ಕಾಂಗ್ರೆಸ್ ಜಿಲ್ಲಾ ನಾಯಕರಲ್ಲಿ ಕಲಹ
-ವಿಶೇಷ ವರದಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 12
ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಸ್ಥಾನಗಳಲ್ಲಿ ಗೆದ್ದ ಸಂಭ್ರಮಾಚರಣೆಯಿಲ್ಲ. ಸೋಲಿನ ಆತ್ಮಾವಲೋಕನವಿಲ್ಲ. ಗೆಲವಿನ ಪರಾಮರ್ಶೆಗೆ ಸಮಯವಿಲ್ಲ. ಸೋಲಿನ ಹತಾಶೆ, ಆರೋಪ ಪ್ರತ್ಯಾರೋಪಗಳಿಗೆ ಜಿಲ್ಲಾ ಕಾಂಗ್ರೆಸ್ನಲ್ಲಿ ಆದ್ಯತೆ. ಪಕ್ಷದಲ್ಲಿ ಸೋತವರು ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಸ್ವಪಕ್ಷೀಯರಿಂದಲೇ ಸೋಲಾಗಿದೆ ಎಂಬ ಆರೋಪ ವ್ಯಾಪಕ. ಪರಿಣಾಮ ಪಕ್ಷದ ಅಂತರಿಕ ಭಿನ್ನಮತವೀಗ ಬಹಿರಂಗವಾಗಿದೆ.
ಜಿಲ್ಲಾ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಎಂಬುದು ಹೇಳಿಕೆಗೆ ಸೀಮಿತ. ಪ್ರತಿ ಕ್ಷೇತ್ರದಲ್ಲೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಾಯಕರುಗಳ ಮಧ್ಯೆ ಹಂಚಿ ಹೋಗಿರುವುದು ಸ್ಪಷ್ಟ. ಪ್ರತಿ ಬಾರಿ ಚುನಾವಣೆ ಬಂದಾಗಲೆಲ್ಲ ಬಹಿರಂಗವಾಗಿ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುವುದು ತೀರಾ ಸಹಜ. ಆದರೆ ತೆರೆಮೆರೆಯಲ್ಲಿ ನಡೆಯುವುದು ಅದಕ್ಕೆ ವಿರುದ್ಧವಾದ ಚಟುವಟಿಕೆಗಳು ಎಂಬ ಆರೋಪಕ್ಕೆ ಕೊನೆಯಿಲ್ಲವಾಗಿದೆ.
ಪಕ್ಷ ವಿರೋಧಿ ಆರೋಪ: ಪಕ್ಷ ವಿರೋಧಿ ಚಟುವಟಿಕೆಯ ಆರೋಪ, ಆ ಕಾರಣಕ್ಕೆ ಪಕ್ಷದಿಂದ ಶಿಸ್ತುಕ್ರಮಕ್ಕೆ ಒತ್ತಾಯಿಸುವ ಬೆದರಿಕೆಗಳಿಗಿಲ್ಲಿ ಕೊನೆಯಿಲ್ಲ. ಹಾಗೆಯೇ ಇದುವರೆಗೆ ಅನೇಕ ಬಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಳಿಸಿದ ದೂರುಗಳಿಗೆ ಕೆಪಿಸಿ ಬೆಲೆಯೂ ದೊರೆಯದಂತಾಗಿರುವುದು ಸುಳ್ಳಲ್ಲ.
ಈಚೇಗೆ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆರಂಭದಲ್ಲಿಯೇ ರಾಯಚೂರು ನಗರ ಕ್ಷೇತ್ರ ಮತ್ತು ಲಿಂಗಸ್ಗೂರು ಕ್ಷೇತ್ರದಲ್ಲಿ ವಿರೋಧಿ ಅಲೆ ಕೇಳಿಬಂದಿತು.
ನಗರ ಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಸೈಯದ್ ಯಾಸೀನ್ ವಿರುದ್ಧ ಬಂಡಾಯ ಅಭ್ಯರ್ಥಿ ಹಾಗೂ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಕಣಕ್ಕಿಳಿದಿದ್ದು ಪಕ್ಷಕ್ಕೆ ಮುಜುಗುರ ತಂದಿತು. ಅವರನ್ನು ಕಣದಿಂದ ಹಿಂದೆ ಸರಿಸುವ ವೇಳೆಗೆ ನಾಯಕರಿಗೆ ಸಾಕಪ್ಪಾ ಈ ಚುನಾವಣೆ ಸಹವಾಸ ಎಂಬಂತಾಗಿತ್ತು.
ಟಿಕೆಟ್ ಗೊಂದಲ: ಇನ್ನು ಲಿಂಗಸ್ಗೂರು ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಪಾಮಯ್ಯ ಮುರಾರಿ ಅವರಿಗೆ ಮೊದಲು ಟಿಕೆಟ್ ನೀಡಿದ್ದ ಪಕ್ಷದ ವರಿಷ್ಠರು ಕಡೆ ಗಳಿಗೆಯಲ್ಲಿ ರಾಗ ಬದಲಿಸಿ ಡಿ.ಎಸ್. ಹೂಲಗೇರಿ ಅವರಿಗೆ ಟಿಕೆಟ್ ನೀಡಿದರು.
ಅದರಿಂದ ಲಿಂಗಸ್ಗೂರು ಕ್ಷೇತ್ರವೂ ಗೊಂದಲದ ಗೂಡಾಯಿತು. ಹೀಗೂ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ವರಿಷ್ಠರು ಮಾಡಿದರು.
ಕಾಂಗ್ರೆಸ್ನಲ್ಲಿ ನಡೆದ ಈ ಎಲ್ಲ ವಿದ್ಯಮಾನಗಳು ಆ ಪಕ್ಷಕ್ಕೆ ಮತದಾನದ ವೇಳೆ ತೀವ್ರ ಹಿನ್ನಡೆಗೆ ಕಾರಣವಾಗಿದ್ದಂತೂ ಸತ್ಯ.
ಅಸಮಾಧಾನದ ಹೊಗೆ: ಹಾಗಾಗಿ ಚುನಾವಣೆಯಲ್ಲಿ ರಾಯಚೂರು ನಗರ, ಲಿಂಗಸ್ಗೂರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸೋಲಾಗುತ್ತಿದ್ದಂತೆಯೇ ಪಕ್ಷದಲ್ಲಿನ ಅಸಮಾಧಾನ ಭುಗಿಲೆದ್ದಿದೆ.
ಪರಸ್ಪರ ಆರೋಪಕ್ಕೆ ದಾರಿ ಮಾಡಿದೆ. ಈ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲಿಗೆ ಪಕ್ಷದ ಕೆಲ ಪ್ರಮುಖರೇ ಕಾರಣರು ಎಂದು ಬಹಿರಂಗವಾಗಿಯೇ ಟೀಕಿಸುವಷ್ಟರ ಮಟ್ಟಿಗೆ ಅಸಮಾಧಾನ ಹೊಗೆಯಾಡುತ್ತಿದೆ.
ಪರಾಜಿತ ಅಭ್ಯರ್ಥಿಗಳು ಈ ಬಗ್ಗೆ ಕೆಪಿಸಿಸಿಗೆ ದೂರುವ ಬಗ್ಗೆಯೂ ವಿಷಯ ಪ್ರಸ್ತಾಪಿಸಿದ್ದಾರೆ.
ಪಕ್ಷದ ವಿರೋಧಿ ಚಟುವಟಿಕೆ ನಡೆಸಿದವರ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಸೋತವರು ತೊಡಗಿದ್ದರೆ, ಇವರ ಪ್ರಯತ್ನಕ್ಕೆ ಪ್ರತಿಯಾಗಿ ವಿರೋಧಿ ಚಟುವಟಿಕೆಯ ಆರೋಪ ಎದುರಿಸುತ್ತಿರುವ ನಾಯಕರೂ ಸಹ ತಾವೇನೂ ಕಮ್ಮಿಯಿಲ್ಲ ಎಂಬಂತೆ ದಾಖಲೆಗಳ ಸಮೇತ ಸೋಲಿನ ಕಾರಣಗಳು, ಮತ ವಿಭಜನೆಯ ಲೆಕ್ಕಾಚಾರ ಬಯಲು ಮಾಡುತ್ತಿದ್ದಾರೆ.
ಆಂತರಿಕ ಕಲಹ: ನಾಯಕರ ನಡುವಿನ ಅಸಮಾಧಾನ, ಗುಂಪುಗಾರಿಕೆ, ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳು ಸ್ವಸಾಮರ್ಥ್ಯದಿಂದಲೇ ಚುನಾವಣೆ ಎದುರಿಸಿದ್ದು, ನಂತರದಲ್ಲಿ ಸ್ಪಷ್ಟವಾಗಿದೆ. ಜತೆಗೆ ಆಂತರಿಕ ಕಲಹ ಹೆಚ್ಚಾಗಲೂ ದಾರಿ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ಸಿಗರು ಶಾಸಕರಾಗಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ನಲ್ಲಿ ಮಾತ್ರ ಸಂಭ್ರಮದ ಸೆಲೆ ಕಾಣಸಿಗುತ್ತಿಲ್ಲ.
ದಶಕದ ನಂತರ ಅಧಿಕಾರದ ಗದ್ದುಗೆಗೇರುತ್ತಿರುವ ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ನಾಯಕರ ಮಧ್ಯೆ ಉಂಟಾಗಿರುವ ಕಂದಕದ ಆಳ, ಅಗಲ ಮತ್ತಷ್ಟು ಹೆಚ್ಚುತ್ತಲೇ ಸಾಗುತ್ತಿರುವುದು ಪಕ್ಷದ ಸಂಘಟನೆಯ ಹಿನ್ನಡೆಗೆ ಕಾರಣವಾಗುತ್ತಿರುವುದಂತೂ ಸತ್ಯ.