ಮತದಾನ ಬಹಿಷ್ಕಾರ: ಮನವೊಲಿಕೆ ವಿಫಲ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 3
ಸರ್ಜಾಪುರ, ಕುಪ್ಪಿಗುಡ್ಡ, ಅಮರಾವತಿ ಗ್ರಾಮಗಳನ್ನು ಮಸ್ಕಿ (ತಾಲೂಕು) ವಿಧಾನಸಭಾ ಕ್ಷೇತ್ರಕ್ಕೆ ಒಳಪಡಿಸಿರುವುದನ್ನು ವಿರೋಧಿಸಿ ಮೂರು ಗ್ರಾಮಗಳ ಜನತೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಪ್ರಯುಕ್ತ ಸಹಾಯಕ ಆಯುಕ್ತ ಟಿ.ಯೋಗೇಶ ನೇತೃತ್ವದಲ್ಲಿ ಸರ್ಜಾಪುರ ಗ್ರಾಮಕ್ಕೆ ತೆರಳಿ ಮತದಾನ ಬಹಿಷ್ಕರಿಸದಂತೆ ಗ್ರಾಮಸ್ಥರ ಮನಮೊಲಿಕೆ ಪ್ರಯತ್ನ ವಿಫಲಗೊಂಡಿತು.
ಆಡಳಿತಕ್ಕೆ ಎಚ್ಚರಿಕೆ ಮನವಿ: ಸರ್ಜಾಪುರ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಗ್ರಾಮದ ಮುಖಂಡರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸರ್ಜಾಪುರ, ಲಿಂಗಸ್ಗೂರು ತಾಲೂಕಿನಲ್ಲಿದ್ದ ಸರ್ಜಾಪುರ ಕುಪ್ಪಿಗುಡ್ಡ ಮತ್ತು ಅಮರಾವತಿ ಗ್ರಾಮಗಳನ್ನು ಮಸ್ಕಿ(ತಾಲೂಕು) ಕ್ಷೇತ್ರಕ್ಕೆ ಒಳಪಡಿಸದೆ ಯಥಾಸ್ಥಿತಿ ಉಳಿಸಬೇಕು. ಇಲ್ಲದಿದ್ದರೆ ಸದರಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಬೇಸತ್ತ ಜನತೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದೆಂದು ಆಡಳಿತಕ್ಕೆ ಎಚ್ಚರಿಕೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವುದು ಹಕ್ಕಾಗಿದ್ದು, ಬಹಿಷ್ಕರಿಸುವುದು ವ್ಯವಸ್ಥೆಗೆ ದ್ರೋಹ ಬಗೆದಂತಾಗುತ್ತದೆ. ಗ್ರಾಮಸ್ಥರ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು. ಇದಕ್ಕೆ ಪಟ್ಟು ಬಿಡದ ಗ್ರಾಮಸ್ಥರು, ಈ ಹಿಂದೆ ಹಲವು ತಿಂಗಳಿಂದ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಮುಂದೆ ಏನು ಕ್ರಮ ಕೈಗೊಳ್ಳುತ್ತಿರೆಂದು ಗ್ರಾಮಸ್ಥರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ಜರುಗಿತು.
ಮನಮೊಲಿಕೆ ಪ್ರಯತ್ನ ವಿಫಲ: ಅಲ್ಲದೆ ಮಸ್ಕಿ ತಾಲೂಕಿನಲ್ಲಿ ಮೂರು ಗ್ರಾಮಗಳನ್ನು ಸೇರ್ಪಡೆಗೊಳಿಸದೆ ಲಿಂಗಸ್ಗೂರು ತಾಲೂಕಿನಲ್ಲಿ ಉಳಿಸಲಾಗುವುದೆಂದು ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಒತ್ತಾಯಿಸಿದ ಗ್ರಾಮಸ್ಥರಿಗೆ ಪ್ರಸ್ತುತ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಕಾರಣ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಲಿಖಿತ ರೂಪದಲ್ಲಿ ಭರವಸೆ ನೀಡದಿದ್ದರೆ ಮತದಾನ ಮಾಡುವುದಿಲ್ಲವೆಂದು ಪಟ್ಟು ಹಿಡಿದರು. ಇದರಿಂದ ಗ್ರಾಮಸ್ಥರ ಮನಮೊಲಿಕೆ ಪ್ರಯತ್ನ ವಿಫಲಗೊಂಡ ಪರಿಣಾಮ ಅಧಿಕಾರಿಗಳ ಮರಳಿ ತೆರಳಿದರು.
ಮಸ್ಕಿ ಚುನಾವಣಾಧಿಕಾರಿ ವೈ.ಬಿ. ಶ್ರೀನಿವಾಸ, ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ, ಡಿವೈಎಸ್ಪಿ ಅನಿತಾ ಹದ್ದಣ್ಣವರ, ಸಿಪಿಐ ಪಂಚಾಕ್ಷರಯ್ಯ, ಪಿಎಸ್ಐ ಸಿದ್ಧರಾಮಯ್ಯ, ಕಂದಾಯ ನಿರೀಕ್ಷಕ ತುಳಜಾರಾವ್ಸಿಂಗ್, ಗ್ರಾಮದ ಗುಂಡಪ್ಪ ನಾಯಕ, ಶಂಕರಗೌಡ, ಏಕಅಮರಣ್ಣ, ಶರಣಪ್ಪ, ಶರಣಬಸವ, ಬಾಲಪ್ಪ, ಲಕ್ಷ್ಮಣ ಗುಂಟ್ರಾಳ, ಮಾನಯ್ಯ, ಭಗೀರಥ, ತಿಮ್ಮಣ್ಣ ಇದ್ದರು.
ಮನೆ ಮನೆ ಪ್ರಚಾರ; ಐವರಿಗೆ ಮಾತ್ರ ಅವಕಾಶ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಚುನಾವಣಾ ಪ್ರಚಾರ ಮಾಡುವ ಪ್ರಕ್ರಿಯೆಯಲ್ಲಿ ಐವರಿಗಿಂತ ಹೆಚ್ಚಿನ ಜನರು ಪ್ರಚಾರಕ್ಕೆ ತೆರಳದಂತೆ ಚುನಾವಣೆ ಆಯೋಗ ಎಚ್ಚರಿಸಿದೆ. ಜಿಲ್ಲಾದ್ಯಂತ ಎಲ್ಲ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 3ರಂದು ಸಂಜೆ 5ರಿಂದ ಮೇ 5ರಂದು ಸಂಜೆ 5ರವರೆಗೆ 5 ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಚುನಾವಣಾ ಪ್ರಚಾರ ಮಾಡುವುದನ್ನು ಚುನಾವಣೆ ಆಯೋಗದ ಆದೇಶದ ಹಿನ್ನೆಲೆಯಲ್ಲಿ ನಿಷೇಧಿಸಿ ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಆದೇಶ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.