ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ವೈಜ್ಞಾನಿಕ ಬೆಲೆ ನೀಡಿ'

Srinivasa Murthy VN
Updated On : 8 Nov 2013, 11:10 am

ಕನ್ನಡಪ್ರಭ ವಾರ್ತೆ ರಾಯಚೂರು ನ.7
ಬತ್ತ, ಹತ್ತಿ ಹಾಗೂ ತೊಗರಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಮತ್ತು ತುಂಗಭದ್ರ ಎಡದಂಡೆ ನಾಲೆಯ ಕೆಳಭಾಗದ ಎಲ್ಲ ಉಪಕಾಲುವೆಗಳ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡಬೇಕು ಹಾಗೂ ಕಾಲುವೆಗೆ ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್‌ರಿಗೆ ಗುರುವಾರ ಮನವಿ ಸಲ್ಲಿಸಿದರು.
ತಾಲೂಕಿನ ದಡೇಸುಗೂರು ಗ್ರಾಮದಿಂದ ನ. 2ರಂದು ಆರಂಭಿಸಿ ರೈತರ ಪಾದಯಾತ್ರೆ ನ. 7 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು. ನಂತರ ರೈತರ ಸಭೆ ನಡೆಸಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.
ನಿರ್ಲಕ್ಷ್ಯ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳು ಸಮೃದ್ಧ ನೀರಾವರಿಯಾಗಿದ್ದು, ಬತ್ತದ ಬೆಳೆ ಮೂಲ ಸಾಗುವಳಿಯಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಆಡಳಿತ ನಡೆಸಿ ರೈತರ ಬೆನ್ನೆಲಬನ್ನು ಮುರಿಯುತ್ತ ಬಂದಿವೆ. ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಪ್ರತಿ ವರ್ಷ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ ಬಂದರೂ ಜಾಣ ಕಿವುಡು ತೋರುತ್ತಾ ಬಂದಿವೆ. ರೈತರು ಬೆಳೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತ ಪ್ರತಿ ಅರ್ಧ ಗಂಟೆಗೊಮ್ಮೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಹಾಗೂ ಗುಳೆ ಹೋಗುವಂತ ಅಪಾಯಕಾರಿ ನಿರ್ಣಯ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ತುಂಗಭದ್ರ ಎಡದಂಡೆ ನಾಲೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಮುಖ್ಯ ಕಾಲುವೆಗೆ ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಏಪ್ರಿಲ್ 15ರವರೆಗೆ 3600 ಕ್ಯೂಸೆಕ್ ಕಡ್ಡಾಯಗೊಳಿಸಬೇಕು. ಬತ್ತಕ್ಕೆ ರು. 3 ಸಾವಿರ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು. ಕೃಷ್ಣ ಹಿನ್ನೀರಿನ ಜಮೀನುಗಳನ್ನು ರೈತರಿಗೆ ಹಿಂತಿರುಗಿಸಬೇಕು. ಕೃಷ್ಣಾ ಜಲಾಶಯದಿಂದ 2ನೇ ಬೆಳೆಗೆ ಕಡ್ಡಾಯವಾಗಿ ನೀರು ಒದಗಿಸಬೇಕು. ಎಲ್ಲ ತಾಲೂಕುಗಳಲ್ಲಿ ಬತ್ತ, ಜೋಳ, ತೊಗರಿ ಖರೀದಿ ಕೇಂದ್ರ ತೆಗೆಯುವ ಮೂಲಕ ನಿಯಮ ಸಡಿಲಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ರೈತರಿಗೆ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದ ಯಂತ್ರಗಳಿಗೆ ರಿಯಾಯಿತಿ ಹಣ ಮಂಜೂರಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ, ರಾಜ್ಯ ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ಜಿಲ್ಲಾಧ್ಯಕ್ಷ ಸೂಗೂರಯ್ಯ ಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಶೇಖರಪ್ಪ ಸಾಹುಕಾರ, ತಾಲೂಕು ಅಧ್ಯಕ್ಷ ವೆಂಕಟರೆಡ್ಡಿ ರಾಜಲಬಂಡಾ, ರೈತ ಮುಖಂಡರಾದ ಅಮರೇಶ ಹೂಗಾರ, ಶರಣಪ್ಪ ಮಳ್ಳಿ, ಬಸಪ್ಪ ಕಬ್ಬೇರ ಸೇರಿದಂತೆ ನೂರಾರು ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement