ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

371 ಜೆ ಕಲಂ: ಕರವೇ ವಿಜಯೋತ್ಸವ

Srinivasa Murthy VN
Updated On : 8 Nov 2013, 11:10 am

ರಾಯಚೂರು: ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಗೆ ರಾಜ್ಯಪಾಲರಿಂದ ಅಂಕಿತಗೊಂಡ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಹೈ-ಕ ಭಾಗದ ಜಿಲ್ಲೆಗಳ ಬಹು ವರ್ಷಗಳ ಕನಸಿನ ನಿರೀಕ್ಷೆಗೆ ರಾಜ್ಯಪಾಲರಿಂದ ಅಂಕಿತ ಹಾಕುವ ಮೂಲಕ ನನಸಾಗಿದೆ. ಸದರಿ 371(ಜೆ) ನೇ ಕಲಂ ರಾಜ್ಯ ಸರ್ಕಾರ ಎಲ್ಲ ಇಲಾಖೆಗಳು ಚಾಚೂ ತಪ್ಪದೆ ಜಾರಿಯಾಗುವಂತೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿನ ಸೌಲಭ್ಯಗಳನ್ನು ಹೈ-ಕ ಭಾಗಕ್ಕೆ ಇಂದಿನಿಂದಲೇ ದೊರಕುವಂತೆ ಅಂಗೀಕಾರ ಹೊರಬೀಳುತ್ತಿದ್ದಂತೆ ವೇದಿಕೆ ಪದಾಧಿಕಾರಿಗಳು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ವಿಶಿಷ್ಟ ರೀತಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಮಂಜುನಾಥ ಹಾನಗಲ್, ಜಿ. ಮಹೇಂದ್ರರೆಡ್ಡಿ, ನಾಗರಾಜ, ವೀರೇಶ, ಬಾಬಾ, ಗೋಪನಗೌಡ, ಮಲ್ಲೇಶ, ಗೋವಿಂದ, ಮಹೆಬೂಬ, ಶಫಿ, ಹಮೀದ್, ಅರುಣ, ಬಾಷಾ, ಮಾರೆಣ್ಣ ಸೇರಿದಂತೆ ಇದ್ದರು.

ಶಾಲಾ ಮೈದಾನದಲ್ಲಿ ಚರಂಡಿ ನೀರು
ಮುದಗಲ್: ಸಮೀಪದ ಸಜ್ಜಲಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚರಂಡಿ ನೀರು ಹರಿಯುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚರಂಡಿ ನೀರು ಹರಿಯುವುದರಿಂದ ವಿದ್ಯಾರ್ಥಿಗಳ ಆಟಕ್ಕೆ ತೊಂದರೆಯಾಗಿದೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವವಿದೆ. ಶಾಲಾ ಅನುದಾನದಲ್ಲಿ ಮೈದಾನಕ್ಕೆ ಮರಂ ಹಾಕಿಸುವಂತೆ ಸಭೆಯಲ್ಲಿ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಮುಖ್ಯಗುರು ಹಾಗೂ ಶಾಲಾ ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಶಿವಪ್ಪ ಕೆಲ್ಲೂರು, ಸಂಗಪ್ಪ ಹವಲ್ದಾರ, ಬಸಪ್ಪ, ಯಮನಪ್ಪ, ಸುರೇಶ, ಆರೋಪಿಸಿದ್ದಾರೆ. ಮುಂದಾದರೂ ಸ್ಥಳಿಯ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಚರಂಡಿ ನೀರು ಬೇರೆ ಕಡೆ ಸರಬರಾಜು ಮಾಡುವರೇ ಕಾಯಬೇಕಾಗಿದೆ.

ನಾಳೆ ರಾಷ್ಟ್ರೀಯ ಕಾನೂನು ದಿನಾಚರಣೆ
ರಾಯಚೂರು: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಮಿಡಿಯೇಷನ್ ಸೆಂಟರ್‌ನಲ್ಲಿ ನ.9 ರಂದು ರಾಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ. ಕೃಷ್ಣಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ನ್ಯಾಯವಾದಿಗಳ ಸಂಘದ ಅದ್ಯಕ್ಷ ಭಾನುರಾಜ ವಕೀಲರು ವಹಿಸುವರು. ಹಿರಿಯ ವಕೀಲ ಬಸವರಾಜಪ್ಪ, ವಿ. ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement