ಆಶಾ ಕಾರ್ಯಕರ್ತೆಯರ ಸೇವೆಗೆ ಸ್ಪಂದಿಸದ ಸರ್ಕಾರ
ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪ್ರಧಾನ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅಸಮಾಧಾನ
ಕನ್ನಡಪ್ರಭ ವಾರ್ತೆ ರಾಯಚೂರು ನ.29
ಸರ್ಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತರುವ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದ್ದು, ಪ್ರಾಮಾಣಿಕ ಮತ್ತು ಆದರ್ಶಪ್ರಾಯ ರೀತಿಯ ಸೇವೆಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ನಗರದ ರಂಗಮಂದಿರದಲ್ಲಿ ಶುಕ್ರವಾರ ಎಐಯುಟಿಯುಸಿ ಸಂಘಟನೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಆರೋಗ್ಯ, ನೈರ್ಮಲ್ಯ ಕುರಿತು ಗ್ರಾಮೀಣ ಭಾಗದಲ್ಲಿ ಸಮರ್ಪಕ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಟೀಕಿಸಿದರು.
ಪ್ರೋತ್ಸಾಹ ಧನ: ಗ್ರಾಮೀಣ ಭಾಗದಲ್ಲಿ ಸುರಕ್ಷಿತ ಹೆರಿಗೆ, ಗರ್ಭಿಣಿಯರ ಆರೋಗ್ಯ ಕಾಪಾಡುವುದು, ತಾಯಿ-ಶಿಶು ಮರಣ ನಿಯಂತ್ರಣ, ಆರೈಕೆ ಹಾಗೂ ನಾನಾ ರೋಗಗಳ ತಡೆಗೆ ಆಶಾ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಕ್ಕೆ ಕಾರ್ಯಕರ್ತೆಯರ ಅಗತ್ಯತೆ ಸರ್ಕಾರಕ್ಕೆ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಾಗಿದೆ. ಆದರೆ ಕಡಿಮೆ ಪ್ರೋತ್ಸಾಹ ಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರಿಗೆ ಸೇವೆ ಸಲ್ಲಿಸುವ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ಸೌಲತ್ತು ಸಿಗುತ್ತಿಲ್ಲ. ವಿವಿಧ ಬೇಡಿಕೆಗಳ ಈಡೇರಿಕೆ ನಿಟ್ಟಿನಲ್ಲಿ ಸರ್ಕಾರಕ್ಕೆ ಕಾರ್ಯಕರ್ತರು ಒಗ್ಗೂಡಿ ಹೋರಾಟಕ್ಕಿಳಿಯುವ ಮೂಲಕ ಬಿಸಿ ಮುಟ್ಟಿಸಬೇಕಿದೆ. ಕಾರ್ಯ ತಂತ್ರ ರೂಪಿಸುವುದು ಅವಶ್ಯಕ ಎಂದರು.
ಕಳೆದ ಐದುವರ್ಷಗಳಿಂದ ಆಶಾ ಕಾರ್ಯಕರ್ತೆಯರು ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಮ್ಯಾಚಿಂಗ್ ಗ್ರ್ಯಾಂಟ್ ವಿತರಿಸಲು ಸಮ್ಮಿಸಿರುವುದು ಆಶಾ ಕಾರ್ಯಕರ್ತೆಯರ ಹೋರಾಟದ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೋರಾಟ ಮುಖ್ಯ: ಆಶಾ ಕಾರ್ಯಕರ್ತೆಯರ ಸೇವೆ ಕಾಯಮಾತಿ, ಕನಿಷ್ಠ ಸಂಬಳ, ಕೆಲಸದ ದೃಢೀಕರಣ ಪತ್ರ ಪಡೆಯುವುದರ ಕುರಿತ ಸಮಸ್ಯೆಗಳ ಪರಿಹಾರ, ಪ್ರತಿ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ತಂಗಲು ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಾಣ, ಸಲ್ಲಿಸುತ್ತಿರುವ ಎಲ್ಲ ಸೇವೆಗಳ ಪ್ರಕರಣದಲ್ಲಿ ನೀಡುವ ಪ್ರೋತ್ಸಾಹಧನ ಹೆಚ್ಚಳ ಮತ್ತು ಏಕಕಾಲಕ್ಕೆ ಪಾವತಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಮುಂದಿನ ದಿನಗಳಲ್ಲಿ ಹೋರಾಡುವುದು ಅವಶ್ಯಕ ಎಂದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಎಂಎಸ್ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಅಪರ್ಣಾ ಮಾತನಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳ ವಿರುದ್ಧ ನಡೆಸುತ್ತಿರುವ ಹೋರಾಟಗಳಿಗೆಲ್ಲ ಎಎಂಎಸ್ಎಸ್ ಸಂಘಟನೆಯ ಬೆಂಬಲವಿದೆ. ರಾಜ್ಯದಲ್ಲಿನ ಎಲ್ಲ 33 ಸಾವಿರ ಆಶಾ ಕಾರ್ಯಕರ್ತೆಯರನ್ನು ಒಂದೇ ಸಂಘಟನೆಯಲ್ಲಿ ಒಗ್ಗೂಡಿಸುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಸಮ್ಮೇಳನದ ಅಧ್ಯಕ್ಷತೆ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್. ವಹಿಸಿದ್ದರು.
ಸಂಘದ ಪ್ರಮುಖರಾದ ಡಾ. ಸುನೀತ್ ಕುಮಾರ್, ಚೇತನಾ ಬನಾರೆ, ಆಶಾ ಕಾರ್ಯಕರ್ತೆಯರಾದ ತಾಯಮ್ಮ, ಲಕ್ಷ್ಮಿ, ಸುಜಾತಾ, ಸರಸ್ವತಿ, ಈರಮ್ಮ, ರಘುವೀರ ಮಸ್ಕಿ ಸೇರಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು ಸಮ್ಮೇಳನದಲ್ಲಿದ್ದರು.