ಸಮಾಜಕ್ಕಾಗಿ ಜಂಗಮರಿಂದ ಜೀವನ ತ್ಯಾಗ
ಕ.ಪ್ರ. ವಾರ್ತೆ, ಗುಲ್ಬರ್ಗ/ಶಹಾಬಾದ್, ಮೇ 12
ಅನಾದಿ ಕಾಲದಿಂದಲೂ ವೀರಶೈವ ಸಮಾಜದ ರಕ್ಷಣೆಗಾಗಿ ಜಂಗಮರು ಗುರುಗಳು ಕೊಟ್ಟ ಜೋಳಿಗೆಯನ್ನು ಕೈಯಲ್ಲಿ ಹಿಡಿದು ಅದನ್ನೇ ತನ್ನ ಆಸ್ತಿಯನ್ನಾಗಿ ಮಾಡಿಕೊಂಡು ಧರ್ಮದ ರಕ್ಷಣೆ ಮಾಡುತ್ತ, ಧರ್ಮಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ ಎಂದು ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಚಂದ್ರಗುಂಡ ಶಿವಾಚಾರ್ಯರು ಹೇಳಿದರು.
ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮೇ 28ರವರಿಗೆ ನಡೆಸಲಾಗುತ್ತಿರುವ ಜಂಗಮ ವಟುಗಳಿಗೆ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಂಗಮರು ಧರ್ಮಕ್ಕಾಗಿ ಮಾಡಿದ ತ್ಯಾಗಕ್ಕಾಗಿ ಸಮಾಜ ಅವರಿಗೆ ಕಾಲು ಮುಟ್ಟಿ ನಮಸ್ಕರಿಸಲಾಗುತ್ತದೆ. ಅಂಥ ಜಂಗಮ ಸಮಾಜದ ವಟುಗಳಿಗೆ ಸಂಸ್ಕಾರ ಕೊಟ್ಟರೆ ಸಮಾಜವನ್ನು ಪರಿವರ್ತಿಸುತ್ತಾರೆ. ಸಮಾಜದ ಬೇರಾಗಿರುವ ಜಂಗಮ ಸಮಾಜಕ್ಕೆ ಸಂಸ್ಕಾರ ನೀಡಬೇಕೆಂದು ಹೇಳಿದರು.
ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ಒಂದು ತಿಂಗಳು ನಡೆಯುವ ಜಂಗಮ ವಟುಗಳ ಸಂಸ್ಕಾರ ಶಿಬಿರದಲ್ಲಿ ವೀರೇಶ ಶಾಸ್ತ್ರಿಯವರು ಪೌರೋಹಿತ್ಯ, ರುದ್ರಪಠನ, ಯೋಗ, ಮಂತ್ರ ಸಂಸ್ಕಾರ, ಪೂಜಾ ವಿಧಾನವನ್ನು ಕಲಿಸಿಕೊಡಲಾಗುತ್ತದೆ ಎಂದು ಹೇಳಿದರು.
ಅತಿಥಿಗಳಾಗಿ ಅಣೆಪ್ಪ ಇಂಗಿನಶೆಟ್ಟಿ, ಡಾ. ವೀರಭದ್ರಪ್ಪ ಇಂಗಿನಶೆಟ್ಟಿ, ಬಸವರಾಜ ಬಿರಾಳ, ವೀರ ಮಹೇಶ್ವರಿ ಸಮಾಜದ ಅಧ್ಯಕ್ಷ ಮೃತ್ಯುಂಯ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಸೋಮಶೇಖರ ನಂದಿದ್ವಜ ಸ್ವಾಗತಿಸಿದರು. ರವಿ ಅಲ್ಲಮಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಕುಂಬಾರ ವಂದಿಸಿದರು.
ನಗರದ ಗಣ್ಯರಾದ ಶಿವುಕುಮಾರ ಇಂಗಿನಶೆಟ್ಟಿ, ವಚನೋತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ ದಸ್ತಾಪುರ, ಶರಣು ಬಿರಾಳ, ಬಾಬುರಾವ ಪಂಚಾಳ ಸೇರಿದಂತೆ ಸಮಾಜ ಬಂಧುಗಳು ಉಪಸ್ಥಿತರಿದ್ದರು.
ಕೂಲಿಯೊಂದಿಗೆ ಕಲಿಕೆಗೂ ಸೈ..!
ಕನ್ನಡಪ್ರಭ ವಾರ್ತೆ ಸುರಪುರ ಮೇ 12
ಸಮೀಪದ ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಶಿಕಲಾ ಚಂದ್ರಕಾಂತ ಜಡಿಮರಳ 10ನೇ ತರಗತಿಯಲ್ಲಿ 466 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಬಡ ಕುಟುಂಬದ ಶಶಿಕಲಾ ಕೂಲಿ ಮಾಡಿ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಶಿಕಲಾ ತೀರಾ ಬಡತನದ ದಲಿತ ಕುಟುಂಬದಲ್ಲಿ ಜನಿಸಿದ್ದಾಳೆ. ವಿದ್ಯಾರ್ಥಿನಿಯ ತಂದೆ ಚಂದ್ರಕಾಂತ ತಾಯಿ ಭಾರತಿ ಅನಕ್ಷರಸ್ಥರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಬಡತನದ ಮಧ್ಯದಲ್ಲೂ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಚಂದ್ರಕಾಂತನ ಬಯಕೆ.
ಕಲಿಕೆಯೊಂದಿಗೆ ಕೂಲಿ!: ಕಿತ್ತು ತಿನ್ನುವ ಬಡತನವನ್ನು ನೀಗಿಸಿಕೊಳ್ಳಲು ಶಶಿಕಲಾ ಶಾಲಾ ರಜಾ ದಿನದಲ್ಲಿ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ಸಂಸಾರಕ್ಕೆ ನೆರವಾಗುತ್ತಿದ್ದಳು. ಕೂಲಿ ಕೆಲಸದೊಂದಿಗೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡು ಶಶಿಕಲಾ ಪ್ರತಿ ತರಗತಿಯಲ್ಲಿಯೂ ಪ್ರಥಮ ಸ್ಥಾನ ಪಡೆಯುತ್ತಾ ಬಂದಿರುವುದು ಆಕೆಯ ಓದಿನ ಆಸಕ್ತಿಯನ್ನು ಬಿಂಬಿಸುತ್ತದೆ. ಶಶಿಕಲಾ ಯಾವುದೇ ಟ್ಯೂಷನ್ಗೆ ಹೋಗದೆ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ಗಮನಕೊಟ್ಟು ಕೇಳಿ ಮನನ ಮಾಡಿಕೊಳ್ಳುತ್ತಿದ್ದಳು.
ಶಶಿಕಲಾಳ ಓದಿನ ಕಡೆಗೆ ಗಮನಹರಿಸಿ ಅಂದಿನ ದಿನದ ಅಭ್ಯಾಸವನ್ನು ಅಂದೇ ಮುಗಿಸುತ್ತಿದ್ದಳು. ಪಠ್ಯ ಪುಸ್ತಕದೊಂದಿಗೆ ನೈತಿಕ ಮೌಲ್ಯಗಳನ್ನು ಒಳಗೊಂಡ ಲೇಖನಗಳನ್ನು ಮತ್ತು ದೇಶಭಕ್ತರ, ಸಾಧಕರ ಜೀವನ ಚರಿತ್ರೆಗಳನ್ನು ಹಾಗೂ ಸಾಹಿತ್ಯಿಕ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರುವುದು ಆಕೆಯ ವಿಶೇಷತೆ.
ಓದಿಗೆ ಬಡತನ ಅಡ್ಡಿಯಾಗದು: ಬಡತನ ಓದಿಗೆ ಅಡ್ಡಿಯಾಗುವುದಿಲ್ಲ. ಓದು ಕಬ್ಬಿಣದ ಕಡಲೆಯೂ ಅಲ್ಲ. ಇದಕ್ಕೆ ಮೊದಲು ಆಸಕ್ತಿ ಬೇಕು. ತಿಳಿಯದ ವಿಷಯಗಳನ್ನು ಗುರುಗಳಿಂದ ಕೇಳಿ ತಿಳಿದುಕೊಳ್ಳಬೇಕು. ಇದಕ್ಕೆ ಯಾವುದೇ ಸಂಕೋಚಪಡಬಾರದು. ಪಠ್ಯ ಪುಸ್ತಕದೊಂದಿಗೆ ಇತರೆ ನೈತಿಕ ಮೌಲ್ಯಗಳುಳ್ಳ ಲೇಖನಗಳನ್ನು ಓದಬೇಕು. ಅಂದಿನ ಹೋಂ ವರ್ಕ್ ಅಂದೇ ಮಾಡಬೇಕು. ಇದರಿಂದ ಪರೀಕ್ಷೆಗೆ ಬಹಳಷ್ಟು ಅನೂಕೂಲವಾಗುತ್ತದೆ.
ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸಬೇಕು. ಪ್ರತಿ ಕ್ಷಣದಲ್ಲಿ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ. ಪ್ರತಿಯೊಬ್ಬರು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಅದಕ್ಕಾಗಿ ನಿರಂತರ ಶ್ರಮಪಡಬೇಕು. ಅಂದಾಗಲೇ ನಮ್ಮ ಗುರಿ ಈಡೇರುತ್ತದೆ ಎನ್ನುತ್ತಾಳೆ ಶಶಿಕಲಾ.
ದೇಶದ ಸಾಧಕರೇ ನನಗೆ ಪ್ರೇರಣೆ: ದೇಶದಲ್ಲಿ ಉನ್ನತ ಸಾಧನೆ ಮಾಡಿ ಕಿರಣ ಬೇಡಿ, ಸುಧಾ ನಾರಾಯಣಮೂರ್ತಿ, ಕಿರಣ ಮಜುಮ್ದಾರ್ ಸೇರಿದಂತೆ ಹಲವಾರು ಸಾಧಕ ಮಹಿಳೆಯರ ಜೀವನ ಯಶೋಗಾಥೆಯೇ ನನ್ನ ಓದಿಗೆ ಪ್ರೇರಣೆಯಾಗಿದೆ. ನಾನು ಒಳ್ಳೆಯ ಶಿಕ್ಷಣ ಪಡೆದು ಅವರಂತೆ ಉನ್ನತ ಸ್ಥಾನ ಪಡೆಯಬೇಕು. ನನ್ನ ತಂದೆ- ತಾಯಿ ಬಡತನವನ್ನು ನೀಗಿಸಬೇಕು ಎಂಬ ಗುರಿ ಹೊಂದಿದ್ದೇನೆ ಎಂಬುದು ಶಶಿಕಲಾಳ ಹೆಬ್ಬಯಕೆ.