ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೊಸ ಶಾಸಕರೆದುರು ಹತ್ತಾರು ಸವಾಲು

Srinivasa Murthy VN
Updated On : 13 May 2013, 12:26 pm

-ವಿಶೇಷ ವರದಿ
ಕ.ಪ್ರ. ವಾರ್ತೆ, ರಾಯಚೂರು, ಮೇ 12
ಚುನಾವಣೆಯಲ್ಲಿ ಆಯಾ ಕ್ಷೇತ್ರಗಳಲ್ಲಿನ ಸಮಸ್ಯೆಗಳೇ ಪ್ರಚಾರ ವಸ್ತು. ಮೂಲಸೌಲಭ್ಯಗಳ ಕೊರತೆ, ವಸತಿ ಯೋಜನೆಯ ಅವ್ಯವಸ್ಥೆ. ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿಗೆ ಅಲೆದಾಟಗಳೇ ಆಗಿನ ಶಾಸಕರ ವಿರುದ್ಧ ಟೀಕಾ ಪ್ರಹಾರಕ್ಕೆ ಆಹಾರ. ಚುನಾವಣೆ ಮುಗಿದಿದೆ. ಪ್ರಚಾರದ ಭರಾಟೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಬಹುದೊಡ್ಡ ಹೊಣೆ ಹೊಸ ಶಾಸಕರು ಹೊತ್ತಿದ್ದಾರೆ. ಹೊಸಬರ ಮುಂದೆ ಹಳೆಯ ಸವಾಲುಗಳು ಸಾಲು ಸಾಲಾಗಿವೆ.
ಜಿಲ್ಲೆ ಹತ್ತು ಹಲವು ಸಮಸ್ಯೆಗಳ ತವರೂರು. ಕೆಲ ಸಮಸ್ಯೆಗಳಿಗೆ ದಶಕಗಳ ಇತಿಹಾಸವಿದ್ದರೆ ಮತ್ತೆ ಕೆಲ ಸಮಸ್ಯೆಗಳು ಕಳೆದ ಕೆಲ ವರ್ಷಗಳಲ್ಲಿ ಹುಟ್ಟಿಕೊಂಡಂಥವು.ಹಳೆಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವೇ ಇನ್ನೂ ಮುಗಿದಿಲ್ಲ. ಹೊಸದಾಗಿ ಸಮಸ್ಯೆಗಳು ಧುತ್ತೆಂದು ಪ್ರತ್ಯಕ್ಷವಾಗುತ್ತಲಿವೆ.
ಪರದಾಟ ತಪ್ಪಿದ್ದಲ್ಲ: ಜಿಲ್ಲೆಯನ್ನು ಅತೀಯಾಗಿ ಕಾಡುತ್ತಿರುವುದು ಮೂಲಸೌಲಭ್ಯಗಳ ಕೊರತೆ. ಇದು ಎಲ್ಲ ಕ್ಷೇತ್ರಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಜಿಲ್ಲೆಯ ಎರಡೂ ಬದಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿ ಹರಿಯುತ್ತಿದ್ದರೂ ಸಮರ್ಪಕ ಕುಡಿಯುವ ನೀರು ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಬೇಸಿಗೆಯಲ್ಲಿ ದೊರೆಯುವುದಿಲ್ಲ. ಪರದಾಟ ಪ್ರತಿ ವರ್ಷ ತಪ್ಪಲ್ಲ.
ಜಿಲ್ಲೆಯ ನದಿ ತೀರದ ಗ್ರಾಮೀಣ ಪ್ರದೇಶಕ್ಕೆ ನದಿಯಲ್ಲಿ ನೀರಿದ್ದಾಗ ವಿದ್ಯುತ್ ಕಡಿತದಿಂದ ಕುಡಿಯುವ ನೀರಿಗೆ ಕೊರತೆ ಯಾದರೆ ನದಿ ಬತ್ತುತ್ತಿದ್ದಂತೆಯೇ ಒರತೆಯ ನೀರೇ ಗತಿ ಎಂಬಂತಾಗುತ್ತದೆ. ಕಲುಷಿತ ನೀರು ಸೇವನೆ ಆರೋಗ್ಯ ಸಂಬಂಧಿ ಸಮಸ್ಯೆಗೆ ನಿರಂತರ ದಾರಿ ಮಾಡುತ್ತಿದೆ.
ಇನ್ನು ಹದಗೆಟ್ಟ ರಸ್ತೆಗಳಿಗಂತೂ ಇಲ್ಲಿ ಲೆಕ್ಕವೇ ಇಲ್ಲ. ದೇವದುರ್ಗ ತಾಲೂಕಿನ ಸಾಧನೆ ಈ ನಿಟ್ಟಿನಲ್ಲಿ ಅತೀ ಹೆಚ್ಚು. ಈ ತಾಲೂಕಿನ 17ಕ್ಕೂ ಹೆಚ್ಚಿನ ಗ್ರಾಮಗಳಿಗೆ ರಸ್ತೆಯ ದುರವಸ್ಥೆಯ ಕಾರಣಕ್ಕೆ ಸರ್ಕಾರಿಬಸ್ ತೆರಳುವುದಿಲ್ಲ. ಇನ್ನು ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆಯಿದ್ದರೂ ಸೇತುವೆಗಳ ದುಸ್ಥಿತಿಗೆ ಬಸ್ ಸಾಗುತ್ತಿಲ್ಲ. ಪರಿಣಾಮ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಬಸ್ ತೆರಳದ ತಲಾ ನಾಲ್ಕರಿಂದ ಐದು ಗ್ರಾಮಗಳು ಇದ್ದೇ ಇವೆ.
ಶೌಚಾಲಯ ಕೊರತೆ: ಮಹಿಳಾ ಶೌಚಾಲಯಗಳ ಕೊರತೆಯಿಂದ ಮಹಿಳೆಯರದ್ದು ಸಂಕಷ್ಟದ ಬದುಕು.ರಾತ್ರಿಯವರೆಗೆ ಕಾದು ಕುಳಿತು ಬಹಿರ್ದೆಸೆಗೆ ಹೋಗುವಂಥ ಶೋಚನೀಯ ಪರಿಸ್ಥಿತಿ. ಇನ್ನು ವಸತಿ ಯೋಜನೆ ಅಡಿ ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಮನೆಗಳು ಮಂಜೂರಾಗಿದ್ದರೂ, ಉಳ್ಳವರಿಗೆ ದೊರೆತಿವೆ ಎಂಬ ಆರೋಪ ವ್ಯಾಪಕ. ಹೀಗಾಗಿ ಬಡವರು ಈಗಲೂ ಅನೇಕ ಕಡೆ ಹರುಕುಮುರುಕು ಮನೆಗಳಲ್ಲಿಯೇ ವಾಸವಾಗಿದ್ದಾರೆ.
2009ರ ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯ 53ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ 10ಸಾವಿರಕ್ಕೂ ಹೆಚ್ಚಿನ ಮನೆಗಳು ಕುಸಿದಿದ್ದು, ಆಸರೆ ಯೋಜನೆ ಅಡಿ ಮನೆಗಳನ್ನು ನಿರ್ಮಿಸಲಾಗಿದೆ. 8ಸಾವಿರ ಮನೆಗಳನ್ನು ಹಸ್ತಾಂತರಿಸಿದ್ದು, ಇನ್ನೂ ಎರಡು ಸಾವಿರಕ್ಕೂ ಹೆಚ್ಚಿನ ಆಸರೆ ಮನೆಗಳ ನಿರ್ಮಾಣ ಮುಗಿದಿದೆ. ಆದರೆ ಹಸ್ತಾಂತರಕ್ಕೆ ಕಾಯುವಂತಾಗಿದೆ.
ಸೌಲಭ್ಯಗಳ ಕೊರತೆ: ಈಗಾಗಲೇ ಹಸ್ತಾಂತರಗೊಂಡಿರುವ ಆಸರೆ ಮನೆಗಳು ಗ್ರಾಮೀಣ ಭಾಗದ ಜನರ ವಸತಿಗೆ ಯೋಗ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಸರೆ ಕಾಲನಿಗಳಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಅಷ್ಟೇ ಅಲ್ಲ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದಲ್ಲಿ ಸಣ್ಣದಾದ ಆಸರೆ ಮನೆಗಳಲ್ಲಿ ವಾಸವಾಗಿರಲು ಸಾಧ್ಯವಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪರಿಣಾಮ ಈಗಲೂ ಅನೇಕರು ತಮ್ಮ ಹಳೆಯ ಗ್ರಾಮಗಳಲ್ಲಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರ ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿದ್ದು ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಪ್ರಗತಿಯನ್ನು ಸ್ಥಗಿತಗೊಳಿಸಿದೆ. ಪರಿಣಾಮ ಅಭಿವೃದ್ಧಿಯಲ್ಲಿ ಜಿಲ್ಲೆಗೆ ತೀವ್ರ ಹಿನ್ನಡೆಯಾಗಿದೆ. ಹೊರಗಿನಿಂದ ಆಗಮಿಸಿದ ಜಿಲ್ಲೆಯ ಹೊಣೆ ಹೊತ್ತವರು ಜಿಲ್ಲೆಯ ಅಭಿವೃದ್ಧಿಯೆಡೆಗೆ ತೋರಿದ ಕಾಳಜಿ ಅಷ್ಟಕ್ಕಷ್ಟೇ.
ಸಮಸ್ಯೆಗಳ ಸರಮಾಲೆ: ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಹೊಸಬರು ಮರೆಯುವಂತಿಲ್ಲ.
 ಹಾಗೆಯೇ ದಶಕಗಳಿಂದ ಜನತೆಯನ್ನು ಕಾಡುತ್ತಿರುವ ಮೂಲಸೌಲಭ್ಯ ಮತ್ತಿತರೆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವೂ ನಡೆಸಬೇಕಿದೆ.
 ಈ ನಿಟ್ಟಿನಲ್ಲಿ ನೂತನ ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ನೂತನ ಶಾಸಕರು ಹಳೆಯ ಹಾಗೂ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಇದಕ್ಕೆ ಪಕ್ಷಾತೀತ ಪ್ರಯತ್ನ ನಡೆಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement