ರೈತ ಆತ್ಮಹತ್ಯೆಗೆ ಸರ್ಕಾರವೇ ಹೊಣೆ
ಕ.ಪ್ರ.ವಾರ್ತೆ ರಾಯಚೂರು ನ.28
ಕಬ್ಬು, ಹತ್ತಿ, ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡದ ಸರ್ಕಾರದ ನಿರ್ಲಕ್ಷ್ಯದ ಧೋರಣೆಯಿಂದಾಗಿ ರಾಜ್ಯದಲ್ಲಿ ರೈತನ ಆತ್ಮಹತ್ಯೆಗೆ ದಾರಿ ಮಾಡಿದೆ ಎಂದು ಆರೋಪಿಸಿ ನಗರ ಯುವಘಟಕದ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಿ ಸಿಎಂ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿಯ ಸುವರ್ಣ ಸೌಧದ ಎದುರು ಬೆಳಗಾವಿಯ ಅರಭಾವಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬತ್ತ, ಹತ್ತಿ, ಕಬ್ಬು ಮತ್ತಿತರೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ಅಸಡ್ಡೆ ತೋರಿದ್ದರಿಂದಲೇ ರೈತ ಸಮುದಾಯ ಪ್ರತಿಭಟನೆಗೆ ಇಳಿಯುವಂತಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ರಾಜ್ಯದ ರೈತರ ಹಿತಕಾಯಲು ಮುಂದಾಗಬೇಕು. ತಕ್ಷಣ ಎಲ್ಲ ಬೆಳೆಗಳಿಗೆ ಸೂಕ್ತ ಬೆಂಬಲ ಪ್ರಕಟಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ನೊಂದ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಹೋರಾಟಗಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶಿವಶಂಕರ, ಎಂ.ವಿರೂಪಾಕ್ಷಿ, ನಗರಸಭೆ ಸದಸ್ಯರಾದ ಹರೀಶ ನಾಡಗೌಡ, ಮಕ್ಬೂಲ್, ನಗರ ಯುವ ಘಟಕದ ಅಧ್ಯಕ್ಷ ರಾಮಕೃಷ್ಣ ಆರ್. ಸೇರಿ ಪಕ್ಷದ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರಿದ್ದರು.
ಪ್ರತಿಭಟನೆ: ಬೆಳಗಾವಿಯಲ್ಲಿ ಅರಭಾವಿಯ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಡಿಸಿ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರವೇ ಜಿಲ್ಲಾ ಘಟಕ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದ ಎರಡೂ ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರ ಪರ ಧೋರಣೆ ಅನುಸರಿಸುತ್ತಿದೆ. ಅದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ರೈತರ ಬಹುದಿನದ ಬೇಡಿಕೆಯತ್ತ ಗಮನಹರಿಸದಿರುವುದರಿಂದ ರೈತನ ಆತ್ಮಹತ್ಯೆಯಂಥ ಘಟನೆ ನಡೆದಿದೆ ಎಂದು ಹೋರಾಟಗಾರರು ಆರೋಪಿಸಿದರು.
ಕಬ್ಬು ಬೆಳೆದ ರೈತರಿಗೆ ವಿವಿಧ ಸಕ್ಕರೆ ಕಾರ್ಖಾನೆಗಳು 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಈ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಮೃತ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿ ಕೈ ತೊಳೆದುಕೊಳ್ಳದೇ ಆತನ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ರಾಜ್ಯಪಾಲರಿಗೆ ಕೋರಿದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭ ಉಭಯ ಸಂಘಟನೆಗಳ ಪ್ರಮುಖರಾದ ಅಮರಣ್ಣ ಗುಡಿಹಾಳ, ಬಸನಗೌಡ ಬಲ್ಲಟಗಿ, ಲಕ್ಷ್ಮಣಗೌಡ ಕಡಗಂ ದೊಡ್ಡಿ, ನರಸಪ್ಪ ವಕ್ರಾಣಿ, ಕೆ.ವೀರೇಶಗೌಡ, ಬಸನಗೌಡ ಮಲ್ಲಿಗೆ ಮಡುವು, ಅಶೋಕಕುಮಾರ ಸಿ.ಕೆ. ಜೈನ್, ಖಲೀಲ್ ಪಾಷಾ, ರಘುವೀರನಾಯಕ, ಮಲ್ಲು, ಸಾಗರ, ಮಾನಸಿಂಗ್ ಠಾಕೂರ್ ಸೇರಿ ನೂರಾರು ಕಾರ್ಯಕರ್ತರಿದ್ದರು. ಈ ವೇಳೆ ಬೆಳಗಾವಿಯಲ್ಲಿ ಆತ್ಮಹತ್ಯೆ ಹಿನ್ನೆಲೆ ಕರವೇ ಕಾರ್ಯಕರ್ತರು ಮೌನಾಚರಿಸಿ ಸಂತಾಪ ವ್ಯಕ್ತಪಡಿಸಿದರು.
ಬೆಂಬಲ ಬೆಲೆಗೆ ಮೊರೆ: ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಗುರುವಾರ ಪ್ರತಿ ಟನ್ ಕಬ್ಬಿಗೆ 3000 ದರ ನಿಗದಿಗೆ ಆಗ್ರಹಿಸಿ ಹಾಗೂ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮೃತ ರೈತನ ಕುಟುಂಬದ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡಬೇಕು ಎಂದೂ ಸಂಘದ ಜಿಲ್ಲಾ ಸಮಿತಿ ಸಿಎಂ ಅವರಿಗೆ ಒತ್ತಾಯಿಸಿದ್ದು, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಜಾಲಹಳ್ಳಿ, ಉಪಾಧ್ಯಕ್ಷ ಕೆ.ಜಿ. ವೀರೇಶ ಜಂಟಿಯಾಗಿ ಮನವಿ ಸಲ್ಲಿಸಿ, ಸರ್ಕಾರ ಕಾರ್ಖಾನೆಗಳ ಮಾಲೀಕರ ಪರ ನಿಲುವು ರೈತನ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಕಾರ್ಯಕರ್ತರಿದ್ದರು.
ಬೆಳೆಗೆ ವೈಜ್ಞಾನಿಕ ಬೆಲೆಗೆ ಆಗ್ರಹ
ದೇವದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಬೆಳೆದ ಕಬ್ಬು, ಬತ್ತ, ತೊಗರಿ ಮತ್ತಿತರೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡದೇ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆರೋಪಿಸಿದರು.
ಗುರುವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಬೆಳಗಾವಿಯಲ್ಲಿ ಸುವರ್ಣ ಸೌಧದ ಮುಂದೆ ಕಬ್ಬಿಗೆ ಸೂಕ್ತ ಬೆಲೆ ದೊರೆಯದ್ದರಿಂದ ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕು. ಘಟನೆ ಬಗ್ಗೆ ತನಿಖೆಯಾಗಬೇಕು. ಕಬ್ಬು ಸೇರಿ ರೈತರು ಬೆಳೆವ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೆ ಸರ್ಕಾರ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರೈತ ಸಂಘದ (ಕೆ.ಆರ್.ಎಸ್) ತಾಲೂಕು ಸಮಿತಿಯ ಸದಾಶಿವ ಗೋಪಾಳಪುರು, ದುರುಗಣ್ಣ ಇರಬಗೇರಾ, ಆಂಜನೇಯ್ಯ, ಹನುಮಂತ್ರಾಯ, ಮಾರ್ತಾಂಡಪ್ಪ, ಖಾಜಾ ಹುಸೇನ್, ರಮೇಶ ಸೇರಿ ಅನೇಕರಿದ್ದರು.
ಬಿಜೆಪಿಯಿಂದ ಸಿಎಂ ಪ್ರತಿಕೃತಿ ದಹನ
ಕಬ್ಬು ಬೆಳೆಗಾರನ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ ಸರ್ಕಾರದಿಂದ ಜಾತಿ ಓಲೈಕೆ; ಆರೋಪ
ರಾಯಚೂರು: ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರ ವಿಠ್ಠಲ್ ಅರಭಾವಿ ಆತ್ಮಹತ್ಯೆ ಘಟನೆಯಿಂದ ರಾಜ್ಯ ಸರ್ಕಾರ ರೈತ ವಿರೋಧಿ ಎಂಬುದು ಸಾಬೀತಾಗಿದೆ. ರೈತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಸಿಎಂ ಪ್ರತಿಕೃತಿ ದಹಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ರೈತರಿಗೆ ಸೂಕ್ತ ರಕ್ಷಣೆ ನೀಡಲು ವಿಫಲವಾದ ಸರ್ಕಾರ ವಜಾಕ್ಕೆ ಒತ್ತಾಯಿಸಿದರು.
ನಿರ್ಲಕ್ಷ್ಯ ಧೋರಣೆ: ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ರೈತರು ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ರೈತರು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ರೈತರ ಪರ ಎಂದು ಹೇಳಿಕೊಳ್ಳುತ್ತಲೇ ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಾತಿ ಓಲೈಕೆ ರಾಜಕೀಯದಲ್ಲಿ ಮುಳುಗಿ ರೈತರ ಸಮಸ್ಯೆಗಳನ್ನು ಮರೆತಿದೆ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸದ ಸರ್ಕಾರ ಸಕ್ಕರೆ ಕಾರ್ಖಾನೆಗಳ ಪರ ನಿಲುವು ತಾಳಿದ್ದರಿಂದಲೇ ಬೆಳಗಾವಿಯ ಸುವರ್ಣಸೌಧದ ಎದುರು ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರನೇ ಈ ಘಟನೆಗೆ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.
ಸಿಎಂ ರಾಜಿನಾಮೆಗೆ ಆಗ್ರಹ: ರೈತನ ಆತ್ಮಹತ್ಯೆಗೆ ಕಾರಣವಾಗಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ತಪ್ಪಿದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವುದು ಹೆಚ್ಚು ಸೂಕ್ತ ಎಂದು ಹೇಳಿದರು.
ಒಂದೆಡೆ ಕೇಂದ್ರ ಸರ್ಕಾರ ಅಗತ್ಯವಸ್ತುಗಳ ಬೆಲೆಯೇರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅದರಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಸಮರ್ಪಕ ಹಾಗೂ ವೈಜ್ಞಾನಿಕ ಬೆಲೆ ನೀಡುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.
ಕಾಳಜಿಯಿಲ್ಲ: ಕಳೆದ ಆರು ತಿಂಗಳಿಂದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ಕಾರ್ಯವೈಖರಿಯು ಜನತೆಗೆ ಅನುಮಾನ ಬರುವಂತೆ ಮಾಡಿದೆ. ಕೇವಲ ಜಾತಿ ರಾಜಕೀಯ ಮಾಡುತ್ತಲೇ ಕಾಲಹರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ, ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಹಿರಿಯ ಮುಖಂಡರಾದ ತಿಮ್ಮಯ್ಯ, ತ್ರಿವಿಕ್ರಮ್ ಜೋಷಿ, ಬಂಡೇಶ ವಲ್ಕಂದಿನ್ನಿ, ರಮಾನಂದ ಯಾದವ್, ರಾಜಕುಮಾರ, ರಮೇಶ ಗುರುಮಿಟ್ಕಲ್, ಕಡಗೋಳ ರಾಮಚಂದ್ರ, ಜೇಮ್ಸ್, ನರಸಪ್ಪ ಯಕ್ಲಾಸಪೂರ, ಬಿ.ಎಸ್. ಸುರಗಿಮಠ, ಡಬ್ಲ್ಯು.ರಾಮಪ್ಪ ಸೇರಿದಂತೆ ಅನೇಕರಿದ್ದರು.
ರೈತನ ಆತ್ಮಹತ್ಯೆಗೆ ಕಾಂಗ್ರೆಸ್ ಧೋರಣೆ ಕಾರಣ: ಆಕ್ರೋಶ
ರಾಯಚೂರು: ಕಬ್ಬಿಗೆ ಬೆಳೆಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರ ವಿಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿ ರುವುದಕ್ಕೆ ಕಾಂಗ್ರೆಸ್ ಸರ್ಕಾರದ ಫ್ಯಾಸಿಸ್ಟ್ ನೀತಿಗಳೇ ಕಾರಣ ಎಂದು ಸಿಪಿಎಂಎಲ್ ರೆಡ್ ಫ್ಲ್ಯಾಗ್ ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ. ಬಸವಲಿಂಗಪ್ಪ, ರಾಜ್ಯದೆಲ್ಲೆಡೆ ರೈತರು ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ, ಕಳೆದ ಅನೇಕ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅತ್ತ ಗಮನಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದ ಎದುರು ಅಧಿವೇಶನದ ಸಂದರ್ಭ ಹೋರಾಟ ನಡೆಸುವ ಮೂಲಕ ಗಮನ ಸೆಳೆಯುವ ಕಾರ್ಯ ಮಾಡಿದ ರೈತರನ್ನು ಸರ್ಕಾರ ಕಡೆಗಣಿಸಿರುವುದು ಫ್ಯಾಸಿಸ್ಟ್ ನೀತಿಯನ್ನು ಸ್ಪಷ್ಟಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಹಾವೇರಿಯಲ್ಲಿ ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಹೋರಾಟಕ್ಕಿಳಿದಾಗ ಅವರ ಮೇಲೆ ಆಗಿನ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿತ್ತು. ಇಂದು ಕೆಜೆಪಿ, ಬಿಜೆಪಿಗಳು ಸಹ ಮತ ಗಳಿಕೆಯ ಹುನ್ನಾರದಿಂದಲೇ ವಿವಿಧ ಕಾರಣಕ್ಕೆ ರೈತರ ಪರ ಮೊಸಳೆ ಕಣ್ಣೀರು ಸುರಿಸುವ ನಾಟಕವಾಡುತ್ತಿವೆ ಎಂದು ಟೀಕಿಸಿದ್ದಾರೆ.
ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿಯೇ ದೇಶದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆತ್ಮಹತ್ಯೆ ಪ್ರಕರಣಗಳು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರು ಇದನ್ನು ಮನಗಂಡು ಸರ್ಕಾರಗಳು ಜಾರಿಗೆ ತರುತ್ತಿರುವ ಜಾಗತೀಕರಣ ಪರ ನೀತಿಗಳ ವಿರುದ್ಧ ಹೋರಾಡುವುದು ಅವಶ್ಯಕ ಎಂದು ತಿಳಿಸಿದ್ದಾರೆ.