'ಇಬ್ಭಾಗವೇ ಸೋಲಿಗೆ ಕಾರಣ'
ಕ.ಪ್ರ. ವಾರ್ತೆ, ಮುದಗಲ್, ಮೇ 12
ಕಳೆದ ಬಾರಿ ಬಿಜೆಪಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದು ಉತ್ತಮ ಯೋಜನೆಗಳನ್ನು ಜಾರಿಗೆ ತಂದು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ನಾಯಕರಲ್ಲಿನ ಗೊಂದಲ, ಪಕ್ಷ ಇಬ್ಭಾಗವಾದ ಪರಿಣಾಮ ಕಡಿಮೆ ಸ್ಥಾನಗಳಲ್ಲಿ ಗೆಲ್ಲಬೇಕಾಯಿತು ಎಂದು ಹುನಗುಂದ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ಇಲ್ಲಿಯವರೆಗೆ ಅಧಿಕಾರಕ್ಕೆ ಬಂದಿರುವುದನ್ನು ನೋಡಿದರೆ ಪಕ್ಷಗಳು ಒಡೆದಾಗ ಮಾತ್ರ ಬಂದಿದೆ. 1988ರಲ್ಲಿ ಜನತಾ ಪಕ್ಷ ಇಬ್ಭಾಗವಾಗಿತ್ತು, 1999ರಲ್ಲಿ ಜನತಾ ದಳ ಇಬ್ಭಾಗವಾಗಿತ್ತು,
ಈಗ 2003ರಲ್ಲಿ ಬಿಜೆಪಿ ಹೋಳಾಗಿದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಜೊತೆಗೆ ಮಾಧ್ಯಮಗಳು ಕೂಡ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದನ್ನು ಮುಂಚೆಯಿಂದಲೇ ಹೆಚ್ಚು ಪ್ರಚಾರ ಮಾಡಿರುವುದೂ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದರು.
ನೀರಾವರಿ ಕ್ಷೇತ್ರದ ಅಭಿವೃದ್ಧಿ: ನಾನು ಹುನಗುಂದ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸೇವಾ ಮನೋಭಾವನೆಯಿಂದ ಅಭಿವೃದ್ಧಿಯ ರಾಜಕೀಯ ಮಾಡಿದ್ದೇನೆ ವಿನಃ ಜಗಳ ಹಚ್ಚುವ ರಾಜಕೀಯ ಮಾಡಿಲ್ಲ. ನನ್ನ ಅವಧಿಯಲ್ಲಿ 90 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಮಂಜೂರಾತಿ ಮಾಡಿದ ಹೆಮ್ಮೆ ನನಗಿದೆ. ಈಗಾಗಲೇ 35 ಸಾವಿರ ಎಕರೆ ಪ್ರದೇಶದ ನೀರಾವರಿ ಯೋಜನೆಯನ್ನು ನಾಡಿಗೆ ಸಮರ್ಪಿಸಿದ್ದೇನೆ. ಉಳಿದವು ಪ್ರಾರಂಭವಾಗಿವೆ ಎಂದು ತಿಳಿಸಿದರು.
ನಾನು ಪರಾಭವಗೊಂಡಿದ್ದರೂ ಅಭಿವೃದ್ಧಿ ಮಾಡಿದ ಹೆಮ್ಮೆ ನನಗಿದೆ. ನಾನು ಸೋತರೂ ಕ್ಷೇತ್ರದ ಜನತೆ ನನಗೆ ಧೈರ್ಯ ತುಂಬಿದ್ದಾರೆ. ಸೋಲು- ಗೆಲವಿನ ಮೂಲ ಎನ್ನುವ ವಾಣಿಯನ್ನು ಅನುಸರಿಸಿದ್ದೇನೆ ಎಂದರು.
ಮನೆಗಳ ನಿರ್ಮಾಣಕ್ಕೆ ಬದ್ಧ: ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಕ್ಷೇತ್ರಕ್ಕೆ 44 ಕೋಟಿ ಅನುದಾನ ತಂದಿದ್ದೇನೆ.
ತಾಲೂಕಿನಿಂದ ಹೊರಗೆ ಹೋದ ಎಲ್ಲ ಜನಪ್ರತಿನಿಧಿಗಳು ಸೋಲು ಕಂಡಿರುವ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೆ ತಾಲೂಕಿಗೆ ಗ್ರಹಣ ಬಂದಿರಬಹುದು. ಗ್ರಹಣಗಳು ಸಮಯ ಅಲ್ಪ ಸಮಯವಿರುತ್ತದೆ. ಗ್ರಹಣಗಳು ಬಿಡುತ್ತವೆ, ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತ ಎಂದರು.