ಸದಾಶಿವ ಆಯೋಗದ ವರದಿ ಜಾರಿಗೆ ಬೈಕ್ ರ್ಯಾಲಿ: ಬೆಂಬಲ
ಕ.ಪ್ರ.ವಾರ್ತೆ ರಾಯಚೂರು ನ.29
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಡೆಸಲು ಉದ್ದೇಶಿಸಿರುವ ಬೈಕ್ ರ್ಯಾಲಿಗೆ ಮಾದಿಗ ನೌಕರರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ.
ಈಚೆಗೆ ನಗರಜ ಜಹೀರಾಬಾದ್ ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಮಾದಿಗ ನೌಕರರ ಸಭೆಯಲ್ಲಿ ಮಧು ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿರುವ ಬೆಳಗಾವಿ ಬೈಕ್ ರ್ಯಾಲಿಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಡಿ.2ರಂದು ಶಕ್ತಿನಗರದಿಂದ ಬೆಳಗಾವಿಗೆ ಬೈಕ್ ರ್ಯಾಲಿ ಹೊರಡಲಿದೆ. ಬೈಕ್ ರ್ಯಾಲಿಯಲ್ಲಿ ದಲಿತ ನೌಕರರು ಸಾಮೂಹಿಕವಾಗಿ ಭಾಗವಹಿಸುವುದರೊಂದಿಗೆ ಒಂದು ದಿನದ ಸಾಂದರ್ಭಿಕ ರಜೆ ಪಡೆದು ದಿನದ ವೇತನವನ್ನು ಚಳವಳಿಗೆ ನೀಡುವಂತೆ ವೇದಿಕೆ ಪ್ರಮುಖರಾದ ತಾಯಪ್ಪ, ರಾಜೇಂದ್ರ ಜಲ್ದಾರ್, ನರಸಪ್ಪ ಭಂಡಾರಿ, ಸತ್ಯನಾಥ, ಮಧುಚಕ್ರವರ್ತಿ, ಸತ್ಯಪ್ಪ, ಕುಂಟೆಪ್ಪ ಗೌರೀಪುರ, ಜೆ.ಎಲ್.ಈರಣ್ಣ, ರಾಮುಲು, ರವಿ ಅಂಗಡಿ, ಮಲ್ಲೇಶಪ್ಪ ಸೇರಿ ಅನೇಕರು ಮನವಿ ಮಾಡಿದ್ದಾರೆ.
ಕರವೇ ತಾಲೂಕು ಘಟಕಕ್ಕೆ ನೇಮಕ
ಲಿಂಗಸ್ಗೂರು: ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ತಾಲೂಕು ಅಧ್ಯಕ್ಷರನ್ನಾಗಿ ರಾಜಶೇಖರ ಎಸ್. ತಂಬಾಕೆ ಅವರನ್ನು ಜಿಲ್ಲಾಧ್ಯಕ್ಷ ಶ್ರೀಕಾಂತ ಪಾಟೀಲ್ ಗೂಳಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಚನ್ನಬಸವರಾಜ ಕುರಗೋಡ ಇವರ ಶಿಫಾರಸ್ಸಿನ ಮೇರೆಗೆ ಕನ್ನಡ ನೆಲ, ಜಲ, ಭಾಷೆ ಕುರಿತು ಅಭಿಮಾನ ಹೊಂದಿರುವ ರಾಜಶೇಖರ ಎಸ್.ತಂಬಾಕೆ ಅವರನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ.