ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಸಕರಷ್ಟೇ ಬದಲು, ಅಕ್ರಮ ನಿರಂತರ

Srinivasa Murthy VN
Updated On : 30 Nov 2013, 10:25 am

ಕನ್ನಡಪ್ರಭ ವಾರ್ತೆ ರಾಯಚೂರು ನ.29
ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಕಳೆದೈದು ವರ್ಷಗಳಲ್ಲಿ 1 ಸಾವಿರ ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದ್ದು, 900 ಕೋಟಿ ರು. ಲೂಟಿ ಮಾಡಲಾಗಿದೆ. ಈಗ ಶಾಸಕರು ಬದಲಾಗಿದ್ದಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುವುದು ಮಾತ್ರ ನಿಂತಿಲ್ಲ.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಇಂಥ ಆರೋಪ ಮಾಡಿದ್ದು, ಪರಿಷತ್ತಿನ ಅಧ್ಯಯನ ತಂಡವು ಈಚೆಗೆ ದೇವದುರ್ಗ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಸಿದ ಅಧ್ಯಯನ ಪ್ರವಾಸದ ವೇಳೆ ಅನೇಕ ಅಕ್ರಮಗಳು ಬಯಲಿಗೆ ಬಂದಿದ್ದು, ಹಿಂದುಳಿದ ತಾಲೂಕಿನ ಅಭಿವೃದ್ಧಿ ಇನ್ನು ಅಸಾಧ್ಯ ಎಂಬಂಥ ಪರಿಸ್ಥಿತಿಯಿದೆ ಎಂದು ಆರೋಪಿಸಿದರು.
ಬಿಲ್ ಪಾವತಿ: ದೇವದುರ್ಗ ತಾಲೂಕಿಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಶಿವನಗೌಡ ನಾಯಕ ಅವರು 1 ಸಾವಿರ ಕೋಟಿ ರು. ಅನುದಾನ ದೊರೆತಿದೆ ಎಂದು ಹೇಳಿದ್ದು, ಅದರಲ್ಲಿ 900 ಕೋಟಿ ರು. ಅನುದಾನದ ದುರ್ಬಳಕೆಯಾಗಿದೆ. ಅನೇಕ ಕಡೆ ಕಾಮಗಾರಿ ನಡೆಸದೇ ಗುತ್ತಿಗೆದಾರರಿಗೆ ಗ್ರಾಪಂಗಳಿಂದ ಬಿಲ್ ಪಾವತಿಸಿರುವುದು ಕಂಡುಬಂದಿದೆ ಎಂದು ದೂರಿದರು.
ದೇವದುರ್ಗ ಕ್ಷೇತ್ರವನ್ನು ಸದ್ಯ ಕಾಂಗ್ರೆಸ್ ಶಾಸಕ ವೆಂಕಟೇಶ ನಾಯಕ ಅವರು ಪ್ರತಿನಿಧಿಸುತ್ತಿದ್ದು, ಅವರ ಮೇಲೆ ಕ್ಷೇತ್ರದ ಜನತೆ ಬಹಳ ನಿರೀಕ್ಷೆಯಿಸಿರಿಕೊಂಡಿದ್ದರು. ಆದರೆ ಶಾಸಕರು ಈ ಮೊದಲು ನಡೆದಿದ್ದ ಅಕ್ರಮಗಳ ಬಗ್ಗೆ ತನಿಖೆಗೆ ಮುಂದಾಗದೇ ಅವರೂ ಅಕ್ರಮಕ್ಕೆ ಬೆಂಬಲಿಸುವ ಕಾರ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲು ನಿರ್ಧರಿಸಿದ್ದ ಅನೇಕ ಕಾಮಗಾರಿಗಳು ಸದ್ಯದ ಶಾಸಕರ ಅವಧಿಯಲ್ಲಿ ಜಾರಿಗೆ ಬರುತ್ತಿವೆ. ಅನೇಕ ಕಡೆ ಕಾಮಗಾರಿ ನಡೆಸದೇ ಬಿಲ್ ಎತ್ತುವಳಿ ಮಾಡಿರುವುದು ಕಂಡುಬಂದಿದೆ. ಗುತ್ತಿಗೆದಾರರ ಲಾಬಿಗೆ ಅಧಿಕಾರಿಗಳು ಹಾಗೂ ಗ್ರಾಪಂ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ದೂರಿದರು.
ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಿಂದ ಶಿವಂಗಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆಯಿಂದ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಅನುದಾನದಡಿ 2009-10ನೇ ಸಾಲಿನಲ್ಲಿ ರು. 2,55,77,000 ಅನುದಾನದಲ್ಲಿ 10ಕಿಮೀ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.
ಮೂವರು ಗುತ್ತಿಗೆದಾರರಿಗೆ ಈ ಕಾಮಗಾರಿ ವಹಿಸಲಾಗಿತ್ತು. 10ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು. ಆದರೆ ಇದುವರೆಗೆ ರು. 15ಲಕ್ಷ ವೆಚ್ಚದ ಕಾಮಗಾರಿ ಮುಗಿದಿದ್ದು, 2011-12ರಲ್ಲಿ ಗುತ್ತಿಗೆದಾರರಿಗೆ ಇಲಾಖೆಯು ರು. 1,14,78600 ಪಾವತಿಸಲಾಗಿದೆ ಎಂದು ಆರೋಪಿಸಿದರು.
ಇದರಲ್ಲಿ ಗುತ್ತಿಗೆದಾರರಾದ ಅಮೀನರೆಡ್ಡಿ ಪಾಟೀಲ್, ವಿರೂಪಾಕ್ಷಿ ಬಳೆ, ಭೀಮನಗೌಡ ಎಂಬುವವರು ಈ ಅಕ್ರಮದಲ್ಲಿ ಶಾಮೀಲಾಗಿದ್ದು, ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿ ದೇವದುರ್ಗ ತಾಲೂಕಿನ ಶಿವಂಗಿ-ಜರದಬಂಡಿ-ಪಿಲಿಗುಂಡ ಗ್ರಾಮದವರೆಗೆ 5.5ಕಿಮೀ ರಸ್ತೆ ನಿರ್ಮಾಣಕ್ಕೆ ರು. 2.15 ಕೋಟಿ ಅನುದಾನ ನಿಗದಿಯಾಗಿದೆ.
ಲೂಟಿ ತಂತ್ರ: ನಾರಾಯಣಪುರ ಬಲದಂಡೆ ಕಾಲುವೆಯ ಮೇಲಿನ ರಸ್ತೆಯನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸುವಂತಿಲ್ಲ. ಆದರೆ ಗುತ್ತಿಗೆದಾರರು ಕಡಿಮೆ ವೆಚ್ಚದಲ್ಲಿ ರಸ್ತೆ ನಿರ್ಮಿಸಿ, ಹಣ ಲೂಟಿ ಮಾಡುವ ತಂತ್ರ ಅನುಸರಿಸುತ್ತಿದ್ದು, ಕಾಲುವೆಯ ಮೇಲೆ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಅನುಮತಿಯನ್ನೂ ಪಡೆದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ತಾಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಎಲ್ಲ ಅಕ್ರಮದಲ್ಲಿ ಶಾಮೀಲಾಗಿದ್ದು, ಕಾಲುವೆಯ ಮೇಲೆ ಎಸ್‌ಎಪಿ ಕಂಪನಿ ಎಂಬ ಸಂಸ್ಥೆಯು ರಸ್ತೆ ನಿರ್ಮಿಸುತ್ತಿದ್ದು, ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂಥ ಸ್ಥಿತಿಯಿದೆ. ಈ ನಿಟ್ಟಿನಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೂ ಸಹ ನಿರಾಸಕ್ತಿ ತೋರುತ್ತಿರುವುದು ಅನುಮಾನಕ್ಕೆ ದಾರಿ ಮಾಡಿದೆ. ಈ ರಸ್ತೆ ನಿರ್ಮಾಣ ಕಾಮಗಾರಿ ತಡೆದು ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದೇವದುರ್ಗ ತಾಲೂಕಿನ ಮುಷ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಪಿಲಿಗುಂಡ ಮತ್ತು ಜರದಬಂಡಿ ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು 2011-12ನೇ ಸಾಲಿನಲ್ಲಿ ಜಲನಿರ್ಮಲ ಯೋಜನೆ ಅಡಿ ರು. 1.14ಕೋಟಿ  ಕಾಮಗಾರಿಗೆ ಚಾಲನೆ ನೀಡಿದ್ದು, ಯೋಜನೆ ಅಡಿ ನಿರ್ಮಿಸಿದ ಕುಡಿಯುವ ನೀರಿನ ಕೆರೆಯ ಕಾಮಗಾರಿ ಕಳಪೆಯಾಗಿದೆ. ನೀರಿನ ತೊಟ್ಟಿಯ ನಿರ್ಮಾಣದಲ್ಲೂ ಅಕ್ರಮ ನಡೆದಿದೆ ಎಂದು ದೂರಿದರು.
ಕಡಿವಾಣ ಹಾಕಿಲ್ಲ: ಈ ಎಲ್ಲ ಅಕ್ರಮಗಳ ಕುರಿತು ಜಿಪಂ ಸಿಇಒ ಡಾ. ಮುದ್ದುಮೋಹನ್ ಅವರ ಗಮನಕ್ಕೆ ತಂದಾಗ ಅವರೂ ಸಹ ರಾಜಕೀಯ ಒತ್ತಡಕ್ಕೆ ಸಿಲುಕಿ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಅಸಹಾಯಕ ಪರಿಸ್ಥಿತಿಯಲ್ಲಿರುವಂತೆ ವರ್ತಿಸಿದ್ದಾರೆ. ಇಂಥ ಅಧಿಕಾರಿಗಳಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಾಗದು. ಹಾಗೆಯೇ ಅಕ್ರಮಗಳಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹಾಗೂ ಜನತಾಂತ್ರಿಕ ರೀತಿಯಲ್ಲಿ ಹೋರಾಟಕ್ಕೆ ಜನಸಂಗ್ರಾಮ ಪರಿಷತ್ ಮುಂದಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಡಾ.ವಿ.ಎ. ಮಾಲಿಪಾಟೀಲ್, ಡಾ. ರಜಾಕ್ ಉಸ್ತಾದ್, ರಾಮನಗೌಡ ಜಾಲಿಬೆಂಚಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement