ಭೂರಹಿತರಿಗೆ ಜಮೀನು; 28ರಿಂದ ಧರಣಿ
ಕನ್ನಡಪ್ರಭ ವಾರ್ತೆ ರಾಯಚೂರು ನ.26
ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಜಮೀನು ಕೊಡಿ ಎಂದು ಆಗ್ರಹಿಸಿ ಬಿಎಸ್ಪಿ ಪಕ್ಷದಿಂದ ನ.28ರಿಂದ 30ರವರೆಗೆ ಬೃಹತ್ ಧರಣಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಎಸ್ಪಿ ಸಂಯೋಜಕ ಹನುಮಂತಪ್ಪ ವಕೀಲರು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ರಿಯಲ್ ಎಸ್ಟೇಟ್, ದೊಡ್ಡ ಭೂಮಾಲೀಕರು ಅಕ್ರಮವಾಗಿ ಹೊಂದಿರುವ ಸರ್ಕಾರಿ ಜಮೀನು ವಶಪಡಿಸಿಕೊಂಡು ಭೂರಹಿತರಿಗೆ ಅಂಥ ಜಮೀನು ವಿತರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಕ್ರಮ- ಸಕ್ರಮ ಹಕ್ಕು ಪತ್ರ ನೀಡಿ: ರಾಜ್ಯ ಸರ್ಕಾರ ಕೂಡಲೇ ಬಾಲಸುಬ್ರಹ್ಮಣ್ಯಂ ಸಮಿತಿ ವರದಿಯನ್ನು ಒಪ್ಪಿಕೊಳ್ಳಬೇಕು. ಸರ್ಕಾರಿ ಜಮೀನು ಅಕ್ರಮವಾಗಿ ಕಬಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆಯೇ ಬಗರ್ ಹುಕುಂ ಸಾಗುವಳಿದಾರರಿಗೆ ಅಕ್ರಮ ಸಕ್ರಮ ಯೋಜನೆ ಅಡಿ ಜಮೀನುಗಳ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
1991- 99ರ ಅವಧಿಯಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಂಥ ಅನೇಕ ಬಡವರಿದ್ದು, ಅವರಿಗೆ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಭೂರಹಿತರಿಗೆ, ಸಣ್ಣ ಹಿಡುವಳಿದಾರರಿಗೆ ಸರ್ಕಾರ ಮತ್ತೊಮ್ಮೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಭೂ ನ್ಯಾಯ ಮಂಡಳಿ ಸ್ಥಾಪಿಸಿ: ಸರ್ಕಾರದ ಸೂಚನೆಯಂತೆ ಮಿತಿಗಿಂತ ಹೆಚ್ಚಿನ ಜಮೀನು ಹೊಂದಿರುವವರಿಂದ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಅಂಥ ಜಮೀನನ್ನು ಭೂರಹಿತರಿಗೆ ಹಂಚಿಕೆ ಮಾಡಬೇಕು. ಇಂಥ ಎಲ್ಲ ಅಕ್ರಮಗಳ ತಡೆಗೆ ಭೂನ್ಯಾಯ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಶೇ. 80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿಯ ಕೊರತೆಯಿದೆ. ಅಂಥ ಗ್ರಾಮ, ಪಟ್ಟಣಗಳಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಒಂದು ಕಾಲಮಿತಿಯೊಳಗೆ ಸ್ಮಶಾನ ಜಮೀನು ನೀಡಿಕೆಗೆ ಕ್ರಮ ಕೈಗೊಳ್ಳಬೇಕು. ಇದುವರೆಗೆ ದೇಶದಲ್ಲಿ ಆಳಿದ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಿಲ್ಲ ಎಂದು ದೂರಿದರು.
28ರಿಂದ ಧರಣಿ: ಸಾಮಾಜಿಕ ನ್ಯಾಯ, ಸಮಾನತೆಯನ್ನು ಬಡ ಜನತೆಗೆ ದೊರಕಿಸಿಕೊಡುವಲ್ಲಿ ಎಲ್ಲ ಪಕ್ಷಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಜಮೀನು ಕೊಡಿ ಎಂದು ಒತ್ತಾಯಿಸಿ ನ. 28ರಿಂದ ನ.30ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಹುಜನ ಸಮಾಜ ಪಕ್ಷದಿಂದ ಬೃಹತ್ ಧರಣಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಚಂದ್ರಶೇಖರ್ ಭಂಡಾರಿ, ಜಯಣ್ಣ, ಮಮ್ತಾಜುದ್ದೀನ್, ಜೇಮ್ಸ್, ಹನಮಂತ್ರಾಯ ಕಪಗಲ್, ಬಿ.ಎಸ್.ಪಾಟೀಲ್ ಸೇರಿ ಅನೇಕರಿದ್ದರು.