ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಿಗಿರಿ ಮೇಲೆ ಶಾಸಕರ ಕಣ್ಣು

Srinivasa Murthy VN
Updated On : 13 May 2013, 12:26 pm

 -ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 12
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಲು ಗುಲ್ಬರ್ಗ ಜಿಲ್ಲೆಯಲ್ಲಿಯೂ ಶಾಸಕರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಈ ಬಾರಿ ಜಿಲ್ಲೆಯ 9 ಅಸೆಂಬ್ಲಿ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಈ ಪೈಕಿ ನಾಲ್ವರು ಮಾಜಿ ಮಂತ್ರಿಗಳು. ಹೀಗಾಗಿ ಹಳೆ ಹುಲಿಗಳ ಮಧ್ಯೆ ಮಂತ್ರಿಗಿರಿ ಪೈಪೋಟಿ ಈಗಾಗಲೇ ಕಾಣಿಸಿಕೊಂಡಿದೆ.
ಗುತ್ತೇದಾರ್‌ಗೆ ಯೋಗಾಯೋಗ?: ಅಫಜಲ್ಪುರ ಕ್ಷೇತ್ರದಿಂದ 6ನೇ ಬಾರಿ ಗೆದ್ದು ಶಾಸಕರಾಗಿರುವ ಮಾಲೀಕಯ್ಯ ಗುತ್ತೇದಾರ್ ಮಂತ್ರಿಗಿರಿಗಾಗಿ ಒಳಗೊಳಗೆ ಲಾಬಿ ಆರಂಭಿಸಿದ್ದಾರೆ. 1985, 1989ರಲ್ಲಿ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿದು ಶಾಸಕರಾಗಿದ್ದ ಅವರು ನಂತರ ಬಂಗಾರಪ್ಪ ನೇತೃತ್ವದ ಕೆಸಿಪಿ, ದೇವೇಗೌಡ ನೇತೃತ್ವದ ಜೆಡಿಎಸ್ ಜೊತೆ ಗುರುತಿಸಿಕೊಂಡು 1994 ಹಾಗೂ 1999ರಲ್ಲಿ ಶಾಸಕರಾದವರು.
  ಮತ್ತೆ ಕಾಂಗ್ರೆಸ್‌ಗೆ ಮರಳಿದ್ದ ಮಾಲೀಕಯ್ಯ 2008ರಲ್ಲಿ ಶಾಸಕರಾದವರು 2013ರಲ್ಲಿ ಮತ್ತೆ 6ನೇ ಬಾರಿಗೆ ಶಾಸಕರಾಗಿ ಮರುಆಯ್ಕೆಯಾಗಿದ್ದಾರೆ. ಹಿಂದುಳಿದ ಈಡಿಗ ಸಮುದಾಯದ ಇವರು ಜೆ.ಎಚ್. ಪಟೇಲ್ ನೇತೃತ್ವದ ದಳ ಸರ್ಕಾರದಲ್ಲಿ ಸಚಿವರಾಗಿದ್ದರು.
  ಸಿದ್ದರಾಮಯ್ಯ ಜೊತೆ ಸಂಪರ್ಕದಲ್ಲಿರುವ ಮಾಲೀಕಯ್ಯನವರಿಗೆ ಈಗ ಸರ್ಕಾರದ ನೇತೃತ್ವವನ್ನೇ ಅವರ ಗೆಳೆಯ ವಹಿಸುತ್ತಿರುವುದು ವರವಾಗಲಿದೆ ಎಂಬ ಮಾತುಗಳಿವೆ. ಆದಾಗ್ಯೂ ಇವರು ಹಿಂದೆಲ್ಲ ಕಾಂಗ್ರೆಸ್ ಕುರಿತಂತೆ ನೀಡಿದ್ದ ಹೇಳಿಕೆಗಳು ಹೈಕಮಾಂಡ್ ಸೇರಿದಂತೆ ಹಲವು ಹಂತಗಳಲ್ಲಿ ಚರ್ಚೆಗೂ ಗ್ರಾಸವಾಗಿದ್ದವು. ಅದನ್ನೆಲ್ಲ ಈಗ ಬದಿಗೊತ್ತಿದ್ದಾರೆ. ಹೀಗಾಗಿ ಮಂತ್ರಿಗಿರಿ ಅವರಿಗೆ ದೊರಕಬೇಕೆಂಬುದು ಅವರ ಆಪ್ತರ ಆಗ್ರಹ.
ಖಮರುಲ್‌ಗೆ ಸಚಿವಗಿರಿ ನಿಶ್ಚಿತ: 6ನೇ ಬಾರಿಗೆ ಶಾಸಕರಾಗಿರುವ ಖಮರುಲ್ ಇಸ್ಲಾಂ ಕೃಷ್ಣ ಸರ್ಕಾರದಲ್ಲಿ ವಸತಿ, ಕಾರ್ಮಿಕ ಸಚಿವರಾಗಿದ್ದವರು. 1978 ರಲ್ಲಿ ಸ್ವತಂತ್ರರಾಗಿ ಕಣದಲ್ಲಿದ್ದು ಗೆದ್ದಿದ್ದ ಖಮರುಲ್, ನಂತರ ಮುಸ್ಲಿಂ ಲೀಗ್‌ನಿಂದ (1989, 1994) 2 ಬಾರಿ ಶಾಸಕರಾದವರು. ನಂತರ ಕಾಂಗ್ರೆಸ್ ಸೇರಿ 1999ರಲ್ಲಿ ಶಾಸಕರಾಗಿದ್ದರು. ಗುಲ್ಬರ್ಗ ಉತ್ತರ ಕ್ಷೇತ್ರ ರಚನೆಯಾದ ನಂತರ 2008ರಲ್ಲಿ ಮತ್ತೆ ಇಲ್ಲಿಂದ ಕಾಂಗ್ರೆಸ್ ಶಾಸಕರಾಗಿದ್ದ ಇಸ್ಲಾಂ ಈ ಬಾರಿಯೂ ಮರುಆಯ್ಕೆಯಾದವರು.
ಅಲ್ಪಸಂಖ್ಯಾತ ಕೋಟಾದಲ್ಲಿ ತಮ್ಮನ್ನು ಪಕ್ಷ ಪರಿಗಣಿಸಬೇಕೆಂಬುದು ಇವರ ವಾದ. ಇದಲ್ಲದೆ ದೆಹಲಿ ಮಟ್ಟದಲ್ಲಿ ನೇರ ಸಂಪರ್ಕ ಹೊಂದಿರುವ ಇಸ್ಲಾಂ ಅವರಿಗೆ ಗುಲಾಂನಬಿ ಆಜಾದ್ ಸೇರಿದಂತೆ ಅನೇಕರ ಜೊತೆ ಸಖ್ಯವಿದ್ದು ಅದೆಲ್ಲವೂ ಇದೀಗ ಮಂತ್ರಿ ಗದ್ದುಗೆ ಹತ್ತಲು ಇಸ್ಲಾಂ ಬಳಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಈಗಾಗಲೇ ಹೈಕಮಾಂಡ್‌ನಲ್ಲಿ ತಮಗೆ ಬಲ್ಲಂತಹ ಎಲ್ಲರನ್ನು ಸಂಪರ್ಕಿಸಿದ್ದು ಮಂತ್ರಿಗಿರಿ ಲಾಬಿಯಲ್ಲಿ ಮುಂದಿದ್ದಾರೆ. ಇವರಿಗೆ ಸಿದ್ದು ಸಂಪುಟದಲ್ಲಿ ಮಿನಿಸ್ಟರ್‌ಗಿರಿ ನಿಶ್ಚಿತ ಎಂಬ ಮಾತುಗಳಿವೆ.
ಡಾ. ಶರಣಪ್ರಕಾಶಗೆ ಖರ್ಗೆ ಕಟಾಕ್ಷ: 2004, 2008, 2013... ಸತತ 3ನೇ ಬಾರಿ ಸೇಡಂ ಶಾಸಕರಾಗಿ ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿ ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ ಡಾ. ಶರಣಪ್ರಕಾಶ ಪಾಟೀಲ್ ಅವರೂ ಮಂತ್ರಿ ಹುದ್ದೆ ಕಣ್ಣಿಟ್ಟಿದ್ದಾರೆ.
  ಶಾಸಕತ್ವದ ಹಿರಿತನ, ಜೊತೆಗೇ ಖರ್ಗೆಯವರ ನಿಕಟವಕರ್ತಿಯಾಗಿರುವ ಡಾ. ಶರಣ, ಈ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಮಂತ್ರಿಯಾಗುವ ಉಜ್ವಲ ಅವಕಾಶ ಹೊಂದಿದ್ದಾರೆ ಎಂಬುದು ಜಿಲ್ಲೆಯ ಕಾಂಗ್ರೆಸ್ ಮೂಲಗಳ ವಿವರಣೆ. ಈ ಮಾತಿಗೆ ಪೂರಕವಾಗಿ ಡಾ. ಶರಣ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದು ಹೈಕಮಾಂಡ್, ರಾಜ್ಯ ಹಿರಿಯ ನಾಯಕರ ಹಂತದಲ್ಲಿ ಮಂತ್ರಿಗಿರಿಗಾಗಿ ಸತತ ಸಂಪರ್ಕದಲ್ಲಿದ್ದಾರೆ.
ರಾಮಕೃಷ್ಣಜಿ ಮಂತ್ರಿ ಆಗುವರೇನಯ್ಯ?: 3ನೇ ಬಾರಿ ಶಾಸಕರಾಗಿರುವ ಜಿ.ರಾಮಕೃಷ್ಣ ಅವರೂ ಮಂತ್ರಿಗಿರಿಗಾಗಿ ಪೈಪೋಟಿಯಲ್ಲಿದ್ದಾರೆ. 1986, 1989 ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಇವರು ಇದೇ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಇವರೂ ಉದ್ಯಾನ ನಗರಿಯಲ್ಲಿ ಬಿಡಾರ ಹೂಡಿದ್ದಾರೆ. ಖರ್ಗೆಯವರಿಗೆ ಇವರೂ ಹತ್ತಿರ. ಹೀಗಾಗಿ ಖರ್ಗೆಯವರ ಪ್ರಭಾವ, ತಮಗಿರುವ ಸಂಪರ್ಕಗಳನ್ನೆಲ್ಲ ಬಳಸಿ ಸಚಿವಗಿರಿ ಹೊಂದುವ ಪ್ರಯತ್ನ ಇವರು ಆರಂಭಿಸಿದ್ದಾರೆ.
  ಈ ಬಾರಿ ಗೆದ್ದ ಕಾಂಗ್ರೆಸ್ಸಿಗರಲ್ಲಿ ಹಲೆ ಹುಲಿಗಳೇ ಅಧಿಕ. ಇವರಲ್ಲಿ ಎಲ್ಲರೂ ಮಾಜಿ ಮಂತ್ರಿಗಳೇ. ಹೀಗಾಗಿ ಮಂತ್ರಿಗಿರಿ ಪೈಪೋಟಿ ಜಿಲ್ಲೆಯಿಂದಲೂ ಬಿರುಸಾಗಿಯೇ ನಡೆಯಲಿದೆ. ಇವರಲ್ಲಿ ಯಾರಿಗೆ ಮಂತ್ರಿಗಿರಿ ಯೋಗ ಕೂಡಿ ಬರುವುದೋ ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement