ದೌರ್ಜನ್ಯ ತಡೆಗೆ ಮದ್ದರೆಯಿರಿ
ಎಸ್ಸಿ-ಎಸ್ಟಿ ಜನರ ಮೇಲೆ ನಿರಂತರ ದೌರ್ಜನ್ಯಕ್ಕೆ ಖಂಡನೆ
ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಸಿಪಿಎಂನಿಂದ ಸಹಿ ಸಂಗ್ರಹ
ಕನ್ನಡಪ್ರಭ ವಾರ್ತೆ ರಾಯಚೂರು ನ.26
ಎಸ್ಸಿ, ಎಸ್ಟಿ ಜನಾಂಗದವರ ಮೇಲೆ ದೌರ್ಜನ್ಯ ತಡೆ ಕಾಯಿದೆ 1989ರ ಕಾಯಿದೆಗೆ ತಿದ್ದುಪಡಿ ತಂದು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸಿಪಿಎಂ ಪಕ್ಷದ ಕಾರ್ಯಕರ್ತರು ಸಹಿ ಸಂಗ್ರಹ ಚಳವಳಿ ನಡೆಸಿದರು.
ನಗರದ ತಹಸೀಲ್ದಾರ್ ಕಚೇರಿ ಎದುರು ಸಹಿ ಸಂಗ್ರಹ ಚಳವಳಿ ನಡೆಸಿದ ಕಾರ್ಯಕರ್ತರು, ದೇಶದಲ್ಲಿ ಎಸ್ಸಿ, ಎಸ್ಟಿ ಜನಾಂಗದವರನ್ನು ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿವೆಯೇ ವಿನಾ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.
ಕಪಿಮುಷ್ಟಿ: ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕನಸು ದಲಿತರ ಪಾಲಿಗೆ ಇನ್ನೂ ನನಸಾಗಿಲ್ಲ. ದಲಿತರಿಗೆ ಸೇರಬೇಕಾದ ಜಮೀನುಗಳು ಈಗಲೂ ಜಮೀನುದಾರರ ಕಪಿಮುಷ್ಟಿಯಲ್ಲಿವೆ. ಅಂಥ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವಲ್ಲಿ ಸರ್ಕಾರ ವಿಳಂಬ ತೋರುತ್ತಿದೆ ಎಂದು ಟೀಕಿಸಿದರು.
ದೌರ್ಜನ್ಯ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೇಶದಲ್ಲಿ ದಿನವೂ ದೌರ್ಜನ್ಯ ನಡೆಯುತ್ತಿದೆ. ದಬ್ಬಾಳಿಕೆ, ಹಲ್ಲೆ, ಅತ್ಯಾಚಾರಗಳಂಥ ಘಟನೆಗಳಿಗೆ ಕೊನೆಯಿಲ್ಲವಾಗಿದೆ. ಇಂಥ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರಸರ್ಕಾರಗಲು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಸದ್ಯದ ಕಾನೂನು ವ್ಯವಸ್ಥೆಯಲ್ಲಿ ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ತಡೆವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 1989ರಲ್ಲಿ ರಚನೆಯಾಗಿರುವ ಕಾಯಿದೆಗೆ ತಿದ್ದುಪಡಿ ತರಬೇಕು. ಸುಮಾರು 25ವರ್ಷಗಳಷ್ಟು ಹಳೆ ಕಾನೂನಿನಿಂದ ದಲಿತರ ರಕ್ಷಣೆ ಅಸಾಧ್ಯ ಎಂದು ದೂರಿದರು.
ಸಹಿ ಸಂಗ್ರಹ: ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಈ ಕಾಯಿದೆಯಲ್ಲಿನ ಲೋಪದೋಷ ಸರಿಪಡಿಸುವ ಅವಶ್ಯಕತೆಯಿದೆ. ಸರ್ಕಾರಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಡಿ.5ರವರೆಗೆ ಎಲ್ಲೆಡೆ ಸಹಿ ಸಂಗ್ರಹ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಸಿದರು.
ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಈ ಕಾಯಿದೆಗೆ ತಿದ್ದುಪಡಿ ತಂದು ಸದನದಲ್ಲಿ ಮಂಡಿಸಿ ಅಂಗೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಘಟನೆ ನಡೆದ ಕೂಡಲೇ ದೌರ್ಜನ್ಯಕ್ಕೊಳಗಾದವರಿಗೆ ಪುನಾವಸತಿ ಕಲ್ಪಿಸುವ ಕಾರ್ಯ ನಡೆಯಬೇಕೆಂದು ಒತ್ತಾಯಿಸಿದರು.
ಹೆಚ್ಚುವರಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ದೌರ್ಜನ್ಯ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಕಾರ್ಯ ಸರ್ಕಾರ ಮಾಡಬೇಕು. ದೌರ್ಜನ್ಯಕ್ಕೊಳಗಾದವರ ಮತ್ತು ಸಾಕ್ಷಿದಾರರ ಹಕ್ಕುಗಳನ್ನು ಕಾಯಿದೆಯಲ್ಲಿ ವಿವರಿಸಬೇಕು. ಜಾತಿ ತಾರತಮ್ಯ ಮಾಡುವ ಎಲ್ಲ ಆಚರಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಥ ಆಚರಣೆಗಳನ್ನು ಅಪರಾಧ ಎಂದು ಪರಿಗಣಿಸಿ ವಿಚಾರಣೆಗೊಳಪಡಿಸುವಂತೆ ಒತ್ತಾಯಿಸಿದರು. ಎಸ್ಸಿ, ಎಸ್ಟಿ ಜನಾಂಗದವರ ಮೇಲಾಗುವ ದೌರ್ಜನ್ಯದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತಷ್ಟು ಕಠಿಣಗೊಳಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ ನಡೆಸಿದರು. ಪಕ್ಷದ ತಾಲೂಕು ಕಾರ್ಯದರ್ಶಿ ಕೆ.ಜಿ.ವೀರೇಶ್, ಡಿ.ಎಸ್.ಶರಣಬಸವ, ಎಚ್.ಪದ್ಮಾ, ಪಾರ್ವತಿ, ವರಲಕ್ಷ್ಮಿ, ಕರಿಯಪ್ಪ ಅಚ್ಚೊಳ್ಳಿ, ಗೌರಮ್ಮ, ಚನ್ನಬಸಯ್ಯ ಸೇರಿ ಅನೇಕರಿದ್ದರು.