೆಂದು ಹೇಳಿದರು.
ಹದ್ದಿನ ಕಣ್ಣು: ಮೇ 3ರ ಸಂಜೆ 5 ಗಂಟೆಯ ಬಳಿಕ ಯಾವುದೇ ಬಹಿರಂಗ ಪ್ರಚಾರ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಹಾಗೂ ಈ ಕುರಿತು ಹದ್ದಿನ ಕಣ್ಣಿಡಬೇಕು. ಈ ಅವಧಿಯ ಬಳಿಕ ಪ್ರಚಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ಸುಳಿವು ಸಿಕ್ಕರೆ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು.
ಪ್ರಚಾರಕ್ಕೆ ನೀಡಿದ ಎಲ್ಲ ವಾಹನಗಳ ಅನುಮತಿಯನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಿಂಪಡೆಯುವರು. ಮತದಾನದ ದಿನದಂದು ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರತಿ ಅಭ್ಯರ್ಥಿಗೆ ಮೂರು ವಾಹನಗಳನ್ನು ಬಳಸಿಕೊಳ್ಳಲು ಮಾತ್ರ ಅನುಮತಿ ನೀಡಬೇಕು. ಅಭ್ಯರ್ಥಿಗೆ, ಏಜೆಂಟ್ಗೆ ಹಾಗೂ ಕಾರ್ಯಕರ್ತರಿಗಾಗಿ ನೀಡಿರುವ ವಾಹನಗಳ ಬಳಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ವಾಹನವನ್ನು ಜಪ್ತಿ ಮಾಡಬೇಕು ಎಂದರು.
ಬಹಿರಂಗ ಪ್ರಚಾರದ ಅಂತಿಮ ದಿನ ಸಮೀಪಿಸುತ್ತಿದ್ದಂತೆ ಹಣ, ಮದ್ಯ, ಸಾರಾಯಿ ಮತ್ತಿತರ ವಸ್ತುಗಳ ಹಂಚಿಕೆ ತೀವ್ರಗೊಳ್ಳುವ ಸಂಭವವಿರುತ್ತದೆ. ಇಂತಹ ಚುನಾವಣಾ ಅಕ್ರಮ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಹಾಗೂ ಇಂತಹ ಚಟುವಟಿಕೆಗಳ ವೀಡಿಯೋ ಚಿತ್ರೀಕರಣ ಮಾಡಬೇಕು. ಹತ್ತಕ್ಕಿಂತ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಮಾಡುವವರ ಬಗ್ಗೆ ಫ್ಲಾಯಿಂಗ್ ಸ್ಕ್ವಾಡ್ ತಂಡದವರು ಆಯಾ ಬ್ಯಾಂಕ್ ಮ್ಯಾನೇಜರ್ರಿಂದ ಮಾಹಿತಿ ಪಡೆಯಬೇಕು.
ಸಾರಿಗೆ ಅಧಿಕಾರಿಗಳಿಗೆ ಸೂಚನೆ: ವಿವಿಧ ರಾಜಕೀಯ ಪಕ್ಷದವರು ಹಾಗೂ ಅಭ್ಯರ್ಥಿಗಳು ಆಯಾ ವಿಧಾನಸಭಾ ಕ್ಷೇತ್ರದ ಗಡಿಭಾಗಗಳಿಂದ ಬಸ್ಸುಗಳಲ್ಲಿ ಮತದಾರರನ್ನು ಕರೆದುಕೊಂಡು ಬರುವುದು ಅಪರಾಧ. ಇದಕ್ಕಾಗಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಸಂಸ್ಥೆಗಳ ಬಸ್ಸು, ಟೆಂಪೋ, ಲಾರಿಗಳಿಗೆ ಒಪ್ಪಂದದ ಮೇರೆಗಿನ ಅನುಮತಿ ನೀಡಬಾರದು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚಿಸಬೇಕು ಎಂದರು.
ಮೇ 5ರಂದು ಗಡಿ ಭಾಗಗಳಿಂದ ರಾಜ್ಯಕ್ಕೆ ಆಗಮಿಸುವ ಎಲ್ಲ ವಾಹನಗಳ ಬಗ್ಗೆ ತೀವ್ರ ನಿಗಾ ವಹಿಸಿ ತಪಾಸಣೆಗೊಳಪಡಿಸಬೇಕು.
ಜಿಲ್ಲಾ ಪೊಲೀಸ್ ಅಧೀಕ್ಷಕ ಸತೀಶಕುಮಾರ್, ಐಎಎಸ್ ಪ್ರೋಬೇಷನರ್ ಅಧಿಕಾರಿ ಅಭಿರಾಮ್, ವಿವಿಧ ತಂಡಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.