ಆತ್ಮಹತ್ಯೆಗೆ ಸಿಎಂ ಉದ್ದಟತನ ಕಾರಣ
ಸಿಂಧನೂರು: ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದ ರೈತರಿಗೆ ಸಿಎಂ ಸಿದ್ದರಾಮಯ್ಯ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಭರವಸೆ ನೀಡಿದ್ದರೆ ರೈತ ವಿಠಲ್ ಅರಬಾವಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸಿಎಂ ಉದ್ದಟತನವೇ ಈ ಸ್ಥಿತಿಗೆ ಕಾರಣ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಬ್ಬರ ಕೇಳಿದ ರೈತರ ಮೇಲೆ ಬಿಜೆಪಿ ಸರ್ಕಾರ ಗೋಲಿಬಾರ್ ಮಾಡಿತು. ಕಬ್ಬಿಗೆ ನ್ಯಾಯಯುತ ಬೆಲೆ ಕೇಳಿದ ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಇದೊಂದು ಭೀಕರ ದುರಂತ. ಸಿಎಂ ಆದವರು ರೈತರ ಭೇಟಿಯಾಗಲು ಪ್ರತಿಷ್ಠೆ ಯಾಕೆ, 24 ದಿನಗಳ ಕಾಲ ಧರಣಿ ನಡೆಸಿದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸೌಜನ್ಯಕ್ಕಾದರೂ ಮಾತನಾಡಿಸಲಿಲ್ಲ. ಇಂತಹ ವರ್ತನೆ ಶೋಭೆ ತರುವುದಿಲ್ಲ ಎಂದರು.
ಚಳವಳಿ: ಪ್ರತಿ ಕ್ವಿಂ ಬತ್ತಕ್ಕೆ ಕನಿಷ್ಠ 2 ಸಾವಿರ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಸೋಮವಾರ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ರಸ್ತೆ ತಡೆ ಚಳವಳಿ ಹಮ್ಮಿಕೊಂಡಿರುವುದಾಗಿ ಅವರು ವಿವರಿಸಿದರು.