ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ

Srinivasa Murthy VN
Updated On : 14 May 2013, 10:24 am

ಶಹಾಪುರ: 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಟ್ಟುಕೊಂಡು ದುಡಿಯುತ್ತಿರುವ ಧೀಮಂತ ನಾಯಕ, ಅಜಾತ ಶತ್ರು ಎಂದೇ ಬಿಂಬಿತವಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದು ಇಡೀ ದಲಿತ ವರ್ಗಕ್ಕೆ ಆದ ಅವಮಾನ. ಇಡೀ ಹೈದ್ರಾಬಾದ್ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಧಕ್ಕೆ ತಂದ ಸಂಗತಿ ಎಂದು ಆರೋಪಿಸಿ ದಲಿತ ಸಮುದಾಯದ ಬಗೆಗಿನ ಕಾಂಗ್ರೆಸ್ ನಿಲುವನ್ನು ಖಂಡಿಸಿ ಹಲವಾರು ದಲಿತ ಸಂಘಟನೆಗಳು ಶಹಾಪುರ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.
ಸೋನಿಯಾಗಾಂಧಿ, ರಾಹುಲ್ ಭಾವಚಿತ್ರಕ್ಕೆ ಚಪ್ಪಲಿ ಹಾರ: ದಲಿತ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಘೋಷಣೆ ಕೂಗಿದರು.
ನಾಗಣ್ಣ ಬಡಿಗೇರ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ ಅತೀ ಕಡಿಮೆ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ಎಲ್ಲಾ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ.
ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕಾಗಿ ಮಾಡಿಕೊಂಡು ದಲಿತರನ್ನು ಅಧಿಕಾರದಿಂದ ದೂರವಿಡುವುದು ಇಡೀ ದಲಿತ ಸಮುದಾಯಗಳ ಆಕ್ರೋಶ ಹೆಚ್ಚಿಸಿದೆ. 7 ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಯಾದ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಿ 40 ವರ್ಷ ಪಕ್ಷದ ಏಳ್ಗೆಗಾಗಿ ದುಡಿದ ವ್ಯಕ್ತಿಯನ್ನು ಕಡೆಗಣಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಮೇಶ್ವರ ಸೋಲಿನ ಹಿಂದೆ ಕಾಣದ ಕೈಗಳು: ಇನ್ನಾದರೂ ಕಾಂಗ್ರೆಸ್ಸಿನ ಅಧಿನಾಯಕರು ಯೋಚಿಸಿ 30 ತಿಂಗಳ ಅವಧಿಗಾದರೂ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಬೆಲೆಯನ್ನು ಕಾಂಗ್ರೆಸ್ ತೆರಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಸೋಲಿನ ಹಿಂದೆಯೂ ಕಾಂಗ್ರೆಸ್ಸಿನ ಕಾಣದ ಕೈಗಳು ಕೆಲಸಮಾಡಿವೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನೆಯ ಸ್ವರೂಪ ತೀವ್ರ ತರವಾಗಿದ್ದು ಎಲ್ಲರಲ್ಲೂ ಆಕ್ರೋಶದ ಭಾವನೆ ಎದ್ದು ಕಾಣುತ್ತಿತ್ತು. ಈ ಸಂದರ್ಭದಲ್ಲಿ ಹೊನ್ನಪ್ಪ ಗಂಗನಾಳ, ಮಹಾದೇವ ದಿಗ್ಗಿ, ಶಿವಪುತ್ರ ಜವಳಿ, ಶರಣಪ್ಪ ಕೊಂಬಿನ್, ರಾಜು ಅಣಬಿ, ಭೀಮರಾಯ ಸೈದಾಪುರ, ಮರೆಪ್ಪ ಕನ್ಯಾಕೋಳೂರು, ಸಿದ್ದಪ್ಪ ಬೇವಿನಹಳ್ಳಿ, ಮರೆಪ್ಪ ಕ್ರಾಂತಿ, ಚಂದ್ರಶೇಖರ ಹುರಸಗುಂಡಿಗಿ, ರಾಯಪ್ಪ ಗಂಗನಾಳ, ದೇವಿಂದ್ರಪ್ಪ ದಿಗ್ಗಿ, ಹೈಯಾಳಪ್ಪ ಗಂಗನಾಳ, ವಿರುಪಾಕ್ಷಿ, ಶಿವು ತಳವಾರ, ಮಹಾದೇವಪ್ಪ ಶಾರದಹಳ್ಳಿ, ಮಹಾಂತೇಶ, ಮರಿರಾಜು ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement