ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೈ.ಕ. ಜಿಲ್ಲೆಗಳಿಗಿಲ್ಲ 'ಸ್ಥಾನ'ಮಾನ

ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ)ನೇ ಕಲಂ ಜಾರಿಗೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಾರಣ.

Srinivasa Murthy VN
Updated On : 20 May 2013, 11:44 am

ಕ.ಪ್ರ. ವಾರ್ತೆ ರಾಯಚೂರು ಮೇ 19-
ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ)ನೇ ಕಲಂ ಜಾರಿಗೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಾರಣ. ಕಾಂಗ್ರೆಸ್‌ನಿಂದ ಮಾತ್ರ ಹಿಂದುಳಿದ ಪ್ರದೇಶದ ಅಭಿವೃದ್ಧಿ ಸಾಧ್ಯ. ಇಂಥ ಕಾಂಗ್ರೆಸ್ ನಾಯಕರ ಘೋಷಣೆಗಳು ಆ ಪಕ್ಷಕ್ಕೆ ಚುನಾವಣೆಯಲ್ಲಿ ಯಶಸ್ಸು ತಂದಿವೆ. ಆದರೆ ಪಕ್ಷವನ್ನು ಬಹುತೇಕ ಬೆಂಬಲಿಸಿದ ಮತದಾರರ ಆಲೋಚನೆಗೆ ತದ್ವಿರುದ್ಧವಾಗಿ ರಾಜ್ಯ ಸಂಪುಟದಲ್ಲಿ ಕೇವಲ 4 ಸ್ಥಾನ ದಕ್ಕಿದ್ದು ತೀವ್ರ ಅಸಮಾಧಾನಕ್ಕೆ ದಾರಿ ಮಾಡಿದೆ.
ಹೈ.ಕ. ಭಾಗದಿಂದ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಗೆಲ್ಲಿಸಿದರೆ ವಿಶೇಷ ಸ್ಥಾನಮಾನದ ಜಾರಿಗೆ ಪೂರಕ ಪರಿಸರ ನಿರ್ಮಾಣ ಸಾಧ್ಯ ಎಂಬ ಕೇಂದ್ರದ ನಾಯಕರ ಮಾತಿಗೆ ಬೆಲೆ ಕೊಟ್ಟ ಇಲ್ಲಿನ ಜನತೆಗೆ ಕಾಂಗ್ರೆಸ್ ಆರಂಭದಲ್ಲಿಯೇ ಆಘಾತವುಂಟು ಮಾಡಿದೆ.
ಕೀಳು ಧೋರಣೆ: ರಾಜ್ಯದ ಇನ್ನುಳಿದ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಪಕ್ಷವು, ಹೈ.ಕ. ಭಾಗದ ವಿಷಯದಲ್ಲಿ ಮಾತ್ರ ಎಲ್ಲವೂ ನೀಡಿದ ನಂತರದಲ್ಲಿ ಅಳಿದುಳಿದದ್ದು ನಿಮ್ಮ ಪಾಲು ಎಂಬ ಧೋರಣೆ ಪ್ರದರ್ಶಿಸಿರುವುದು ಸ್ಪಷ್ಟ. ಈಚೆಗೆ ನಡೆದ ಚುನಾವಣೆಯಲ್ಲಿ ಹೈ.ಕ. ಪ್ರದೇಶದಿಂದ 19 ಜನ ಶಾಸಕರು ಆಯ್ಕೆಯಾಗಿದ್ದಾರೆ.
2008ರ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಆ ಪಕ್ಷದ 19 ಜನರನ್ನು ಇಲ್ಲಿನ ಜನತೆ ಆಯ್ಕೆ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಇಲ್ಲಿನವರಿಗೆ ಇನ್ನಷ್ಟು ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿತ್ತು.
ಹಿಂದುಳಿದ ಪ್ರದೇಶ ಕಡೆಗಣನೆ: ಆದರೆ ಅಂಥ ನಿರೀಕ್ಷೆಯೀಗ ಸುಳ್ಳಾಗಿದೆ. ಸದ್ಯ ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ್, ಶಿವರಾಜ್ ತಂಗಡಗಿ, ಬಾಬುರಾವ್ ಚಿಂಚನಸೂರು ಅವರನ್ನು ಬಿಟ್ಟರೆ ಬೇರೆಯವರಿಗೆ ಸಚಿವ ಸ್ಥಾನ ದಕ್ಕಿಲ್ಲ. 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ಸಮರ್ಪಕ ಜಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಆಯ್ಕೆ ಮಾಡಲು ಪ್ರಚಾರದ ವೇಳೆ ಮನವಿ ಮಾಡಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಸಿಎಂ ಹುದ್ದೆ ಕೈ ತಪ್ಪಿದೆ.
ರಾಜ್ಯದಲ್ಲಿಯೇ ತೀರಾ ಹಿಂದುಳಿದ ಪ್ರದೇಶದ ಹಣೆಪಟ್ಟಿ ಕಟ್ಟಿಕೊಂಡಿರುವ ಹೈ.ಕ. ಪ್ರದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದ ಡಾ. ನಂಜುಂಡಪ್ಪ ವರದಿಯಲ್ಲಿ ಈ ಭಾಗಕ್ಕೆ ಎಲ್ಲ ರೀತಿಯಿಂದ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕೆಂದು ಹೇಳಲಾಗಿದೆ. ಆದರೆ ಅದು ಇದುವರೆಗೆ ಸಾಧ್ಯವಾಗಿಲ್ಲ ಎಂಬ ಕೊರಗು ಇಲ್ಲಿನ ಹೈ.ಕ. ಹೋರಾಟಗಾರರದ್ದಾಗಿದೆ.
ಘನಘೋರ ಅನ್ಯಾಯ: ಈ ಕುರಿತು ಕ.ಪ್ರ. ಮಾತನಾಡಿದ ಹೈ.ಕ. ಹೋರಾಟ ಸಮಿತಿ ಮುಖಂಡ ರಾಘವೇಂದ್ರ ಕುಷ್ಟಗಿ, ಹೈ.ಕ. ಭಾಗಕ್ಕೆ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬೆರಳೆಣಿಕೆ ಸ್ಥಾನ ಸಿಕ್ಕಿದ್ದು ಘನಘೋರ ಅನ್ಯಾಯವೇ ಸರಿ. ನಂಜುಂಡಪ್ಪ ವರದಿಯಂತೆ ಕನಿಷ್ಠ 9 ಸಚಿವ ಸ್ಥಾನಗಳು ಹೈ.ಕ. ಭಾಗದವರಿಗೆ ದೊರೆಯಬೇಕು. ಆದರೆ ಸದ್ಯ ಕೇವಲ 4 ಸ್ಥಾನಗಳನ್ನು ನೀಡಲಾಗಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆ ಖಚಿತ ಎಂದಿದ್ದಾರೆ.
ಮತ್ತೊಂದೆಡೆ ಸದ್ಯ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹೈ.ಕ. ಭಾಗದವರಿಗೆ ದೊರೆತ ಖಾತೆಗಳ ಬಗ್ಗೆಯೂ ಈ ಭಾಗದ ಜನರಲ್ಲಿ ಬೇಸರ ಮೂಡಿದೆ. ಪ್ರಮುಖ ಖಾತೆಗಳು ಇಲ್ಲಿನವರಿಗೆ ದೊರೆತಿಲ್ಲ. ಖಮರುಲ್ ಇಸ್ಲಾಂ ಅವರಿಗೆ ವಕ್ಫ್ ಮತ್ತು ಪೌರಾಡಳಿತ, ಬಾಬುರಾವ್ ಚಿಂಚನಸೂರು ಅವರಿಗೆ ಕ್ರೀಡೆ, ಶಿವರಾಜ್ ತಂಗಡಗಿ ಅವರಿಗೆ ಸಣ್ಣ ನೀರಾವರಿ ಮತ್ತು ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಿರುವುದು ಈ ಭಾಗದವರಿಗೆ ನೀಡಿರುವ ಆದ್ಯತೆಯನ್ನು ಅದೆಷ್ಟು ಎಂಬುದನ್ನು ಸಾರುತ್ತದೆ.
ತಾರತಮ್ಯ ಸರಿಯಲ್ಲ: ಹೈ.ಕ. ಭಾಗದಲ್ಲಿ ಬೀದರ್, ರಾಯಚೂರು ಜಿಲ್ಲೆಯಿಂದ ಕಾಂಗ್ರೆಸ್ಸಿಗರು ಆಯ್ಕೆಯಾಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಒಂದೆಡೆ 371ನೇ ಕಲಂ(ಜೆ)ಅಡಿ ವಿಶೇಷ ಸ್ಥಾನಮಾನ ನೀಡಿಕೆ, ಪ್ರಾದೇಶಿಕ ಅಸಮಾತೋಲನೆ ನಿವಾರಣೆಯ ವಾದ ಮಂಡಿಸುವ ಕಾಂಗ್ರೆಸ್ ಹೈಕಮಾಂಡ್ ಮತ್ತೊಂದೆಡೆ ಹೈ.ಕ. ಭಾಗದ ಎರಡು ಜಿಲ್ಲೆಗಳಿಗೆ ತಾರತಮ್ಯ ಮಾಡಿದ್ದು ಸರಿಯಲ್ಲ ಎಂಬುದು ಈ ಭಾಗದ ಹೋರಾಟಗಾರರ ಅಸಮಾಧಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement