31ರಂದು ಜಿಲ್ಲೆಗೆ ಸಚಿವ ಪಾಟೀಲ್
ರಾಯಚೂರು: ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್.ಪಾಟೀಲ್ ಅವರು ಅ.31ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಆಗಮಿಸುವ ಅವರು, ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸುವರು. ಸಂಜೆ 6.30ಕ್ಕೆ ರಾಯಚೂರು ವಾಣಿಜ್ಯೋದ್ಯಮ ಸಂಘದ ಸಮಾರಂಭದಲ್ಲಿ ಭಾಗವಹಿಸಿ, ವಾಸ್ತವ್ಯ ಮಾಡುವರು. ಅ.1ರಂದು ಬೆಳಗ್ಗೆ 9ಕ್ಕೆ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವರು.
ಆಕ್ಷೇಪಣೆ ಅರ್ಜಿ: ಸೂಚನೆ
ದೇವದುರ್ಗ: ಸ್ಥಳೀಯ ಪುರಸಭೆ ವ್ಯಾಪ್ತಿಯ ಸರ್ಕಾರಿ ಜಮೀನು ಮಾಳೆಗಡ್ಡಿ ಪ್ರದೇಶದಲ್ಲಿ ವಾಸಿಸುತ್ತಿರುವ 142 ಫಲಾನುಭವಿಗಳ ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ತಿಳಿಸಿದ್ದಾರೆ. ಫಲಾನುಭವಿಗಳ ಪಟ್ಟಿಗೆ ಆಕ್ಷೇಪಣೆಯಿದ್ದಲ್ಲಿ ಪುರಸಭೆ ಕಾರ್ಯಾಲಯಕ್ಕೆ ನ. 6ರೊಳಗೆ ಕಚೇರಿ ಸಮಯದೊಳಗೆ ಪೂರಕ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಕೋರಲಾಗಿದೆ.
ಹಾವು ಕಡಿತ; ಒಬ್ಬನ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಉಳಿಮೇಶ್ವರ ಗ್ರಾಮದಲ್ಲಿ ಹಾವು ಕಡಿತದಿಂದ ಬಾಲಕ ಮೃತಪಟ್ಟಿದ್ದಾನೆ. ಮೃತನನ್ನು ವಿಜಯಕುಮಾರ್ (14) ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿ ಮೇವು ಕೊಯ್ಯುತ್ತಿದ್ದ ವೇಳೆ ಹಾವು ಕಚ್ಚಿದ್ದು, ಕೂಡಲೇ ಆತನನ್ನು ಚಿಕಿತ್ಸೆಗೆ ಲಿಂಗಸ್ಗೂರು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ; ಒಬ್ಬನ ಸಾವು
ರಾಯಚೂರು: ತಾಲೂಕಿನ ಶಕ್ತಿ ನಗರದ ಬಿಸ್ಮಿಲ್ಲಾ ಹಾರೂಬೂದಿ ಇಟ್ಟಿಗೆ ತಯಾರಿಕೆ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದಾನೆ. ಸೋಫಿಸಾಬ್ ಮೃತಪಟ್ಟವರು. ಈತ ಬಿಸ್ಮಿಲ್ಲಾ ಫ್ಲೈಯಾಶ್ ಬ್ರಿಕ್ಸ್ ಇಂಡಸ್ಟ್ರಿದಲ್ಲಿ ಕಸಗುಡಿಸಿದ ನಂತರ ಬ್ರಿಕ್ಸ್ ಪಂಚಿಂಗ್ ಮಿಶನ್ ಕೈಗೆ ತಗುಲಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಚಿತ್ರನಟ ಡಾ. ರಾಜೇಶ್ಗೆ ಸನ್ಮಾನ
ಗುಲ್ಬರ್ಗ: ತಿಲಕ್ ನಗರ ಕ್ಷೇಮಾಭಿವೃದ್ಧಿ ಸಂಘದಿಂದ ಅ.29ರಂದು ತಿಲಕ್ ನಗರದ ಶಿವಮಂದಿರದಲ್ಲಿ ಸಂಜೆ 6ಕ್ಕೆ ಕಲಾತಪಸ್ವಿ ಹಾಗೂ ಚಲನಚಿತ್ರ ನಟ ಡಾ. ರಾಜೇಶ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ. ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮರತೂರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ಡಾ. ವೀರೇಶ ಆನಂದಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರಾಜೇಶ ನಟಿಸಿದ ಪ್ರಮುಖ ಚಲನಚಿತ್ರಗಳ ಮಧುರ ಗೀತೆಗಳ ಗಾಯನ ಮಾಲಾಶ್ರೀ ಕಡವಿ ಹಾಗೂ ತಂಡವರಿಂದ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಡಾವಣೆಯ ನಾಗರಿಕರು ಭಾಗವಹಿಸಬೇಕೆಂದು ಕಾರ್ಯದರ್ಶಿ ಎಸ್.ಎಸ್. ಹಿರೇಮಠ ಕೋರಿದ್ದಾರೆ.
ಇಂದು ಗ್ರಾಮ ಸಭೆ
ಚಿತ್ತಾಪುರ: ತಾಲೂಕಿನ ಅಲ್ಲೂರ ಬಿ ಗ್ರಾಪಂ ವ್ಯಾಪ್ತಿಯ ಅಲ್ಲೂರ ಕೆ. ಹಾಗೂ ರಾಮತೀರ್ಥ ಗ್ರಾಮಗಳಲ್ಲಿ 2013-14ನೇ ಸಾಲಿನ ಹೆಚ್ಚುವರಿ ಇಂದಿರಾ ಅವಾಸ್ ವಸತಿ ಯೊಜನೆಯಲ್ಲಿ ಪಲಾನುಭವಿಗಳ ಆಯ್ಕೆಯ ಗ್ರಾಮ ಸಭೆಯನ್ನು ಅ.29ರಂದು ನಡೆಯಲಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥರಡ್ಡಿ ಪಾಟೀಲ್ ತಿಳಿಸಿದ್ದಾರೆ.
ಇಂದು ಕಳಸಾರೋಹಣ: ತಾಲೂಕಿನ ಅಲ್ಲೂರ ಬಿ ಗ್ರಾಮದಲ್ಲಿ ದುರ್ಗಾದೇವಿ ಹಾಗೂ ಕಟ್ಟಿದೇವಿಗೆ ಪ್ರತಿ ವರ್ಷದಂತೆ ಕಳಸಾರೋಹಣ ಅ.29ರಂದು ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ಇಂದು ಸನ್ಮಾನ
ಗುಲ್ಬರ್ಗ: ಹೈ.ಕ. ಶಿಕ್ಷಣ ಸಂಸ್ಥೆ ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಉತ್ಕೃಷ್ಟ ಸಾಧನೆಗೈದ ಎಂಆರ್ ಮೆಡಿಕಲ್ ಕಾಲೇಜಿನ ಭೂತಪೂರ್ವ ಸ್ನಾತಕರಿಗೆ ಆತ್ಮೀಯ ಸನ್ಮಾನ ಸಮಾರಂಭವನ್ನು ಅ.29ರಂದು ಬೆ.11.45ಕ್ಕೆ ಬಸವೇಶ್ವರ ಹೊಸ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಖ್ಯಾತ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ. ವಿವೇಕ ಜವಳಿ, ರಾಯಚೂರು ಗ್ರಾಮೀಣ ಶಾಸಕ ಡಾ. ಶಿವರಾಜ ಪಾಟೀಲ್, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಎಚ್.ವೀರಭದ್ರಪ್ಪ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಡಾ. ಶಿವಾನಂದ ಭೀಮಳ್ಳಿ ಅವರಿಗೆ ಸನ್ಮಾನಿಸಲಾಗುವುದು. ಬಾಬುರಾವ ಮಂಗಾಣಿ, ಶರದ ಎಂ. ರಾಂಪುರೆ, ಸಂಪತಕುಮಾರ್ ಲೋಯಾ, ಡಾ. ಭೀಮಾಶಂಕರ ಬಿಲಗುಂದಿ, ಗಂಗಾಧರ ಡಿ. ಮಲಿ, ಸದಸ್ಯರು ಪಾಲ್ಗೊಳ್ಳಲಿದ್ದಾರೆ.