ಸಿಂಧನೂರು; 6ರಿಂದ ಬಸವ ಜಯಂತ್ಯುತ್ಸವ
ಸಿಂಧನೂರು: ಬಸವಕೇಂದ್ರದಿಂದ ಬಸವ ಜಯಂತ್ಯುತ್ಸವವನ್ನು ಮೇ 6ರಿಂದ 13ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಹೇಳಿದರು.
ಬಸವ ಚಾರಿಟಬಲ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ 18 ವರ್ಷಗಳಿಂದ ಬಸವ ಜಯಂತ್ಯುತ್ಸವವನ್ನು ಆಚರಿಸುತ್ತಾ ಬಂದಿದ್ದು ಪ್ರತಿನಿತ್ಯ ಅನುಭವಿಗಳನ್ನು ಆಹ್ವಾನಿಸಿ ಶರಣ ತತ್ವಗಳನ್ನು ಜನರಿಗೆ ತಿಳಿಯಪಡಿಸಲಾಗುತ್ತಿದೆ ಎಂದರು. ಮೇ 6ರಂದು ಪ್ರಾರಂಭವಾಗುವ ಕಾರ್ಯಕ್ರಮದಂದು ಬಸವ ಪ್ರಶಸ್ತಿ ಪುರಸ್ಕೃತ ಇಲಕಲ್ ಮಹಾಂತಸ್ವಾಮಿ ಸಾನಿಧ್ಯದಲ್ಲಿ ಜರುಗಲಿದೆ. ಗುರುಮಹಾಂತ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಅಂಬಿಗರ ಚೌಡಯ್ಯ ಗುರುಪೀಠದ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನ ನೀಡಲಿದ್ದಾರೆಂದು ತಿಳಿಸಿದರು. ಬಸವ ಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಶಂಭನಗೌಡ, ಯುವ ಬಸವಕೇಂದ್ರ ಅಧ್ಯಕ್ಷ ಶೇಖರ ಯರದಿಹಾಳ, ಗೌರವ ಸಲಹೆಗಾರ ಸಿದ್ರಾಮಪ್ಪ ಮಾಡಸಿರವಾರ, ಹೆಚ್.ಜಿ. ಹಂಪಣ್ಣ ಹಳ್ಳಿ, ನಿಜಗುಣ ಹಡಪದ, ಗಂಗಾಧರ ವೀರಘಂಟಿ ಉಪಸ್ಥಿತರಿದ್ದರು.
ವಿಮಾ ನೌಕರರಿಂದ ಕಾರ್ಮಿಕ ದಿನಾಚರಣೆ
ರಾಯಚೂರು: ಇಲ್ಲಿನ ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಕಚೇರಿಯ ಆವರಣದಲ್ಲಿ ಈಚೆಗೆ ವಿಮಾ ನೌಕರರ ಸಂಘದಿಂದ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಸಂಘದ ಅಧ್ಯಕ್ಷ ಎಂ.ಶರಣಗೌಡ ಕಾರ್ಮಿಕ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶತಮಾನಗಳಷ್ಟು ಹಿಂದೆ ಅಂದಿನ ಬಂಡವಾಳಶಾಹಿಗಳ ಕ್ರೂರ ಶೋಷಣೆಯ ವಿರುದ್ಧ ಕಾರ್ಮಿಕ ವರ್ಗದವರು ಕ್ರಾಂತಿ ಮಾಡಿ, ಅಂದಿನ ಸರ್ಕಾರಗಳ ದಬ್ಬಾಳಿಕೆ ನೀತಿ ವಿರೋಧಿಸಿದ ಬಗ್ಗೆ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಮಾತನಾಡಿದರು. ಮೃತ್ಯುಜಯೇಶ್ವರ, ಕೆ. ಹನುಮಂತ ನಾಯಕ ಮತ್ತಿತರರಿದ್ದರು.