ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಫಾರ್ಮಸಿ ಕ್ಷೇತ್ರ-ಜಾಗತಿಕ ಮಟ್ಟದಲ್ಲಿ ಪ್ರಗತಿ: ವಿಶ್ವಾಸ ಅಗತ್ಯ

Srinivasa Murthy VN
Updated On : 30 Nov 2013, 10:32 am

ಅಡ್ವಾನ್ಸಸ್ ಇನ್ ಫಾರ್ಮಸಿ ಪ್ರಾಕ್ಟೀಸ್ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಡಾ. ಟಿ.ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ರಾಯಚೂರು  ನ.29
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಫಾರ್ಮಾಸಿಸ್ಟ್‌ಗಳಿಗೂ ರೋಗಿಯ ಸಮಸ್ಯೆ ಅರಿಯುವ ಹಾಗೂ ಔಷಧೀಯ ಸಲಹೆ ನೀಡುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫಾರ್ಮಾಸಿ ಕ್ಷೇತ್ರದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವಶ್ಯಕ ಎಂದು ನವೋದಯ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್ ಸಲಹೆ ನೀಡಿದರು.
ಅವರು ನಗರದ ನವೋಯದ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜಿನ ಆಶ್ರಯದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿ ವತಿಯಿಂದ ಆಯೋಜಿಸಿದ್ದ ಅಡ್ವಾನ್ಸಸ್ ಇನ್ ಫಾರ್ಮಸಿ ಪ್ರಾಕ್ಟೀಸ್ ಎಂಬ ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆ: ಫಾರ್ಮಾಸಿ ಪದವೀಧರರನ್ನು ಕೇವಲ ಔಷಧ ವಿತರಣೆ ಮತ್ತು ಮಾರಾಟದಂಥ ಕಾರ್ಯಗಳಿಗೆ ಸೀಮಿತಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಾಗುತ್ತಿರುವ ಪ್ರಗತಿಯಿಂದ ಫಾರ್ಮಾಸಿಸ್ಟ್‌ಗಳಿಗೂ ರೋಗಿಗಳ ಸಮಸ್ಯೆ ಅರಿಯುವ ಅವಕಾಶ ದೊರೆಯುತ್ತಿದೆ ಎಂದು ತಿಳಿಸಿದರು.
ವಿದೇಶಗಳಲ್ಲಿ ಈಗಾಗಲೇ ಫಾರ್ಮಾಸಿಸ್ಟ್‌ಗಳು ವೈದ್ಯರಂತೆಯೇ ರೋಗಿಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಆರೋಗ್ಯ ಸಂಬಂಧಿ ಸಮಸ್ಯೆ ಅರ್ಥೈಸಿಕೊಳ್ಳುವ ಹಾಗೂ ಔಷಧದ ಸಲಹೆ ನೀಡುವ ಕಾರ್ಯಕ್ಕೆ ಅವಕಾಶ ಕಲ್ಪಿಸಿದ್ದು, ಅಂಥ ವ್ಯವಸ್ಥೆ ದೇಶದಲ್ಲಿಯೂ ಶೀಘ್ರ ಜಾರಿಗೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ವೈದ್ಯರು ರೋಗಿಯ ಆರೋಗ್ಯ ಸುಧಾರಣೆಯ ಹೊಣೆ ಹೊರುತ್ತಾರಾದರೂ, ಔಷಧ ತಯಾರಿಕೆಯಲ್ಲಿ ಫಾರ್ಮಾಸಿ ಕ್ಷೇತ್ರದವರ ಸಾಧನೆ ಕಡೆಗಣಿಸುವಂತಿಲ್ಲ. ಔಷಧ ತಯಾರಿಕೆ ಕ್ಷೇತ್ರದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈದ್ಯಕೀಯ ಕ್ಷೇತ್ರ ಮುಂದಡಿಯಿಡಬೇಕಿದೆ ಎಂದರು.
ತಂಡವಾಗಿ ಕಾರ್ಯ ನಿರ್ವಹಿಸಿ: ನವೋದಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್.ಆರ್. ಹೆಗಡೆ, ರೋಗಿಗಳಿಗೆ ಚಿಕಿತ್ಸೆ ನೀಡಿಕೆಯ ನಿರ್ವಹಣೆಯು ವೈದ್ಯರು, ನರ್ಸ್‌ಗಳು, ಫಾರ್ಮಸಿಸ್ಟ್ ಗಳೆಲ್ಲರೂ ಒಂದು ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು.
ಫಾರ್ಮಸಿ ಕೋರ್ಸುಗಳ ಅಧ್ಯಯನಕ್ಕೆ ಪ್ರವೇಶ ಪಡೆಯುವವರು ನಿರಂತರ ಅಧ್ಯಯನ ಹಾಗೂ ರೋಗಿಗಳೊಂದಿಗೆ ಸಂಪರ್ಕ ವಿರಿಸಿಕೊಳ್ಳುವ ಮೂಲಕ ವೃತ್ತಿಯಲ್ಲಿ ಪರಿಪೂರ್ಣತೆ ಪಡೆಯಬೇಕು. ಇಂದಿನ ದಿನಮಾನದಲ್ಲಿ ಫಾರ್ಮಸಿ ಕೋರ್ಸಿನ ವಿದ್ಯಾರ್ಥಿಗಳು ಕೇವಲ ನಿಗದಿತ ಸಮಯಕ್ಕೆ ತರಬೇತಿ ಸೀಮಿತಗೊಳಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಕಿವಿಮಾತು ಹೇಳಿದರು.
ನಿರಂತರ ಕಲಿಕೆ: ರೋಗಿಗಳೊಂದಿಗೆ ಹೆಚ್ಚೆಚ್ಚು ಕಾಲ ಕಳೆಯುವುದರಿಂದ ಅವರ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನಿಸುವತ್ತ ಫಾರ್ಮಸಿ ಕ್ಷೇತ್ರದ ಪದವೀಧರರು ಮುಂದಾಗಬೇಕು. ನಿರಂತರ ಕಲಿಕೆ, ಸಂಶೋಧನೆಗಳ ಬಗ್ಗೆ ಮಾಹಿತಿ ತಿಳಯುವಿಕೆಯಿಂದ ವೈಯಕ್ತಿಕ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ನವೋದಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ದೊಡ್ಡಯ್ಯ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಡಾ. ಅಶೋಕ ಮಾಲ್ಪಾನಿ ಉಪಸ್ಥಿತರಿದ್ದರು. ರಾಜೀವಗಾಂಧಿ ವಿವಿ ವ್ಯಾಪ್ತಿಯ ಫಾರ್ಮಸಿ ಕಾಲೇಜುಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement