ಕವಿತೆ ಕಳುಹಿಸಲು ಕಸಾಪ ಮನವಿ
ರಾಯಚೂರು: ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜೂ.15 ರಂದು ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ವತಿಯಿಂದ ಆಯೋಜಿಸಲಾಗುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗುವ ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕವಿಗಳಿಂದ ಕವಿತೆಗಳನ್ನು ಆಹ್ಮಾನಿಸಲಾಗಿದೆ.
ಕವಿತೆಗಳನ್ನು ಕಳುಹಿಸುವವರು ರಾಯಚೂರು ತಾಲೂಕಿನವರಾಗಿರಬೇಕು. ಮುಕ್ತ ಛಂದಸ್ಸಿನ ಕವಿತೆ, ಗಜಲ್, ತತ್ವಪದ, ಆಧುನಿಕ ವಚನ, ಚುಟುಕು ಮುಂತಾದ ಪದ್ಯಗಳನ್ನು ಕಳುಹಿಸಬಹುದು. ಒಬ್ಬರು ಕನಿಷ್ಠ ಮೂರು ಪದ್ಯಗಳನ್ನು ಕಳುಹಿಸಬಹುದು. ತಜ್ಞರ ಸಮಿತಿ ಕವಿತೆಗಳನ್ನು ಪರಿಶೀಲಿಸಿ ಆಯ್ಕೆ ಪ್ರಕಟಿಸಲಿದ್ದು, ಆಯ್ಕೆಗೊಂಡವರಿಗೆ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪದ್ಯ ವಾಚನ ಮಾಡಲು ಅವಕಾಶ ನೀಡಲಾಗುವುದು ಹಾಗೂ ಸ್ಮರಣಿಕೆ ಮತ್ತು ಗೌರವ ಸಂಭಾವನೆ ನೀಡಲಾಗುವುದು.
ಕವಿತೆಗಳನ್ನು ಸ್ವತಃ ಲೇಖಕರು ಕಳುಹಿಸಬುಹುದು ಅಥವಾ ಅವರ ಪ್ರಕಾಶಕರು ಅಥವಾ ಆಪ್ತರು ಕೂಡ ವಿವಿರ ಕಳುಹಿಸಿ ಹೆಸರು ಸೂಚಿಸಬೇಕು. ಕವಿತೆಗಳನ್ನು ಮೇ 20 ರೊಳಗೆ ಚದಾನಂದ ಸಾಲಿ, 7-5-1484, ಜವಾಹರ ನಗರ, ರಾಯಚೂರು ಈ ವಿಳಾಸಕ್ಕೆ ಕಳುಹಿಸಬೇಕೆಂದು ಕಸಾಪ ತಾಲೂಕು ಅಧ್ಯಕ್ಷ ಚಿದಾನಂದ ಸಾಲಿ ತಿಳಿಸಿದ್ದಾರೆ.
ಇಂದು ಬಸವೇಶ್ವರರ ಜಯಂತ್ಯುತ್ಸವ
ಕ.ಪ್ರ. ವಾರ್ತೆ, ಸಿಂಧನೂರು, ಮೇ 12
ತಾಲೂಕಾಡಳಿತದಿಂದ ನಗರದಲ್ಲಿ ಮೇ 13ರಂದು ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವವನ್ನು ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಬಸವೇಶ್ವರರ ಭಾವಚಿತ್ರಕ್ಕೆ ಸಾರ್ವಜನಿಕ ಪೂಜೆ, ಪುತ್ಥಳಿಗೆ ಮಾಲಾರ್ಪಣೆ ಮತ್ತು ಸಂಜೆ 4 ಗಂಟೆಗೆ ತಹಸೀಲ್ದಾರ್ ಕಚೇರಿಯಿಂದ ಮೆರವಣಿಗೆ ನಂತರ ಆರ್ಜಿಎಂ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಂಪನಗೌಡ ಬಾದರ್ಲಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಕೊಪ್ಪಳ ಸಂಸದ ಶಿವರಾಮೇಗೌಡ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಎಂಎಲ್ಸಿಗಳಾದ ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶಶಿಲ್ ನಮೋಶಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಆರ್.ನಾರಾಯಣ, ಲಿಂಗಸ್ಗೂರು ಸಹಾಯಕ ಆಯುಕ್ತ ಟಿ.ಯೋಗೀಶ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಎಪಿಎಂಸಿ ಅಧ್ಯಕ್ಷ ಕರಿಯಪ್ಪ ಹರೇಟನೂರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ ಸಿಂಗಾಪೂರ, ಪೊಲೀಸ್ ಉಪವಿಭಾಗದ ಅಧಿಕಾರಿ ಎಂ.ಎಂ. ದೇಸಾಯಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯ ಸ್ವಾಮಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ ಪಾಲ್ಗೊಳ್ಳಿದ್ದಾರೆ. ವಿಶೇಷ ಭಾಷಣಕಾರರಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರವಾಚಕ ಬಸವರಾಜ ಸಬರದ ಆಗಮಿಸಲಿದ್ದಾರೆ. ಜಿಪಂ ಸದಸ್ಯರು, ತಾಪಂ ಸದಸ್ಯರು, ನಗರಸಭೆ ಸದಸ್ಯರು, ಎಪಿಎಂಸಿ ಸದಸ್ಯರು ಭಾಗವಹಿಸಲಿದ್ದಾರೆ.
ಸೇನಾನಿ ಸುಭಾಷ ಮಡಿವಾಳ ಸ್ಮರಣೋತ್ಸವ ಸಮಿತಿ ರಚನೆ
ಗುಲ್ಬರ್ಗ: ನಾಡಿನ ಕೇಂದ್ರಬಿಂದು ಸಗರ ಗ್ರಾಮದ ಗ್ರಾಪಂ ಆವರಣದಲ್ಲಿ ಸ್ವಾತಂತ್ರ ಹೋರಾಟಗಾರ ವಿದ್ಯಾಧರ ಗುರೂಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹುತಾತ್ಮ ವೀರ ಸೇನಾನಿ ಸುಭಾಷ ಮಡಿವಾಳ ಅವರ ಪ್ರತಿವರ್ಷ ಸ್ಮರಣೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ಹುತಾತ್ಮ ವೀರ ಸೇನಾನಿ ಸ್ಮರಣೋತ್ಸವ ಸ್ಮಾರಕ ಸಮಿತಿಯನ್ನು ರಚಿಸಲಾಯಿತು.
ಸ್ವಾತಂತ್ರ ಹೋರಾಟಗಾರ ಲಿಂ. ಅಚ್ಚಪ್ಪಗೌಡರ ಸುಪುತ್ರ ಬಸನಗೌಡ ಮಾಲಿಪಾಟೀಲರನ್ನು ಅಧ್ಯಕ್ಷರೆಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮೂರು ಜನ ಉಪಾಧ್ಯಕ್ಷರು, ಪಿಡ್ಡಪ್ಪ ಮಲ್ಲಪ್ಪ ನಂದಿಕೂರ ಖಜಾಂಚಿಯಾಗಿ ಆಯ್ಕೆಗೊಂಡಿದ್ದು, 21 ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಗೆ ಸಾಯಿಬಣ್ಣ ಬಿ. ಮಡಿವಾಳ ಮತ್ತು ಲಿಂಗಣ್ಣ ಪಡಶೆಟ್ಟಿ ಅವರನ್ನು ಕಾರ್ಯದರ್ಶಿಗಳೆಂದು, ವಿದ್ಯಾಧರ ಗುರೂಜಿ, ಭಾಸ್ಕರರಾವ ಕುಲಕರ್ಣಿ ಅವರಿಗೆ ಮಾರ್ಗದರ್ಶಕರೆಂದು ಸಭೆಯು ಆಯ್ಕೆ ಮಾಡಿತು.
ಸಾಹಿತಿ ಎ. ಕೆ. ರಾಮೇಶ್ವರ ಹುತಾತ್ಮ ವೀರ ಸೇನಾನಿ ಸುಭಾಷ ಮಡಿವಾಳರ ಸಾಹಸದ ಚರಿತ್ರೆಯನ್ನು ಬರೆದುಕೊಡಲು ಒಪ್ಪಿಸಿದರು. ಈ ಸಂದರ್ಭದಲ್ಲಿ ಶಹಾಪುರ, ಸುರಪುರ, ಗುಲ್ಬರ್ಗದಿಂದ ಮಡಿವಾಳ ಸಮಾಜದ ಹಲವಾರು ಜನರು ಭಾಗವಹಿಸಿದ್ದರು.