'ಸುಪ್ರೀಂ' ತೀರ್ಪು ಅನುಷ್ಠಾನಕ್ಕೆ ಆಗ್ರಹ
ರಾಯಚೂರು: ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ವಿವಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಒತ್ತಾಯಿಸಿ ನಗರದಲ್ಲಿ ಗುರುವಾರ ಅನುದಾನಿತ ಶಾಲಾ- ಕಾಲೇಜು ನೌಕರರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿ ಸಿಎಂಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ, ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಅನುದಾನರಹಿತ ಸೇವೆಯನ್ನು ವೇತನ, ಪಿಂಚಣಿ, ರಜೆ ಸೇರಿ ಮತ್ತಿತರೆ ಸೌಲಭ್ಯಗಳಿಗೆ ಪರಿಗಣಿಸುವಂತೆ ನೀಡಿದ ನ್ಯಾಯಾಲಯದ ಆದೇಶ ಜಾರಿಗೆ ತರುವಂತೆ ಆಗ್ರಹಿಸಿದರು.
ರಾಜ್ಯದೆಲ್ಲೆಡೆ ಅನೇಕ ನೌಕರರು ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ದಿನಮಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಇಂಥ ನೌಕರರು ಆರ್ಥಿಕ ಸಂಕಷ್ಟ ಎದುರಿಸುತ್ದಿದ್ದಾರೆ. ನ್ಯಾಯಾಲಯ ತೀರ್ಪು ನೀಡಿ 3 ತಿಂಗಳು ಕಳೆದರೂ ಸರ್ಕಾರ ಅದರ ಯಥಾವತ್ತು ಜಾರಿಗೆ ವಿಳಂಬ ತೋರಿದೆ ಎಂದು ಆರೋಪಿಸಿದರು.
ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ವೇತನ ತಾರತಮ್ಯ ಹಾಗೂ ಕಾಲ್ಪನಿಕ ವೇತನ ಬಡ್ತಿ ಸರಿಪಡಿಸಿ ಸಮಾನತೆ ಕಾಪಾಡಬೇಕು. ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಕನ್ನಡ ಮಾಧ್ಯಮದವರಿಗೆ ಬಡ್ತಿ ನೀಡಬೇಕು. ಅನುದಾನಿತ ಬೋಧಕೇತರ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡುವಂತೆ ಮನವಿ ಮಾಡಿದರು.
2006ರ ನಂತರದಲ್ಲಿ ಸೇವೆಗೆ ಸೇರಿದ ಅನುದಾನಿತ ಶಾಲಾ -ಕಾಲೇಜುಗಳ ನೌಕರರಿಗೂ ನಿವೃತ್ತಿ ವೇತನ ಸೌಲಭ್ಯ ಕಲ್ಪಿಸುವಂತೆ ಧರಣಿ ನಿರತರು ಆಗ್ರಹಿಸಿದರು.
ಗೌರವಾಧ್ಯಕ್ಷ ಸಿದ್ದಲಿಂಗಪ್ಪ ಪಾಟೀಲ್, ಅಧ್ಯಕ್ಷ ಸಂಗಯ್ಯ, ನರಸಪ್ಪ ಭಂಡಾರಿ, ಆರ್. ಸಿ.ದೇಸಾಯಿ, ಶಿವಕುಮಾರ ಇತರರಿದ್ದರು.